ರಾಜಾತಿಥ್ಯ ಎಫೆಕ್ಟ್ | ಬಳ್ಳಾರಿಗೆ ದರ್ಶನ್, ಸಹಚರರು ವಿವಿಧ ಜೈಲಿಗೆ: ಪರಪ್ಪನ ಅಗ್ರಹಾರದಲ್ಲೇ ಪವಿತ್ರಾ
ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರ ಮನವಿ ಮೇರೆಗೆ 24ನೇ ಎಸಿಎಂಎಂ ನ್ಯಾಯಾಲಯ ಈ ಆದೇಶ ನೀಡಿದ್ದು, ಕೊಲೆ ಆರೋಪಿ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸೂಚನೆ ನೀಡಿದೆ. ದರ್ಶನ್‌ನ ಮ್ಯಾನೇಜರ್ ನಾಗರಾಜ್‌ನನ್ನು ಗುಲ್ಬರ್ಗ ಜೈಲಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.;
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮವಾಗಿದ್ದ ಕೊಲೆ ಆರೋಪಿ ಚಿತ್ರನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಿ ಬೆಂಗಳೂರಿನ ನ್ಯಾಯಾಲಯ ಮಂಗಳವಾರ ಸಂಜೆ ಆದೇಶ ನೀಡಿದೆ.
ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರ ಮನವಿ ಮೇರೆಗೆ 24ನೇ ಎಸಿಎಂಎಂ ನ್ಯಾಯಾಲಯ ಈ ಆದೇಶ ನೀಡಿದ್ದು, ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ. ದರ್ಶನ್‌ನ ಆತ್ಮೀಯ ಹಾಗೂ ಮ್ಯಾನೇಜರ್ ನಾಗರಾಜ್‌ನನ್ನು ಗುಲ್ಬರ್ಗ ಜೈಲಿಗೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಅನುಕುಮಾರ್ ಮತ್ತು ದೀಪಕ್ ಕೂಡಾ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿಯೇ ಇರಲಿದ್ದಾರೆ.
ಹಾಗೆಯೇ ದರ್ಶನ್‌ನ ಗೆಳತಿ ಪವಿತ್ರಾ ಗೌಡ ಮಾತ್ರ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಿಸಲು ನ್ಯಾಯಾಲಯ ಸೂಚಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಮಹಿಳಾ ವಿಭಾಗ ಇರುವುದರಿಂದ ರಕ್ಷಣೆಯ ದೃಷ್ಟಿಯಿಂದ ಆಕೆಯನ್ನು ಪರಪ್ಪನ ಅಗ್ರಹಾರದಲ್ಲಿಯೇ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪವನ್, ರಾಘವೇಂದ್ರ ಮತ್ತು ನಂದೀಶ್ ಅವರನ್ನು ಮೈಸೂರು ಜೈಲಿಗೆ, ಜಗದೀಶ್, ಲಕ್ಷ್ಮಣ ಅವರನ್ನು ಶಿವಮೊಗ್ಗ ಜೈಲಿಗೆ, ಧನರಾಜ್‌ನನ್ನು ಧಾರವಾಡ ಜೈಲಿಗೆ, ವಿನಯ್‌ನನ್ನು ವಿಜಯಪುರ ಜೈಲಿಗೆ, ಪ್ರದೋಶ್‌ನನ್ನು ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ರವಿ, ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲಿ ಇದ್ದಾರೆ.
ಸ್ಥಳಾಂತರದ ಹಿನ್ನೆಲೆ
ರೇಣುಕಾಸ್ವಾಮಿ ಭೀಕರ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಜೈಲಿನಲ್ಲಿ ನಟ ದರ್ಶನ್ ಕುಖ್ಯಾತಿ ರೌಡಿಯೊಂದಿಗೆ ಮೋಜು ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದವು. ವೈರಲ್ ಆಗಿರುವ ಫೋಟೋದಿಂದ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆಯಾ ಎಂಬ ಜನಾಕ್ರೋಶ ಎದ್ದಿತ್ತು. ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಜೈಲಿನ ಮೇಲ್ವಿಚಾರಕರು, ಜೈಲರ್ ಸೇರಿದಂತೆ ಒಂಭತ್ತು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಿತ್ತು.
ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿಸಿದ ಆರೋಪ ನಟ ದರ್ಶನ್ ಮೇಲಿದೆ. ಪರಪ್ಪನ ಅಗ್ರಹಾರದ ಸ್ಪೆಷಲ್ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ದರ್ಶನ್ ಅವರು ಸ್ಪೆಷಲ್ ಬ್ಯಾರಕ್‌ನಿಂದ ಹೊರಬಂದು, ಕುಖ್ಯಾತ ರೌಡಿ ಮತ್ತು ತನ್ನಿಬ್ಬರು ಸಹಚರರ ಜೊತೆ ಕುಳಿತು ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿತ್ತು. ಜತೆಗೆ ಆತ ಕಾಫಿ ಮಗ್ ಹಾಗೂ ಸಿಗರೇಟು ಹಿಡಿದುಕೊಂಡಿರುವುದು ಕಂಡುಬಂದಿತ್ತು.
ವೈರಲ್ ಆಗಿರುವ ಚಿತ್ರದಲ್ಲಿ ನಟ ದರ್ಶನ್ ರೌಡಿಶೀಟರ್‌ಗಳ ಸಹವಾಸ ಮಾಡಿದ್ದಾರೆ ಎಂಬ ಅನುಮಾನ ಮೂಡಿತ್ತು. ದರ್ಶನ್ ಜೊತೆ ಫೋಟೋದಲ್ಲಿ ಇರುವುದು ರೌಡಿ ಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗ. ವಿಲ್ಸನ್ ಗಾರ್ಡನ್ ನಾಗ ಬೆಂಗಳೂರು ದಕ್ಷಿಣ ವಿಭಾಗದ ರೌಡಿಶೀಟರ್. ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ ನಾಗ ಜೈಲುಪಾಲಾಗಿದ್ದಾನೆ. ಕಳೆದ ಆಗಸ್ಟ್‌ನಲ್ಲಿ ವಿಲ್ಸನ್ ಗಾರ್ಡನ್ ನಾಗ ಶರಣಾಗಿದ್ದ. ಆತನ ವಿರುದ್ಧ ಕೋಕಾ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿತ್ತು. ದರ್ಶನ್ ಜೈಲಿಗೆ ಹೋದಾಗ ವಿಲ್ಸನ್ ಗಾರ್ಡನ್ ನಾಗನ ಭೇಟಿಗೆ ಮುಂದಾಗಿದ್ದ. ಈಗ ನಾಗನ ಜೊತೆ ಟೀ, ಸಿಗರೇಟ್ ಶೇರ್ ಮಾಡುತ್ತಿರುವ ದರ್ಶನ್ ಫೋಟೋ ಮತ್ತು ವಿಡಿಯೋ ಹೊರಬಂದಿತ್ತು.
ದರ್ಶನ್ ಪಕ್ಕದಲ್ಲೇ ಕುಳಿತಿರುವ ಮತ್ತೊಬ್ಬ ಆರೋಪಿ ನಾಗರಾಜ್. ಈತ ದರ್ಶನ್ ಮ್ಯಾನೇಜರ್. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 11ನೇ ಆರೋಪಿಯಾಗಿ ನಾಗರಾಜ್ ಜೈಲು ಸೇರಿದ್ದಾನೆ. ದರ್ಶನ್ ಮಾಡುವ ಪಾರ್ಟಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಈತ ಜೊತೆಗಿರುತ್ತಿದ್ದ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಾಗ ಕಾಲಿನಿಂದ ಒದ್ದಿದ್ದು ಇದೇ ನಾಗ. ಹಾಗಾಗಿ ರೇಣುಕಾಸ್ವಾಮಿ ಬರ್ಬರ ಹತ್ಯೆ ಕೇಸ್‌ನಲ್ಲಿ ನಾಗನದ್ದು ಪ್ರಮುಖ ಪಾತ್ರವಿತ್ತು ಎನ್ನಲಾಗಿದೆ.