ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ಮೇಲಿನ ನಿರ್ಬಂಧ ರದ್ದುಗೊಳಿಸಿದ ಹೈಕೋರ್ಟ್
ಮಂಗಳೂರಿನ ಯೂಟ್ಯೂಬ್ ಚಾನೆಲ್ 'ಕುಡ್ಲ ರ್ಯಾಂಪೇಜ್' ಮುಖ್ಯ ಸಂಪಾದಕ ಅಜಯ್ ಬಿನ್ ರಾಮಕೃಷ್ಣ ಪೂಜಾರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿ ಈ ಮಹತ್ವದ ತೀರ್ಪು ನೀಡಿದೆ.;
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮೇಲೆ ವಿಧಿಸಿದ್ದ ನಿರ್ಬಂಧಕ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ನಗರದ ಸಿಟಿ ಸಿವಿಲ್ ಕೋರ್ಟ್ ಹೊರಡಿಸಿದ್ದ ಪ್ರತಿಬಂಧಕ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಮಂಗಳೂರಿನ ಯೂಟ್ಯೂಬ್ ಚಾನೆಲ್ 'ಕುಡ್ಲ ರ್ಯಾಂಪೇಜ್' ಮುಖ್ಯ ಸಂಪಾದಕ ಅಜಯ್ ಬಿನ್ ರಾಮಕೃಷ್ಣ ಪೂಜಾರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಸಂಸ್ಥೆಗಳ ವಿರುದ್ಧ ಆಧಾರರಹಿತ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಡಿ. ಹರ್ಷೇಂದ್ರ ಕುಮಾರ್ ಅವರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಸ್ವಚ್ಛತಾ ಕಾರ್ಮಿಕರೊಬ್ಬರು ನೀಡಿದ ದೂರಿನ ಎಫ್‌ಐಆರ್‌ನಲ್ಲಿ ತಮ್ಮ ಕುಟುಂಬದ ವಿರುದ್ಧ ಯಾವುದೇ ಆರೋಪಗಳಿಲ್ಲದಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ಈ ಮನವಿಯನ್ನು ಪುರಸ್ಕರಿಸಿದ್ದ ಸಿಟಿ ಸಿವಿಲ್ ಕೋರ್ಟ್, ಜುಲೈ 8ರಂದು ಡಿಜಿಟಲ್, ಸಾಮಾಜಿಕ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಿಷಯ ಪ್ರಕಟಿಸಬಾರದು ಎಂದು ಪ್ರತಿವಾದಿಗಳು ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಏಕಪಕ್ಷೀಯ ಪ್ರತಿಬಂಧಕ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ವಿಶ್ಲೇಷಣೆ ಮತ್ತು ನಿರ್ದೇಶನ
ಸಿಟಿ ಸಿವಿಲ್ ಕೋರ್ಟ್‌ನ ಆದೇಶವನ್ನು ಪರಿಶೀಲಿಸಿದ ಹೈಕೋರ್ಟ್, ಈ ಆದೇಶವು ಅಮೆರಿಕದ 'ಜಾನ್ ಡೋ' (ಅಪರಿಚಿತ ವ್ಯಕ್ತಿಗಳ ವಿರುದ್ಧದ) ಆದೇಶದಂತಿದೆ ಎಂದು ಅಭಿಪ್ರಾಯಪಟ್ಟಿದೆ. ಇಂತಹ ಆದೇಶಗಳನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಎಂದು ನ್ಯಾಯಪೀಠ ಹೇಳಿದೆ.
"ವಿಚಾರಣಾ ನ್ಯಾಯಾಲಯದ ಆದೇಶವು ಯಾವ ಹೇಳಿಕೆಗಳು ಮಾನಹಾನಿಕರವಾಗಿವೆ ಎಂಬುದರ ಕುರಿತು ಒಂದೇ ಒಂದು ಪದವನ್ನೂ ಉಲ್ಲೇಖಿಸಿಲ್ಲ. ಈ ಆದೇಶವು ತನ್ನ ವ್ಯಾಪ್ತಿಯನ್ನು ಎಷ್ಟು ವಿಸ್ತರಿಸಿದೆಯೆಂದರೆ, ವಾದಿ, ಅವರ ಕುಟುಂಬ ಅಥವಾ ಸ್ಥಳದ ವಿರುದ್ಧ ಯಾವುದೇ ಧ್ವನಿ ಎತ್ತುವುದನ್ನು ನ್ಯಾಯಾಂಗದ ವಿಚಾರಣೆಗೆ ಒಳಪಡಿಸುವ ಬೆದರಿಕೆಯಾಗಿದೆ" ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್‌ನ ಆದೇಶವನ್ನು ರದ್ದುಪಡಿಸಿದ್ದು, ಮಧ್ಯಂತರ ಅರ್ಜಿಯನ್ನು ತುರ್ತಾಗಿ ನಿರ್ಧರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ. ಪ್ರಕರಣದ ಆರೋಪ-ಪ್ರತ್ಯಾರೋಪಗಳ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.