ಸಚಿವ ಸ್ಥಾನ ನಿರಾಕರಣೆ| ಬಿಜೆಪಿ ನಾಯಕರ ವಿರುದ್ಧ ಸಂಸದ ರಮೇಶ್‌ ಜಿಗಜಿಣಗಿ ಅಸಮಾಧಾನ

Update: 2024-06-22 01:00 GMT

ʻʻಜೂನ್ 22ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿರುವ ರಾಜ್ಯದ ಸಂಸದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿದೆ. ಆದರೆ, ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಇಚ್ಛೆ ಇಲ್ಲ. ವಿಜಯಪುರದಲ್ಲೇ ನೂರಾರು ಜನರು ಬಂದು ನಿತ್ಯ ಸನ್ಮಾನ ಮಾಡುತ್ತಿದ್ದಾರೆ. ಅವರ ಸನ್ಮಾನದ ಎದುರು ಪಕ್ಷದ ಸನ್ಮಾನ ನನಗೆ ಬೇಡʼʼ ಎಂದು ವಿಜಯಪುರ ಎಸ್.ಸಿ ಮೀಸಲು ಲೋಕಸಭಾ ಕ್ಷೇತ್ರದ ಸಂಸದ ರಮೇಶ ಜಿಗಜಿಣಗಿ ಅವರು ಪಕ್ಷದ ನಾಯಕರು ವಿರುದ್ಧ ಅಸಮಾದಾನ ಹೊರಹಾಕಿದ್ದಾರೆ.

ಸಚಿವ ಸ್ಥಾನ ಸಿಗದಿರುವ ಕಾರಣಕ್ಕೆ ಬೇಸರಗೊಂಡಿರುವ ಸಂಸದ ರಮೇಶ್‌ ಜಿಗಜಿಣಗಿ ಅವರು ಇಂದು (ಶುಕ್ರವಾರ) ಮಾಧ್ಯಮದವರೊಂದಿಗೆ ಮಾತನಾಡಿದ್ದು, ʻʻಸತತ ಏಳು ಬಾರಿ ಲೋಕಸಭೆ ಸದಸ್ಯನಾಗಿ ಆಯ್ಕೆಯಾಗಿರುವ ನನಗೆ ಕೇಂದ್ರ ಸಚಿವನಾಗುವ ಎಲ್ಲ ಅರ್ಹತೆ ಮತ್ತು ಹಿರಿತನ ಇತ್ತು. ಆದರೆ, ರಾಜ್ಯ ಬಿಜೆಪಿ ನಾಯಕರ ಒಳ ರಾಜಕೀಯದಿಂದಾಗಿ ಅವಕಾಶ ತಪ್ಪಿತುʼʼ ಎಂದು ಪಕ್ಷದ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ʻʻನಾನು ಸಚಿವನಾಗಬೇಕು ಎಂಬುದು ಸಮಾಜದ ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಆಶಯವಾಗಿತ್ತು. ರಾಜ್ಯದ ಬಿಜೆಪಿ ನಾಯಕರು ನನ್ನ ಹೆಸರು ಸೂಚಿಸುತ್ತಾರೆ ಎಂಬ ವಿಶ್ವಾಸ ಇತ್ತು. ಅವರ ಜವಾಬ್ದಾರಿಯೂ ಇತ್ತು. ಆದರೆ, ಯಾರೊಬ್ಬರೂ ನನ್ನ ಪರವಾಗಿ ಬಾಯಿ ಬಿಡಲಿಲ್ಲ. ಈ ವಿಷಯದಲ್ಲಿ ತಪ್ಪು ಮಾಡಿದ್ದಾರೆ. ಹಿರಿಯ ದಲಿತ ನಾಯಕನಾದ ನನ್ನನ್ನು ಬಿಜೆಪಿಯಲ್ಲಿ ಬೆಳೆಯದಂತೆ ತುಳಿಯುವ ಕೆಲಸ ಪಕ್ಷದೊಳಗೆ ನಡೆದಿದೆ. ಇದಕ್ಕೆ ಪಕ್ಷದ ರಾಷ್ಟ್ರ ನಾಯಕರು ಕಾರಣವಲ್ಲ, ರಾಜ್ಯದ ನಾಯಕರು ಕಾರಣʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʻʻನನ್ನನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿರುವ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರದ ಯಾರನ್ನೂ ಹೊಣೆ ಮಾಡಲು ಬಯಸುವುದಿಲ್ಲ. ಈ ವಿಷಯದಲ್ಲಿ ನನ್ನ ಹೆಸರನ್ನು ಶಿಫಾರಸು ಮಾಡದೇ ರಾಜ್ಯ ಬಿಜೆಪಿ ನಾಯಕರು ತಪ್ಪು ಮಾಡಿದ್ದಾರೆ. ಇದು ಬಹಳ ಅಸಹ್ಯ ಎನಿಸುತ್ತದೆ. ಮಂತ್ರಿ ಮಾಡಿದರೆ ಚಾರಾಣೆ, ಮಾಡದಿದ್ದರೆ ಬಾರಾಣೆ” ಎಂದು ಗುಡುಗಿದ್ದಾರೆ.

ʻʻರಾಜ್ಯದಲ್ಲಿ ಲಿಂಗಾಯತ ಸಮುದಾಯ ಹೆಚ್ಚಿರುವುದು ಉತ್ತರ ಕರ್ನಾಟಕದಲ್ಲಿ ಆದರೆ, ಲಿಂಗಾಯತ ಸಮುದಾಯ ಕಡಿಮೆ ಇರುವ ದಕ್ಷಿಣ ಕರ್ನಾಟಕ ಭಾಗದವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಪಕ್ಷದೊಳಗಿನ ಒಳ ರಾಜಕೀಯದಿಂದ ಇಂತಹ ಅನಾಹುತ ಆಗಿದೆ. ಪಕ್ಷದ ಹಿರಿಯರು ಈ ಬಗ್ಗೆ ಗಮನಿಸಬೇಕುʼʼ ಎಂದು ಎಚ್ಚರಿಕೆ ನೀಡಿದರು.

Tags:    

Similar News