ಪ್ರತಿವರ್ಷ ಕ್ವಾಂಟಮ್​ ಸಮ್ಮೇಳನ ಆಯೋಜಿಸಲು ಸರ್ಕಾರದ ಚಿಂತನೆ

ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶ - 2025' ಭರ್ಜರಿ ಯಶಸ್ಸು ಕಂಡಿದ್ದು, ಈ ಯಶಸ್ಸಿಯಾಗಿದ್ದು, 1000 ಕೋಟಿ ರೂಪಾಯಿ ಪ್ಯಾಕೇಜ್​ ಘೋಷಣೆಯಾಗಿದೆ.;

Update: 2025-08-01 14:28 GMT

ವಿಶ್ವ ಕ್ವಾಂಟಮ್ ಭೂಪಟದಲ್ಲಿ ಕರ್ನಾಟಕವನ್ನು ಮುಂಚೂಣಿಯಲ್ಲಿ ನಿಲ್ಲಿಸುವ ಗುರಿಯೊಂದಿಗೆ ಆಯೋಜಿಸಲಾಗಿದ್ದ 'ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶ - 2025' ಭರ್ಜರಿ ಯಶಸ್ಸು ಕಂಡಿದ್ದು, ಈ ಯಶಸ್ಸಿನ ಹಿನ್ನೆಲೆಯಲ್ಲಿ ಸಮಾವೇಶವನ್ನು ವಾರ್ಷಿಕವಾಗಿ ಆಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು ತಿಳಿಸಿದ್ದಾರೆ.

ಶುಕ್ರವಾರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆದ ಈ ಐತಿಹಾಸಿಕ ಸಮಾವೇಶವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. 500 ಪ್ರತಿನಿಧಿಗಳನ್ನು ನಿರೀಕ್ಷಿಸಿದ್ದ ಸ್ಥಳದಲ್ಲಿ, ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್ ಸೇರಿದಂತೆ 19ಕ್ಕೂ ಹೆಚ್ಚು ದೇಶಗಳಿಂದ 1,951ಕ್ಕೂ ಹೆಚ್ಚು ಪ್ರತಿನಿಧಿಗಳು, ಸಂಶೋಧಕರು ಮತ್ತು ಉದ್ಯಮಿಗಳು ಭಾಗವಹಿಸಿದ್ದರು. ನೋಬೆಲ್ ಪ್ರಶಸ್ತಿ ಪುರಸ್ಕೃತರು ಸೇರಿದಂತೆ 75ಕ್ಕೂ ಹೆಚ್ಚು ತಜ್ಞರು 24 ಗೋಷ್ಠಿಗಳಲ್ಲಿ ಕ್ವಾಂಟಮ್ ಕ್ಷೇತ್ರದ ಅವಕಾಶಗಳು ಮತ್ತು ಭವಿಷ್ಯದ ಬಗ್ಗೆ ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

1,000 ಕೋಟಿ ಮೊತ್ತದ 'ಕರ್ನಾಟಕ ಕ್ವಾಂಟಮ್ ಮಿಷನ್'

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರವನ್ನು ಬಲಪಡಿಸಲು ಬದ್ಧರಾಗಿದ್ದಾರೆ ಎಂದು ಸಚಿವರು ತಿಳಿಸಿದರು. "2035ರ ವೇಳೆಗೆ ಕ್ವಾಂಟಮ್ ಆಧಾರಿತ ಆರ್ಥಿಕತೆಯನ್ನು ಉತ್ತೇಜಿಸುವ ಗುರಿಯೊಂದಿಗೆ, ಕೌಶಲ್ಯ, ಮೂಲಸೌಕರ್ಯ ಮತ್ತು ಸ್ಟಾರ್ಟ್ಅಪ್​ಗೆ ಉತ್ತೇಜನ ನೀಡಲು 1,000 ಕೋಟಿ ನಿಧಿಯೊಂದಿಗೆ 'ಕರ್ನಾಟಕ ಕ್ವಾಂಟಮ್ ಮಿಷನ್' ಪ್ರಾರಂಭಿಸಲಾಗುವುದು. ಉದ್ಯಮಗಳಿಗೆ ಅಗತ್ಯವಿರುವ ಭೂಮಿ, ಕೌಶಲ್ಯಾಭಿವೃದ್ಧಿಗೆ ಪೂರಕವಾದ ಪಠ್ಯಕ್ರಮಗಳ ಅಳವಡಿಕೆ ಹಾಗೂ ಎಲ್ಲಾ ರೀತಿಯ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ," ಎಂದು ಮುಖ್ಯಮಂತ್ರಿಗಳು ನೀಡಿರುವ ಭರವಸೆಯನ್ನು ಭೋಸರಾಜು ಪುನರುಚ್ಚರಿಸಿದರು.

