ಮೇಕ್ ಇನ್ ಇಂಡಿಯಾಗಿಂತ ಇನ್ವೆಂಟ್ ಇನ್ ಇಂಡಿಯಾ'ಗೆ ಆದ್ಯತೆ ನೀಡಿ": ನೋಬೆಲ್ ವಿಜೇತ ಪ್ರೊ.ಡೇವಿಡ್ ಗ್ರಾಸ್
ಭಾರತವು ಇತರೆ ದೇಶದಲ್ಲಿ ಸಂಶೋಧನೆಯಾಗಿರುವ, ಅಭಿವೃದ್ಧಿಯಾಗಿರುವ ವಿಷಯಗಳ ಬಗ್ಗೆ ಮತ್ತೊಮ್ಮೆ ತಯಾರಿ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.;
ಭಾರತವು 'ಮೇಕ್ ಇನ್ ಇಂಡಿಯಾ' (ಭಾರತದಲ್ಲಿ ತಯಾರಿಸಿ) ಪರಿಕಲ್ಪನೆಗೆ ನೀಡುತ್ತಿರುವ ಉತ್ತೇಜನ ಶ್ಲಾಘನೀಯ, ಆದರೆ ದೇಶದ ನಿಜವಾದ ಪ್ರಗತಿಗೆ ಅದಕ್ಕಿಂತ ಹೆಚ್ಚಾಗಿ 'ಇನ್ವೆಂಟ್ ಇನ್ ಇಂಡಿಯಾ' (ಭಾರತದಲ್ಲಿ ಸಂಶೋಧನೆ) ಮೇಲೆ ಗಮನ ಹರಿಸಬೇಕಾದ ತುರ್ತು ಅಗತ್ಯವಿದೆ ಎಂದು ಭೌತಶಾಸ್ತ್ರ ವಿಜ್ಞಾನಿ ಮತ್ತು ನೋಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ.ಡೇವಿಡ್ ಗ್ರಾಸ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆದ ದೇಶದ ಚೊಚ್ಚಲ 'ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶ'ದಲ್ಲಿ ಮಾತನಾಡಿದ ಅವರು, ಭಾರತವು ಸಂಶೋಧನೆ ಮತ್ತು ಅಭಿವೃದ್ಧಿ (R&D) ಕ್ಷೇತ್ರದಲ್ಲಿ ಜಾಗತಿಕ ಶಕ್ತಿಯಾಗಲು ಹೊಸ ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದರು.
"ಇತರ ದೇಶಗಳು ಈಗಾಗಲೇ ಸಂಶೋಧಿಸಿ, ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳನ್ನು ಭಾರತದಲ್ಲಿ ಪುನಃ ತಯಾರಿಸುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಇದರ ಬದಲಿಗೆ, ಭಾರತವು ತನ್ನದೇ ಆದ ಹೊಸ ಸಂಶೋಧನೆ ಮತ್ತು ಅನ್ವೇಷಣೆಗಳನ್ನು ನಡೆಸಬೇಕು. ಇಲ್ಲಿಯೇ ಸಂಶೋಧಿಸಿದ ಉತ್ಪನ್ನಗಳನ್ನು ಇಲ್ಲಿಯೇ ತಯಾರಿಸುವಂತಹ ಸ್ವಾವಲಂಬಿ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಆಗ ಮಾತ್ರ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗುತ್ತದೆ," ಎಂದು ಪ್ರೊ.ಗ್ರಾಸ್ ಹೇಳಿದರು.
ಸಂಶೋಧನೆಗೆ ಭಾರತದಲ್ಲಿ ದೊರೆಯುತ್ತಿರುವ ಅನುದಾನದ ಕೊರತೆಯನ್ನು ಅಂಕಿಅಂಶಗಳ ಮೂಲಕ ವಿವರಿಸಿದ ಅವರು, "ಭಾರತವು ತನ್ನ ಜಿಡಿಪಿಯ ಕೇವಲ ಶೇ. 0.64ರಷ್ಟನ್ನು ಮಾತ್ರ ಸಂಶೋಧನಾ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದೆ. ಇದೇ ವೇಳೆ, ಚೀನಾ ಶೇ. 2.41, ಅಮೆರಿಕ ಶೇ. 3.47 ಮತ್ತು ಇಸ್ರೇಲ್ ಶೇ. 5.71ರಷ್ಟು ಹಣವನ್ನು ಸಂಶೋಧನೆಗೆ ಮೀಸಲಿಡುತ್ತಿವೆ. ಈ ಅಂತರವನ್ನು ಕಡಿಮೆ ಮಾಡಲು ಭಾರತವು ಸಂಶೋಧನೆಗೆ ಹೆಚ್ಚಿನ ಅನುದಾನ ಮತ್ತು ಆದ್ಯತೆಯನ್ನು ನೀಡಬೇಕಿದೆ," ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವೂ ಮಾಡಬೇಕು
ಸಂಶೋಧನೆ ಮತ್ತು ಅಭಿವೃದ್ಧಿಯು ಕೇವಲ ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲ, ರಾಜ್ಯ ಸರ್ಕಾರಗಳು ಸಹ ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು. ಆಗ ಮಾತ್ರ ದೇಶದಲ್ಲಿ ಸರ್ವಾಂಗೀಣ ಸಂಶೋಧನಾ ಪ್ರಗತಿ ಸಾಧ್ಯ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕ್ವಾಂಟಮ್ ತಂತ್ರಜ್ಞಾನದ ಬಗ್ಗೆ ಸರಳವಾಗಿ ವಿವರಿಸಿದ ಅವರು, "ಇದು ಎಲೆಕ್ಟ್ರಾನ್, ಪ್ರೋಟಾನ್ನಂತಹ ಉಪಪರಮಾಣು ಕಣಗಳ ನಡವಳಿಕೆಯನ್ನು ವಿವರಿಸುತ್ತದೆ. ಈ ಕಣಗಳು ಅಲೆಗಳಂತೆ ವರ್ತಿಸುತ್ತವೆ ಮತ್ತು ಒಂದೇ ಸಮಯದಲ್ಲಿ ಹಲವು ಸ್ಥಳಗಳಲ್ಲಿ ಇರಲು ಸಾಧ್ಯ. ಕ್ವಾಂಟಮ್ ಸಿದ್ಧಾಂತವು ಒಂದು ಘಟನೆಯ ಸಂಭವನೀಯತೆಯನ್ನು ಹೇಳುತ್ತದೆಯೇ ಹೊರತು, ನಿಖರತೆಯನ್ನು ಅಲ್ಲ," ಎಂದು ಹೇಳಿದರು.