Mysore MUDA Scam | ರಾಜ್ಯ ಸರ್ಕಾರವನ್ನೇ ಅಮಾನತ್ತಿನಲ್ಲಿಡಿ: ರಾಜ್ಯಪಾಲರಿಗೆ ಎಚ್ ವಿಶ್ವನಾಥ್ ಸಲಹೆ

Update: 2024-08-22 13:17 GMT

ಮುಡಾ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಆರೋಪ ಕೇಳಿ ಬಂದಿರುವುದರಿಂದ ಇಡೀ ರಾಜ್ಯ ಸರ್ಕಾರವನ್ನೇ ಅಮಾನತ್ತಿನಲ್ಲಿಡಿ ಎಂದು ರಾಜ್ಯಪಾಲರಿಗೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

ಗುರುವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ʻʻಮುಡಾ ಹಗರಣ ಗಬ್ಬೆದ್ದು ನಾರುತ್ತಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಮೇಲೆ ಆಪಾದನೆ ಕೇಳಿ ಬಂದಿದೆ. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ದ ತನಿಖೆಗೆ ಅನುಮತಿ ನೀಡಿದ್ದರು. ಸಂಪುಟ ಸಭೆ ಕರೆದು ರಾಜ್ಯಪಾಲರ ಕ್ರಮದ ವಿರುದ್ದ ನಿರ್ಣಯ ಕೈಗೊಂಡಿದ್ದು ಯಾಕೆ? ವಾಲ್ಮೀಕಿ ಹಗರಣದಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಸರ್ಕಾರವನ್ನು ಅಮಾನತ್ತಿನಲ್ಲಿಡಿʼʼ ಎಂದು ಆಗ್ರಹಿಸಿದ್ದಾರೆ.

ʻʻಈ ಹಿಂದೆ ವೀರೇಂದ್ರ ಪಾಟೀಲ್ ಸರ್ಕಾರವನ್ನು ಅಮಾನತ್ತಿನಲ್ಲಿಟ್ಟು ವಿಚಾರಣೆ ನಡೆಸಲಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ ಬಂಗಾರಪ್ಪ ಸಿಎಂ ಆದರು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಸಿದ್ದರಾಮಯ್ಯ, ಕುಮಾರಸ್ವಾಮಿ, ನನಗೆ ಎಲ್ಲರಿಗೂ ಒಂದೇ ಕಾನೂನು ಅನ್ವಯ. ಸಿದ್ದರಾಮಯ್ಯ ಪ್ರಕರಣದಲ್ಲಿ ಇನ್ನಷ್ಟೇ ತನಿಖೆ ಆಗಬೇಕಿದೆ. ಆದರೆ ಕುಮಾರಸ್ವಾಮಿ ಪ್ರಕರಣದಲ್ಲಿ ತನಿಖೆ ಆಗಿ ವರದಿ ಬಂದಿದೆ. ಕುಮಾರಸ್ವಾಮಿ ಅವರ ವಿರುದ್ಧವು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡದೆ ಯಾಕೆ ಇಟ್ಟುಕೊಂಡಿದ್ದೀರಾ?ʼʼ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.

ʻʻರಾಷ್ಟ್ರದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ. ಮಹಾರಾಜರ ಕಾಲದಿಂದ ಕಾಪಾಡಿಕೊಂಡು ಬಂದ ಶ್ರೀಗಂಧದ ವಾಸನೆ ಈಗ ದುರ್ನಾತ ಬೀರುತ್ತಿದೆ. ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಕೆಟ್ಟ ಭಾಷೆಯಲ್ಲಿ ಹೀಗಳೆಯುವುದು ಗೌರವ ತರುವುದಿಲ್ಲ. ಕೇಂದ್ರ ಸಚಿವ ಎಚ್. ಡಿ‌ ಕುಮಾರಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿರುವ ಭಾಷೆ ಸರಿಯಿಲ್ಲʼʼ ಎಂದು ವಿಶ್ವನಾಥ್ ಕಿಡಿಕಾರಿದರು.

ʻʻಸಿದ್ದರಾಮಯ್ಯ ಕೈಕೆಳಗೇ ದಾಖಲೆ ತಿದ್ದುವ ಕೆಲಸ ನಡೆಯುತ್ತಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್‌ ನಲ್ಲಿ ಬಂದು ದಾಖಲೆಗಳನ್ನು ಹೊತ್ತೊಯ್ದರು. ಇದು ಕಳ್ಳತನ. ಸಿಎಂ ಪತ್ನಿಗೆ ಸಂಬಂಧಪಟ್ಟ ದಾಖಲೆಗಳಿಗೆ ವೈಟ್ನರ್ ಹಾಕಲಾಗುತ್ತಿದೆ. ರಾಜ್ಯದಲ್ಲಿ ಯಾವಾಗಲೂ ಇಂತಹ ಪ್ರಕರಣಗಳು ನಡೆದಿರಲಿಲ್ಲ. ಮುಡಾ ಆಯುಕ್ತರಾಗಿದ್ದ ಜಿ ಟಿ ದಿನೇಶ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕುʼʼ ಎಂದು ಅವರು ಆಗ್ರಹಿಸಿದರು.

Tags:    

Similar News