ಗುಮ್ಮಟನಗರಿಯಲ್ಲೂ ಕಂಪು ಬೀರಲಿದೆ ಮೈಸೂರು ಸ್ಯಾಂಡಲ್ ಸೋಪು
ವಿಜಯಪುರದ ಸಾಬೂನು ಘಟಕದಿಂದ ಉತ್ತರ ಕರ್ನಾಟಕಕ್ಕೆ ಮಾತ್ರವಲ್ಲದೆ, ಮಹಾರಾಷ್ಟ್ರ ಕ್ಕೂ ಇಲ್ಲಿಂದಲೇ ಸರಬರಾಜು ಮಾಡುವ ಕೆಲಸ ಮಾಡಲಾಗುವುದು ಎಂದು ಪ್ರಕಟಿಸಿದರು.;
ಮೈಸೂರಿನ ಸಾಬೂನು ತನ್ನ ಗಂಧದ ಪರಿಮಳವನ್ನು ದಕ್ಷಿಣ ಕರ್ನಾಟಕದಿಂದ ದೂರದ ಕಲ್ಯಾಣ ಕರ್ನಾಟಕದ ಗುಮ್ಮಟ ನಗರಿಯಲ್ಲೂ ಪಸರಿಸಲಿದೆ. ಜತೆಗೆ ಉದೈೋಗ ಸೃಷ್ಟಿಯತ್ತಲೂ ನೋಟ ಬೀರಲಿದೆ.
ಹೌದು. ಮೈಸೂರು ಮಹಾರಾಜರ ಕಾಲದಿಂದಲೂ ಜಗತ್ತಿನಾದ್ಯಂತ ತನ್ನ ಪರಿಮಳ ಸೂಸುತ್ತಿರುವ ಮೈಸೂರು ಸ್ಯಾಂಡಲ್ ಸೋಪು, ಇನ್ನು ಗುಮ್ಮಟ ನಗರಿಯೆಂದೇ ಖ್ಯಾತವಾಗಿರುವ ವಿಜಯಪುರ ಅಥವಾ ಬಿಜಾಪುರದಲ್ಲೂ ತನ್ನ ಕಂಪು ಬೀರಲಿದೆ.
ಈ ಸಂಬಂಧ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ವಿಜಯಪುರದ ಹೊರವಲಯದ ಇಟ್ಟಂಗಿಹಾಳ ಬಳಿ 10 ಎಕರೆ ಜಾಗದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಆರಂಭಿಸಲಾಗುವುದು. ಇದರಿಂದ ಸುಮಾರು 400 ಮಂದಿಗೆ ಉದ್ಯೋಗ ಸಿಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶನಿವಾರ ಹೇಳಿದ್ದಾರೆ.
ಇಲ್ಲಿ ಕೆಎಸ್‌ಡಿಎಲ್ ಏರ್ಪಡಿಸಿರುವ ಸಾಬೂನು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರದ ಸಾಬೂನು ಘಟಕದಿಂದ ಉತ್ತರ ಕರ್ನಾಟಕಕ್ಕೆ ಮಾತ್ರವಲ್ಲದೆ, ಮಹಾರಾಷ್ಟ್ರ ಕ್ಕೂ ಇಲ್ಲಿಂದಲೇ ಸರಬರಾಜು ಮಾಡುವ ಕೆಲಸ ಮಾಡಲಾಗುವುದು ಎಂದು ಪ್ರಕಟಿಸಿದರು.
ಕೆಎಸ್‌ಡಿಎಲ್ ಮೊದಲು ನಷ್ಟದಲ್ಲಿತ್ತು. ಈಗ ಮೂರು ಪಾಳಿಯಲ್ಲಿ ಕೆಲಸ ನಡೆಯುತ್ತಿದ್ದು, ಸಂಸ್ಥೆಯು ಲಾಭದ ಹಳಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ 20 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ ಬೆಂಗಳೂರಿನಲ್ಲೂ ಕೆಎಸ್‌ಡಿಎಲ್ ಕಾರ್ಖಾನೆ ವಿಸ್ತರಣೆ ಮತ್ತು ಆಧುನೀಕರಣ ನಡೆಯುತ್ತಿದೆ ಎಂದು ಪಾಟೀಲ್ ಹೇಳಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಸಂಪೂರ್ಣ ಗಂಧದೆಣ್ಣೆಯಿಂದ ತಯಾರಿಸುವ ಜಗತ್ತಿನ ಏಕೈಕ ಸಾಬೂನು ಸಂಸ್ಥೆ. 1919 ರಲ್ಲಿ ಆರಂಭವಾದ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ರು ಬೆಂಗಳೂರಿನಲ್ಲಿ ಸ್ಥಾಪಿಸಿದ ಸಂಸ್ಥೆ. ಬರುವ ದಿನಗಳಲ್ಲಿ ಸಂಸ್ಥೆಯ ಗತವೈಭವ ಮರುಕಳಿಸುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಿರಾಣಿ ಅಂಗಡಿ, ವಿಮಾನ ನಿಲ್ದಾಣ, ವಿದೇಶಗಳ ಮಳಿಗೆ ಹೀಗೆ ಎಲ್ಲ ಕಡೆಯೂ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಸಂಸ್ಥೆಯ ಇತರ ಉತ್ಪನ್ನಗಳು ದೊರೆಯುವಂತೆ ಮಾಡಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯದ ವಿಶಿಷ್ಟ ಉತ್ಪನ್ನಗಳ ಮಾರಾಟಕ್ಕೆಂದೇ ಕಲಾಲೋಕ ಮಳಿಗೆ ಸ್ಥಾಪಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ಸಿ ಎಸ್ ನಾಡಗೌಡ ಕೂಡ ಸಂಸ್ಥೆಯ ಏಳ್ಗೆಗೆ ಶ್ರಮಿಸುತ್ತಿದ್ದಾರೆ ಎಂದು ಅವರು ನುಡಿದಿದ್ದಾರೆ.