ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಕಾಂಗ್ರೆಸ್‌ನಿಂದ ತೆರಿಗೆ ರಾಜ್‌ ಸೃಷ್ಟಿ

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡು ವರ್ಷ ಪೂರೈಸಿದರೂ ಬೆಂಗಳೂರು ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಎಂದು ಜೆಡಿಎಸ್‌ ಮುಖಂಡ ಹೆಚ್. ಎಂ. ರಮೇಶ್‌ ತಿಳಿಸಿದರು.;

Update: 2025-08-01 11:00 GMT

ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಮುಖಂಡ ಹೆಚ್‌.ಎಂ. ರಮೇಶ್‌

ತೆರಿಗೆ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಬೆಂಗಳೂರು ನಗರದ ಜನರನ್ನು ಕೊಳ್ಳೆ ಹೊಡೆಯುತ್ತಿದೆ. ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ತೆರಿಗೆ ರಾಜ್‌ ಸೃಷ್ಟಿ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಹೆಚ್.ಎಂ. ರಮೇಶ್‌ ಗೌಡ ವಾಗ್ದಾಳಿ ನಡೆಸಿದರು.

ಶುಕ್ರವಾರ ನಗರದ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಲೂಟಿ ವಿರುದ್ಧ ಜೆಡಿಎಸ್‌ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ʼಎʼ ಹಾಗೂ ʼಬಿʼ ಖಾತೆ ನೀಡುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಎರಡು ವರ್ಷ ಪೂರೈಸಿದರೂ ಕಾಂಗ್ರೆಸ್ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಎಂದು ದೂರಿದರು.

ಜುಲೈ. 25 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ ʼಬಿʼ ಖಾತೆ ಸ್ವತ್ತುಗಳಿಗೆ ʼಎʼ ಖಾತೆ ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಸಂಕಷ್ಟ ಉಂಟಾಗಿದೆ. ಆದರೆ ಕಾಂಗ್ರೆಸ್‌ ಸರ್ಕಾರಕ್ಕೆ ಹಣ ಮಾಡುವುದೇ ಉದ್ದೇಶವಾಗಿದೆಯೇ ವಿನಃ ಜನರ ಬಗ್ಗೆ ಕಾಳಜಿ ಇಲ್ಲ ಎಂದರು.

10 ಪಟ್ಟು ಹೆಚ್ಚು ತೆರಿಗೆ 

2007ರಲ್ಲಿ ಬಿಬಿಎಂಪಿಗೆ ಹೊಸದಾಗಿ ಸೇರಿರುವ ಪ್ರದೇಶಗಳ ಕಂದಾಯ ನಿವೇಶನಗಳಿಗೆ ಚದರ ಮೀಟರ್‌ಗೆ 250 ರೂ. ಇತ್ತು. ಇದು ಹಳೆಯ 100 ವಾರ್ಡ್ʼಗಳಿಗೆ ಕಂದಾಯ ನಿವೇಶನಗಳು, ಕಟ್ಟಡಗಳಿಗೆ ಖಾತೆ ಮಾಡಿ ಕೊಡಲಾಗುತ್ತಿತ್ತು. ಈಗ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಒಂದು ಚದರ ಅಡಿಗೆ 500 ರೂ. ಗೆ ಏರಿಸಿದೆ. ಸರ್ಕಾರ ಕಣ್ಮುಚ್ಚಿಕೊಂಡು ಆದೇಶ ಮಾಡಿದ್ದು, ಬೆಂಗಳೂರು ನಗರದ ನಾಗರಿಕರಿಗೆ 10 ಪಟ್ಟು ಹೆಚ್ಚು ತೆರಿಗೆ ವಿಧಿಸಿದೆ ಎಂದು ಆರೋಪ ಮಾಡಿದರು.

ಬಿಬಿಎಂಪಿ ವಿಭಜನೆ ವಿರುದ್ಧ ಕಾನೂನು ಹೋರಾಟ

ಬಿಬಿಎಂಪಿಯನ್ನು ಐದು ಭಾಗವನ್ನಾಗಿ ಮಾಡಿದ್ದೇ ಸುಲಿಗೆ ಮಾಡಲು. ಬೆಂಗಳೂರು ನಗರ ಹಾಗೆಯೇ ಉಳಿಯಬೇಕು. ಗ್ರೇಟರ್‌ ಬೆಂಗಳೂರು ಹೆಸರಿನಲ್ಲಿ ಬಿಬಿಎಂಪಿಯನ್ನು ಛಿದ್ರ ಮಾಡಿದ್ದು ಕನ್ನಡಿಗರಿಗೆ ಮಾಡಿದ ಅನ್ಯಾಯ. ವಿಭಜನೆ ವಿರುದ್ಧ ಜೆಡಿಎಸ್‌ ಕಾನೂನು ಹೋರಾಟ ಮಾಡಲಿದೆ ಎಂದರು.

ಕೋರ್ಟ್‌ ಮೊರೆ

ʼಬಿʼ ಖಾತೆಗೆ ʼಎʼ ಖಾತಾ ಕೊಡುವುದನ್ನು ರಾಜ್ಯ ಸರ್ಕಾರ ಹಿಂಬಾಗಿಲಿನಿಂದ ತಂದಿದೆ. ಖಾತೆ ಬದಲಾವಣೆಗೆ 3ರಿಂದ 6 ಲಕ್ಷ ರೂ. ಕೊಡಬೇಕಿದ್ದು ಇದಕ್ಕೆ ನಮ್ಮ ವಿರೋಧವಿದೆ. ಅವೈಜ್ಞಾನಿಕವಾಗಿ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದ್ದು ಬೆಂಗಳೂರಿಗರಿಗೆ ಸರ್ಕಾರ ಮೋಸ ಮಾಡುತ್ತಿದೆ. ತೆರಿಗೆ ಕಡಿಮೆ ಮಾಡದಿದ್ದರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದು ತಿಳಿಸಿದರು. 


Tags:    

Similar News