'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಕಲಾವಿದ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಭಾಗವಹಿಸಿದ ನಂತರ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ನಟನಾ ಅವಕಾಶಗಳು ಲಭಿಸಿರಲಿಲ್ಲ ಎಂದು ಹೇಳಲಾಗಿದೆ.;
ಜನಪ್ರಿಯ ಕನ್ನಡ ಟಿವಿ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಮೂಲಕ ರಾಜ್ಯದಾದ್ಯಂತ ಮನೆಮಾತಾಗಿದ್ದ ಕಲಾವಿದ ಚಂದ್ರಶೇಖರ್ ಸಿದ್ದಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಟ್ಟಿಗೆ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಜ್ರಹಳ್ಳಿ ಜೀವನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಚಂದ್ರಶೇಖರ್ ಸಿದ್ದಿ, ಪ್ರತಿಷ್ಠಿತ ನೀನಾಸಂನಲ್ಲಿ ನಾಟಕ ತರಬೇತಿ ಪಡೆದ ಪ್ರತಿಭಾವಂತ ರಂಗಕರ್ಮಿಯಾಗಿದ್ದರು.
'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಭಾಗವಹಿಸಿದ ನಂತರ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ನಟನಾ ಅವಕಾಶಗಳು ಲಭಿಸಿರಲಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ, ಅವರು ಜೀವನ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡುತ್ತಿದ್ದರು. ಅವಕಾಶಗಳ ಕೊರತೆಯಿಂದ ತೀವ್ರ ಮಾನಸಿಕವಾಗಿ ನೊಂದು, ಖಿನ್ನತೆಗೆ ಒಳಗಾಗಿ ಈ ದುಡುಕಿನ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.