ಸಿಜೇರಿಯನ್‌ ಹೆರಿಗೆ | ತುಮಕೂರು, ಚಿತ್ರದುರ್ಗ ಮುಂದೆ: ಖಾಸಗಿ ಆಸ್ಪತ್ರೆಗಳಿಗೆ ಇಲ್ಲ ಕಡಿವಾಣ

ರಾಜ್ಯದಲ್ಲಿ ಸಿಜೇರಿಯನ್‌ ಹೆರಿಗೆಗಳಿಗೆ ಖಾಸಗಿ ಆಸ್ಪತ್ರೆಗಳು ಹೆಚ್ಚು ಉತ್ತೇಜನ ನೀಡುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ರಾಜ್ಯದಲ್ಲಿ ನಡೆದ ಸಿಜೇರಿಯನ್‌ ಶಸ್ತ್ರಚಿಕಿತ್ಸೆಗಳಲ್ಲಿ ಶೇ 61 ರಷ್ಟು ಖಾಸಗಿ ಆಸ್ಪತ್ರೆಗಳಲ್ಲೇ ನಡೆದಿವೆ.;

Update: 2024-12-17 04:30 GMT

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗಿಂತ ಸಿಜೇರಿಯನ್‌ ಹೆರಿಗೆ ಪ್ರಮಾಣ ದಿನೇದಿನೆ ಹೆಚ್ಚುತ್ತಿದೆ. ಹೆರಿಗೆ ನೋವು, ಸುರಕ್ಷಿತ ತಾಯ್ತನ, ತಾಯಿ-ಮಗುವಿನ ಸುರಕ್ಷತೆಯ ಮನೋಭಾವ ಸೇರಿದಂತೆ ವಿವಿಧ ಕಾರಣಗಳಿಂದ ಹೆಚ್ಚು ಮಹಿಳೆಯರು ಸಿಜೇರಿಯನ್‌ ಹೆರಿಗೆಗೆ ಒಳಗಾಗುತ್ತಿದ್ದಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ಸಿಜೇರಿಯನ್‌ ಹೆರಿಗೆಯನ್ನೇ ದಂಧೆ ಮಾಡಿಕೊಂಡಿವೆ ಎಂಬ ಸಂಗತಿ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಹಜ ಹೆರಿಗೆಯ ಲಕ್ಷಣಗಳಿದ್ದರೂ ಗರ್ಭಿಣಿಯರಲ್ಲಿ ಆತಂಕ ಮೂಡಿಸಿ, ಸಿಜೇರಿಯನ್‌ಗೆ ಪ್ರೋತ್ಸಾಹಿಸಲಾಗುತ್ತದೆ. ಆದ್ದರಿಂದಲೇ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಿಜೇರಿಯನ್‌ ಹೆರಿಗೆ ಪ್ರಮಾಣ ಶೇ.61 ರಷ್ಟು ದಾಖಲಾಗಿದೆ. ಸಿಜೇರಿಯನ್‌ ಹೆರಿಗೆ ಮೂಲಕ ಕಡಿಮೆ ಕೆಲಸದಲ್ಲಿ ಅಧಿಕ ಹಣ ಬಾಚುವ ಮಾರ್ಗವನ್ನು ಖಾಸಗಿ ಆಸ್ಪತ್ರೆಗಳು ಕಂಡುಕೊಂಡಿವೆ ಎಂದು ಸ್ವತಃ ರಾಜ್ಯ ಆರೋಗ್ಯ ಸಚಿವರೇ ಸದನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. 

ಆದರೆ, ವಾಸ್ತವವಾಗಿ ರಾಜ್ಯ ಸರ್ಕಾರವು ಸಹಜ ಹೆರಿಗೆ ಉತ್ತೇಜಿಸಲು ಸಾಕಷ್ಟು ಉಪಕ್ರಮಗಳನ್ನು ಕೈಗೊಂಡರೂ ಸಿಜೇರಿಯನ್‌ ಹೆರಿಗೆಗಳಿಗೆ ಕಡಿವಾಣ ಬಿದ್ದಿಲ್ಲ. ತುಮಕೂರು, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಿಜೇರಿಯನ್‌ ಹೆರಿಗೆ ಪ್ರಮಾಣ ಅತಿ ಹೆಚ್ಚಿರುವುದು ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.   

