Mysore MUDA Scam | ಪ್ರತಿಪಕ್ಷಗಳ ವಿರುದ್ಧ ಪ್ರತ್ಯಾಸ್ತ್ರ ಪ್ರಯೋಗಕ್ಕೆ ಮುಂದಾದ ಸರ್ಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ನುಂಗಲಾರದ ತುತ್ತಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಅಕ್ರಮವಾಗಿ ನಿವೇಶನ ಹಗರಣದಲ್ಲಿ ಮುಗಿಬಿದ್ದಿರುವ ಪ್ರತಿಪಕ್ಷಗಳ ವಿರುದ್ಧ ಪ್ರತ್ಯಾಸ್ತ್ರ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ನುಂಗಲಾರದ ತುತ್ತಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಅಕ್ರಮವಾಗಿ ನಿವೇಶನ ಹಗರಣದಲ್ಲಿ ಮುಗಿಬಿದ್ದಿರುವ ಪ್ರತಿಪಕ್ಷಗಳ ವಿರುದ್ಧ ಪ್ರತ್ಯಾಸ್ತ್ರ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ.
ಮುಡಾದಿಂದ 50-50ರ ಅನುಪಾತದಲ್ಲಿ ನಿವೇಶನ ಪಡೆದಿರುವ ಎಲ್ಲರ ಹೆಸರನ್ನು ಜಾಹೀರಾತು ಮೂಲಕ ಬಹಿರಂಗಪಡಿಸಲು ಮುಂದಾಗಿರುವ ಸರ್ಕಾರ, ಆ ಮೂಲಕ ಪ್ರತಿಪಕ್ಷಗಳ ಮುಖಂಡರು ಹಾಗೂ ಶಾಸಕರು ಮತ್ತು ಅವರ ಆಪ್ತರ ಬಂಡವಾಳ ಬಯಲು ಮಾಡುವ ತಂತ್ರ ಹೆಣೆದಿದೆ.
ಈ ಕುರಿತು ಈಗಾಗಲೇ ಸಿದ್ದರಾಮಯ್ಯ ಆಪ್ತ ಹಾಗೂ ಸಚಿವ ಡಾ ಎಚ್ ಸಿ ಮಹದೇವಪ್ಪ ಮೈಸೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಮುಡಾದಲ್ಲಿ ಶೇ.50-50 ಅನುಪಾತದಲ್ಲಿ ಬದಲಿ ನಿವೇಶನ ಪಡೆದವರ ಪಟ್ಟಿ ಬಿಡುಗಡೆ ಮಾಡಲಾಗುವುದು. ಯಾವ ಪಕ್ಷದವರೇ ಇರಲಿ, ಅಧಿಕಾರಿಗಳಿರಲಿ, ಪ್ರಭಾವಿಗಳಿರಲಿ, ಎಲ್ಲರ ಪಟ್ಟಿಯನ್ನೂ ಸಾರ್ವಜನಿಕವಾಗಿ ಎಲ್ಲರಿಗೂ ಗೊತ್ತಾಗುವಂತೆ ಜಾಹೀರಾತು ಮೂಲಕವೇ ಬಹಿರಂಗಪಡಿಸಲಾಗುವುದು” ಎಂದು ಹೇಳಿದ್ದಾರೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹದೇವಪ್ಪ ಅವರ ಈ ಹೇಳಿಕೆ, ಸಹಜವಾಗೇ ಮೈಸೂರು ಭಾಗದ ಜೆಡಿಎಸ್ ಮತ್ತು ಬಿಜೆಪಿ ಪಾಳೆಯದಲ್ಲಿ ನಡುಕ ಹುಟ್ಟಿಸಿದೆ. ಅದರಲ್ಲೂ ಈ ಹಿಂದೆ ಶೇ.50-50ರ ಅನುಪಾತದ ನಿವೇಶನ ಹಂಚಿಕೆ ನಿಯಮ ಜಾರಿಗೆ ಬಂದ ಬಳಿಕ ಮುಡಾ ಅಧ್ಯಕ್ಷರಾದವರು, ಸಮಿತಿಯ ಸದಸ್ಯರಾದವರು, ಉಸ್ತುವಾರಿ ಸಚಿವರಾಗಿದ್ದವರು, ಸಚಿವರು, ಶಾಸಕರು ಮತ್ತು ಮೈಸೂರು ವಿಳಾಸ ನೀಡಿದ ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡವರ ನಡುವೆ ಈ ಹೇಳಿಕೆ ಸಂಚಲನ ಸೃಷ್ಟಿಸಿದೆ.
