ಕರ್ನಾಟಕದ ಜವಳಿ ಕ್ಷೇತ್ರಕ್ಕೆ ಚೀನಾ ಬಲ: 100 ಕೋಟಿ ರೂ. ಹೂಡಿಕೆಗೆ ಉದ್ಯಮಿ ಪಾಲ್ ಪು ಸಿದ್ಧ

ಮೊದಲ ಹಂತದಲ್ಲಿ ಹಳೆಯ ಮೈಸೂರು ಭಾಗದಲ್ಲಿ, ಎರಡನೆಯ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ ಮಾಡಲಾಗುವುದು ಎಂದು ಉದ್ಯಮಿ ಪಾಲ್‌ ಪು ಭರವಸೆ ನೀಡಿದರು.;

Update: 2025-08-01 13:36 GMT
ಜವಳಿ ಸಚಿವ ಶಿವಾನಂದ ಪಾಟೀಲ್‌ ಹಾಗೂ ಚೀನಾ ಉದ್ಯಮಿ ಪಾಲ್‌ ಪು

ರಾಜ್ಯದ ಜವಳಿ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ಸಿಗುವ ಲಕ್ಷಣಗಳು ಗೋಚರಿಸಿದ್ದು, ಚೀನಾದ ಖ್ಯಾತ ಜವಳಿ ಉದ್ಯಮಿ ಪಾಲ್ ಪು ಅವರು ಕರ್ನಾಟಕದಲ್ಲಿ 100 ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದರೆ ತಕ್ಷಣವೇ ಹೂಡಿಕೆ ಮಾಡಲು ಸಿದ್ಧ ಎಂದು ಅವರು ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಜವಳಿ ಸಚಿವ ಶಿವಾನಂದ ಪಾಟೀಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಪಾಲ್ ಪು, ತಮ್ಮ ಹೂಡಿಕೆ ಯೋಜನೆಯನ್ನು ವಿವರಿಸಿದರು. ಮೊದಲ ಹಂತದಲ್ಲಿ 100 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಹಳೆಯ ಮೈಸೂರು ಭಾಗದಲ್ಲಿ ಉದ್ಯಮ ಸ್ಥಾಪಿಸಲಾಗುವುದು. ಈ ಯೋಜನೆಯಿಂದ ಸುಮಾರು ಐದು ಸಾವಿರ ಜನರಿಗೆ ನೇರ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು. ಈ ಯೋಜನೆಗೆ ತಕ್ಷಣವೇ 20 ಎಕರೆ ಭೂಮಿಯ ಅಗತ್ಯವಿದೆ. ಕರ್ನಾಟಕ ಸರ್ಕಾರದ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸುವುದಾಗಿಯೂ ಅವರು ಹೇಳಿದರು.

ಉದ್ಯಮಿಯ ಪ್ರಸ್ತಾಪವನ್ನು ಸ್ವಾಗತಿಸಿದ ಸಚಿವ ಶಿವಾನಂದ ಪಾಟೀಲ್, ರಾಜ್ಯದಲ್ಲಿ ಬಂಡವಾಳ ಹೂಡಲು ಇರುವ ವಿಪುಲ ಅವಕಾಶಗಳ ಬಗ್ಗೆ ವಿವರಿಸಿದರು. "ಉತ್ತರ ಕರ್ನಾಟಕದಲ್ಲಿ ಉದ್ಯಮಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದ ಭೂಮಿ ಲಭ್ಯವಿದೆ. ವರ್ಷದ 365 ದಿನವೂ ನೀರು, ಸಮರ್ಪಕ ವಿದ್ಯುತ್, ರಾಷ್ಟ್ರೀಯ ಹೆದ್ದಾರಿ ಮತ್ತು ವಿಮಾನಯಾನ ಸಂಪರ್ಕವಿರುವ ಸ್ಥಳದಲ್ಲಿ ಅಗತ್ಯ ಪ್ರಮಾಣದ ಭೂಮಿಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ," ಎಂದು ಭರವಸೆ ನೀಡಿದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಸಚಿವರು, ಉದ್ಯಮ ಸ್ಥಾಪನೆಗೆ ಸೂಕ್ತವಾದ ಸ್ಥಳಗಳನ್ನು ಪಾಲ್ ಪು ಅವರಿಗೆ ತೋರಿಸುವಂತೆ ಮತ್ತು ಅವರು ಒಪ್ಪಿದ ನಿವೇಶನವನ್ನು ಮಂಜೂರು ಮಾಡಲು ಶೀಘ್ರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಈ ಯೋಜನೆಯ ಎರಡನೇ ಹಂತವನ್ನು ಉತ್ತರ ಕರ್ನಾಟಕದಲ್ಲಿ ವಿಸ್ತರಿಸುವ ಬಗ್ಗೆಯೂ ಮಾತುಕತೆಯಲ್ಲಿ ಪ್ರಸ್ತಾಪಿಸಲಾಯಿತು. 

Tags:    

Similar News