2023-24 ಹಾಗೂ 2024-25 ಅಕ್ಟೋಬರ್ ತಿಂಗಳವರೆಗೆ ಚಿತ್ರದುರ್ಗ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 167 ಸಿಜೇರಿಯನ್‌ ಹೆರಿಗೆಗಳಾಗಿವೆ. ಅದೇ ಅವಧಿಯಲ್ಲಿ ತುಮಕೂರಿನಲ್ಲಿ 157, ವಿಜಯನಗರದಲ್ಲಿ 164 ಹಾಗೂ ಚಾಮರಾಜನಗರದಲ್ಲಿ 151 ಸಿಜೇರಿಯನ್‌ ಹೆರಿಗೆಗಳು ನಡೆದಿವೆ. ಗಮನಾರ್ಹ ಸಂಗತಿ ಎಂದರೆ; ಸಿಜೇರಿಯನ್‌ ಪ್ರಮಾಣದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಈ ಜಿಲ್ಲೆಗಳಿಗೆ ಹೋಲಿಸಿದರೆ, ಶೈಕ್ಷಣಿಕವಾಗಿ ಹಿಂದುಳಿದಿರುವ ಯಾದಗಿರಿ ಜಿಲ್ಲೆಯಲ್ಲಿ ಕಡಿಮೆ ಸಿಜೇರಿಯನ್‌ ಹೆರಿಗೆಗಳು ನಡೆದಿವೆ. ಅಲ್ಲಿ ಎರಡು ವರ್ಷಗಳಲ್ಲಿ ಕೇವಲ 49 ಸಿಜೇರಿಯನ್ ಹೆರಿಗೆಗಳು ಮಾತ್ರ ನಡೆದಿವೆ. ಇನ್ನು ಶೈಕ್ಷಣಿಕವಾಗಿ ಮುಂದುವರಿದಿರುವ ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಕೂಡ ಸಿಜೇರಿಯನ್‌ ಹೆರಿಗೆಗಳ ಪ್ರಮಾಣ ಕಡಿಮೆ ಇದೆ.

ಉಳಿದಂತೆ ಎಲ್ಲ ಜಿಲ್ಲೆಗಳಲ್ಲೂ ಸೀಜೇರಿಯನ್‌ ಹೆರಿಗೆಗಳ ಪ್ರಮಾಣ ನೂರರ ಗಡಿಯಲ್ಲಿವೆ. ಕೆಲವು ಜಿಲ್ಲೆಯಲ್ಲಿ ನೂರರ ಗಡಿ ದಾಟಿರುವುದು ಕಂಡು ಬಂದಿದೆ. 

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಸಿಜೇರಿಯನ್‌ ಹೆರಿಗೆಯ ಜಿಲ್ಲಾವಾರು ಅಂಕಿ-ಅಂಶ

ಅನಗತ್ಯ ಸಿಜೇರಿಯನ್ ತಡೆಗೆ ಕ್ರಮ

ರಾಜ್ಯದಲ್ಲಿ ಹೆಚ್ಚುತ್ತಿರುವ ಅನಗತ್ಯ ಸಿಜೇರಿಯನ್ ಹೆರಿಗೆಗಳ ತಡೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ 24x7 ಪ್ರಸೂತಿ ಸೇವೆ ಒದಗಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ ಅವಶ್ಯವಿದ್ದಲ್ಲಿ ಮಾತ್ರ ಸಿಜೇರಿಯನ್ ಹೆರಿಗೆ ಮಾಡಲು ಸೂಚಿಸಲಾಗಿದೆ. ಇದರಿಂದ ಜಿಲ್ಲಾ ಮಟ್ಟದ ಆಸ್ಪತ್ರೆ ಮೇಲಿನ ಹೊರೆ ಕಡಿಮೆಯಾಗುತ್ತಿದೆ. ಜೊತೆಗೆ ಸಿಜೇರಿಯನ್ ಶಸ್ತ್ರಚಿಕಿತ್ಸೆಗೂ ಕಡಿವಾಣ ಹಾಕಬಹುದಾಗಿದೆ. 