Also Read - Mysore MUDA Scam | ನಿವೇಶನ ಹಂಚಿಕೆ ಹಗರಣ: ಮುಖ್ಯಮಂತ್ರಿಗಳಿಗೆ ಐದು ಪ್ರಶ್ನೆ
ಉಸ್ತುವಾರಿ ಸಚಿವರ ಈ ಹೇಳಿಕೆಗೂ ಮುನ್ನಾ ದಿನ ಮೈಸೂರು ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾಗಿದ್ದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕೂಡ ಮುಡಾ ಅಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷದ ಮುಖಂಡರೂ ಫಲಾನುಭವಿಗಳಿದ್ದಾರೆ. ಎಲ್ಲರೂ ಅಕ್ರಮದ ಪಾಲುದಾರರೇ ಎಂದು ಹೇಳಿದ್ದರು.
ಮುಡಾ ಸಭೆಗಳಲ್ಲಿ ಮೈಸೂರು ಮತ್ತು ಅಕ್ಕಪಕ್ಕದ ಜಿಲ್ಲೆಗಳ ಶಾಸಕರ ಶಿಫಾರಸು ಕಡತಗಳೇ ಹೆಚ್ಚು ಇರುತ್ತಿದ್ದವು. ಬಹಳಷ್ಟು ಮಂದಿ ಮೈಸೂರು ವಾಸದ ವಿಳಾಸ ನೀಡಿ ಸಮಿತಿಯಲ್ಲಿ ಸ್ಥಾನ ಗಿಟ್ಟಿಸುವ, ಮುಡಾದಲ್ಲಿ ಪ್ರಭಾವ ಬೀರುವ ಕೆಲಸ ಮಾಡಿದ್ದಾರೆ. ಸರ್ಕಾರ ಎಲ್ಲರ ಹೆಸರನ್ನು ಬಹಿರಂಗಪಡಿಸಲಿ ಎಂದಿದ್ದರು. ಇದೀಗ ಡಾ ಮಹದೇವಪ್ಪ ಅಧಿಕೃತವಾಗಿಯೇ ಘೋಷಿಸಿದ್ದು, ಸದ್ಯವೇ ಸಾವಿರಾರು ಕೋಟಿ ರೂಪಾಯಿ ಅಕ್ರಮದ ಪಾಲುದಾರರ ಹೆಸರುಗಳು ಬಹಿರಂಗವಾಗುವ ಸಾಧ್ಯತೆ ಇದೆ.
ಮುಡಾ ಸಮಿತಿ ರದ್ದು ಸಾಧ್ಯತೆ
ಈ ನಡುವೆ ಮುಡಾ ಸಮಿತಿಯ ಕುರಿತೂ ಹೇಳಿಕೆ ನೀಡಿರುವ ಡಾ ಮಹದೇವಪ್ಪ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡಿರುವ 13 ಮಂದಿಯ ಮುಡಾ ಸಮಿತಿಯನ್ನು ರದ್ದುಪಡಿಸುವ ಬಗ್ಗೆ ಚಿಂತನೆ ನಡೆದಿದೆ ಎಂದಿದ್ದಾರೆ.
ಸದ್ಯ ಸಮಿತಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿದಂತೆ 13 ಮಂದಿ ಇದ್ದಾರೆ. ಈ ಸಮಿತಿಯನ್ನು ರದ್ದುಪಡಿಸಿ ಹೊಸ ಸಮಿತಿ ರಚಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದು, ಅವರು ಪೂರಕವಾಗಿ ಸ್ಪಂದಿಸಿದ್ದಾರೆ. 13 ಮಂದಿಯ ಬದಲಿಗೆ ಈ ಹಿಂದೆ ಇರುತ್ತಿದ್ದಂತೆ ಕೇವಲ 3-4 ಮಂದಿಯನ್ನು ಒಳಗೊಂಡ ಚಿಕ್ಕ ಸಮಿತಿ ರಚಿಸುವ ಯೋಚನೆ ಇದೆ ಎಂದೂ ಅವರು ಹೇಳಿದ್ದಾರೆ.