ಶಾಲಾ ಮಟ್ಟದಲ್ಲಿ ಕ್ವಾಂಟಮ್ ಪಠ್ಯಕ್ರಮ

ಕರ್ನಾಟಕವನ್ನು ಜಾಗತಿಕ ಕ್ವಾಂಟಮ್ ಪವರ್​ಹೌಸ್​ ಆಗಿ ರೂಪಿಸುವ ದೃಷ್ಟಿಯಿಂದ, ಹಿರಿಯ ಪ್ರಾಥಮಿಕ ಶಾಲಾ ಮಟ್ಟದಲ್ಲಿಯೇ ಇಂಗ್ಲಿಷ್ ಮತ್ತು ಕನ್ನಡದಲ್ಲಿ 'ಸ್ಟ್ರೀಮ್ ಲ್ಯಾಬ್ಸ್' ಯೋಜನೆಯ ಮೂಲಕ ಕ್ವಾಂಟಮ್ ಪಠ್ಯಕ್ರಮವನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಕ್ವಾಂಟಮ್ ಕಂಪ್ಯೂಟಿಂಗ್, ಸಂವಹನ ಮತ್ತು ಸೆನ್ಸಿಂಗ್ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿಗಳಿಗೆ ಮೀಸಲಾದ ಡಿಎಸ್ಟಿ ಪಿಎಚ್ಡಿ ಫೆಲೋಶಿಪ್ಗಳನ್ನು ವಿಸ್ತರಿಸಲಾಗುವುದು ಎಂದು ಸಚಿವರು ಘೋಷಿಸಿದರು.

ಐಐಐಟಿ ಧಾರವಾಡ, ರಾಯಚೂರು ಜತೆ ಮಹತ್ವದ ಒಪ್ಪಂದ

ಸಮಾವೇಶದ ಪ್ರಮುಖ ಸಂಗತಿಗಳಲ್ಲಿ ಒಂದಾಗಿ, ಐಐಐಟಿ ಧಾರವಾಡ ಹಾಗೂ ಐಐಐಟಿ ರಾಯಚೂರು ಸಂಸ್ಥೆಗಳು, ಕ್ಯೂಪೈಎಐ (QpiAI) ಜೊತೆಗೆ 'ಕ್ಯೂ-ವಿದ್ಯಾ' 8 ಕ್ಯೂಬಿಟ್ ಕ್ವಾಂಟಮ್ ಕಂಪ್ಯೂಟರ್ ಸ್ಥಾಪನೆಗಾಗಿ ಮಹತ್ವದ ಒಪ್ಪಂದಕ್ಕೆ (MoU) ಸಹಿ ಹಾಕಿವೆ. ಈ ಯೋಜನೆಯು ಕ್ವಾಂಟಮ್ ತಂತ್ರಜ್ಞಾನದಲ್ಲಿ ಸಂಶೋಧಕರನ್ನು ಸಬಲೀಕರಣಗೊಳಿಸುವ ಮತ್ತು ತರಬೇತುದಾರರಿಗೆ ತರಬೇತಿ ನೀಡುವ ಗುರಿ ಹೊಂದಿದೆ.

ಸಮಾವೇಶದ ಯಶಸ್ಸಿನಿಂದ ಉತ್ತೇಜಿತರಾಗಿರುವ ರಾಜ್ಯ ಸರ್ಕಾರ, ಈ ಉತ್ಸಾಹವನ್ನು ಮುಂದುವರಿಸಲು ದೇಶದ ವಿವಿಧ ರಾಜ್ಯಗಳಲ್ಲಿ ರೋಡ್​ಶೋಗಳನ್ನು ಆಯೋಜಿಸಿ ಕರ್ನಾಟಕದಲ್ಲಿರುವ ಹೂಡಿಕೆ ಅವಕಾಶಗಳ ಬಗ್ಗೆ ಉದ್ಯಮಿಗಳಿಗೆ ಮಾಹಿತಿ ನೀಡಲಿದೆ ಎಂದು ಸಚಿವರು ತಿಳಿಸಿದರು.

Tags:    

Similar News