ರಾಜ್ಯದಲ್ಲಿ ಪ್ರತ್ಯೇಕ ತಾಯಿ ಮಕ್ಕಳ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಈವರೆಗೂ ಒಟ್ಟು 88 ತಾಯಿ-ಮಗು ಆಸ್ಪತ್ರೆಗಳು ಮಂಜೂರಾಗಿವೆ. ಇವುಗಳಲ್ಲಿ 60 ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಹೆಚ್ಚಳಕ್ಕೆ ಗರ್ಭಿಣಿಯರನ್ನು ಉತ್ತೇಜಿಸಲಾಗುತ್ತಿದೆ.

ಆದರೆ, ಬಹಳಷ್ಟು ತಾಲೂಕು ಆಸ್ಪತ್ರೆಗಳ ಸರ್ಕಾರಿ ವೈದ್ಯರೇ ಖಾಸಗಿ ನರ್ಸಿಂಗ್‌ ಹೋಂ ನಡೆಸುತ್ತಿರುವುದರಿಂದ, ಗರ್ಭಿಣಿಯರಿಗೆ ತಮ್ಮದೇ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಹೆರಿಗೆಗೆ ಬರಲು ಒತ್ತಾಯಿಸುವುದು, ಅಲ್ಲಿ ಅವರಿಗೆ ಸಿಜೇರಿಯನ್‌ ಮಾಡಿಸುವುದು ವಾಡಿಕೆಯಾಗಿದೆ ಎಂಬ ದೂರುಗಳೂ ಇವೆ.

ಸಹಜ ಹೆರಿಗೆಗಾಗಿ ನರ್ಸ್‌ಗಳಿಗೆ ತರಬೇತಿ

ರಾಜ್ಯದಲ್ಲಿ ಸಹಜ ಹೆರಿಗೆ ಹೆಚ್ಚಿಸಿ, ಸಿಜೇರಿಯನ್ ಹೆರಿಗೆ ತಗ್ಗಿಸಲು ರಾಜ್ಯ ಸರ್ಕಾರ ಮಿಡ್‌ವೈಫ್ರಿ ಯೋಜನೆ ಆರಂಭಿಸಿದೆ. ಈ ಯೋಜನೆಯಡಿ ನರ್ಸ್‌ಗಳಿಗೆ ಸಹಜ ಹೆರಿಗೆ ಕುರಿತು 18 ತಿಂಗಳ ತರಬೇತಿ ನೀಡಲಾಗುತ್ತದೆ. ಈಗಾಗಲೇ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆ ಹಾಗೂ ಹೈದರಾಬಾದಿನ ಫರ್ನಾಂಡೀಸ್ ಫೌಂಡೇಷನ್‌ನಲ್ಲಿ ತರಬೇತಿ ನೀಡಿದ್ದು, ಮುಂದುವರಿದ ತರಬೇತಿಯನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ. ಈಗಾಗಲೇ 12 ತಿಂಗಳ ತರಬೇತಿ ಮುಗಿದಿದ್ದು, ಇನ್ನು ಆರು ತಿಂಗಳಲ್ಲಿ ತರಬೇತಿ ಪೂರ್ಣಗೊಳ್ಳಲಿದೆ. ಆ ಬಳಿಕ ತರಬೇತಿ ಪಡೆದ ನರ್ಸ್‌ಗಳನ್ನು ವಿವಿಧ ಆಸ್ಪತ್ರೆಗಳಿಗೆ ನಿಯೋಜಿಸಿ. ಸಹಜ ಹೆರಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರತಿ ಆಸ್ಪತ್ರೆಯಲ್ಲಿ ಸಿಜೇರಿಯನ್‌ ಆಡಿಟ್‌ ನಡೆಸಲಾಗುತ್ತಿದೆ. ಶಸ್ತ್ರಚಿಕಿತ್ಸೆಯ ಅಗತ್ಯತೆ ಹಾಗೂ ಅನಗತ್ಯತೆಗಳ ಕುರಿತು ಪರಿಶೀಲಿಸಲಾಗುತ್ತಿದೆ. ಸಿಜೇರಿಯನ್‌ ಹೆರಿಗೆಗಳ ತಡೆಗೆ ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಪ್ರಸೂತಿತಜ್ಞರು ಹಾಗೂ ಶುಶ್ರೂಷಕಿಯರಿಗೆ ಹೆರಿಗೆ ಅವಧಿಯ ಆರೈಕೆ ಕೌಶಲ್ಯ ಹೆಚ್ಚಿಸಲು ದಕ್ಷತಾ ತರಬೇತಿಯನ್ನು ನೀಡಲಾಗುತ್ತಿದೆ. 

ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಇಲ್ಲ ಕಡಿವಾಣ

ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಸಿಜೇರಿಯನ್‌ ಸುಲಿಗೆಗೆ ಸರ್ಕಾರ ನೇರವಾಗಿ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲಿನ ವೈದ್ಯಕೀಯ ಪ್ರಕ್ರಿಯೆಗಳಲ್ಲಿ ಸರ್ಕಾರ ನೇರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದೇ ಇರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನಿರಂತರವಾಗಿ ಸಿಜೇರಿಯನ್‌ ಹೆರಿಗೆಗಳು ಹೆಚ್ಚುತ್ತಿವೆ. ಈ ಅಂಶವನ್ನು ಸರ್ಕಾರವೇ ವಿಧಾನಮಂಡಲದಲ್ಲಿ ಬಿಡುಗಡೆ ಮಾಡಿರುವ ವರದಿಯೇ ದೃಢಪಡಿಸಿದೆ.

ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರವೇ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಸಿಜೇರಿಯನ್‌ ಹೆರಿಗೆಯ ಪ್ರಮಾಣದಲ್ಲಿ ಶೇ.40ರಷ್ಟು ವ್ಯತ್ಯಾಸ ಇರುವುದು ಕಣ್ಣಿಗೆ ರಾಚುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ಸಿಜೇರಿಯನ್‌ ಹೆರಿಗೆಯ ಪ್ರಮಾಣ ಬರೋಬ್ಬರಿ ಶೇ.40ರಷ್ಟು ಹೆಚ್ಚಿದೆ!

ಅದರಲ್ಲೂ ಕಳೆದ ಒಂದು ವರ್ಷದ ಅವಧಿಯಲ್ಲಿ ಸಿಜೇರಿಯನ್‌ ಹೆರಿಗೆಯ ಪ್ರಮಾಣ ಖಾಸಗಿ ಆಸ್ಪತ್ರೆಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. 

ಆದರೆ, ಸರ್ಕಾರ ಮತ್ತು ರಾಜ್ಯ ಆರೋಗ್ಯ ಇಲಾಖೆ ತಮ್ಮ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ತರಬೇತಿ, ಮೇಲ್ವಿಚಾರಣೆ ಮತ್ತು ಗರ್ಭಿಣಿ ಸ್ತ್ರೀಯರಿಗೆ ಜಾಗೃತಿ ಮೂಡಿಸುವಂತಹ ಪೂರ್ವಭಾವಿ ಕ್ರಮಗಳಿಗೇ ಈ ದಿಕ್ಕಿನಲ್ಲಿ ತನ್ನ ಪ್ರಯತ್ನಗಳನ್ನು ಸೀಮಿತಗೊಳಿಸಿದೆ ವಿನಃ ಅನಗತ್ಯವಾಗಿ ಸಿಜೇರಿಯನ್‌ ಹೆರಿಗೆಗಳನ್ನು ಹೆಚ್ಚಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಕಾನೂನು ಕ್ರಮದಂತಹ ಯಾವುದೇ ಬಿಗಿ ಕ್ರಮಗಳನ್ನು ಕೈಗೊಂಡಿಲ್ಲ. ಮತ್ತು ಅಂತಹ ಕ್ರಮಗಳಿಗೆ ಪೂರಕ ಕಾನೂನು ಮತ್ತು ಪೂರಕ ವ್ಯವಸ್ಥೆ ರೂಪಿಸುವ ಬಗ್ಗೆ ಕೂಡ ಆರೋಗ್ಯ ಸಚಿವರು ಸದನದಲ್ಲಿ ಯಾವುದೇ ಮಾಹಿತಿ ನೀಡಿಲ್ಲ.

Tags:    

Similar News