ಬೆಂಗಳೂರು ಟೆಕ್ ಸಮಿಟ್‌ಗೆ ದೆಹಲಿಯಲ್ಲಿ ಮುನ್ನಡಿ: ಜಾಗತಿಕ ಸಮುದಾಯಕ್ಕೆ ಸಿಎಂ ಆಹ್ವಾನ
ದೆಹಲಿಯಲ್ಲಿ ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಯಮಿದಾರರನ್ನು ಬೆಂಗಳೂರು ಟೆಕ್ ಸಮಿಟ್‌ಗೆ ಅಹ್ವಾನಿಸಿದರು.;
ನವೆಂಬರ್‌ನಲ್ಲಿ ನಡೆಯಲಿರುವ 27ನೇ ಬೆಂಗಳೂರು ಟೆಕ್ ಸಮಿಟ್-2025 ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ 'ಬ್ರಿಜ್ ಟು ಬೆಂಗಳೂರು: ತಂತ್ರಜ್ಞಾನಕ್ಕಾಗಿ ಜಾಗತಿಕ ನಾವೀನ್ಯತಾ ಮೈತ್ರಿ' ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಕರ್ನಾಟಕವು ಸಂಪ್ರದಾಯ ಮತ್ತು ಪ್ರಗತಿಗಳು ಸಂಧಿಸುವ ಶಕ್ತಿ ಕೇಂದ್ರ. ನಾವು ನಿಮ್ಮನ್ನು ಕೇವಲ ಅತಿಥಿಗಳಾಗಿ ಆಹ್ವಾನಿಸುತ್ತಿಲ್ಲ, ಬದಲಿಗೆ ಭವಿಷ್ಯವನ್ನು ರೂಪಿಸುವ ನಮ್ಮ ಪಾಲುದಾರರಾಗಲು ಆಹ್ವಾನಿಸುತ್ತಿದ್ದೇವೆ" ಎಂದು ಜಾಗತಿಕ ಸಮುದಾಯಕ್ಕೆ ಕರೆ ನೀಡಿದರು.
ಆರ್ಥಿಕ ಶಕ್ತಿಕೇಂದ್ರವಾಗಿ ಕರ್ನಾಟಕ
ಕರ್ನಾಟಕದ ಆರ್ಥಿಕ ಪ್ರಗತಿಯನ್ನು ಒತ್ತಿ ಹೇಳಿದ ಮುಖ್ಯಮಂತ್ರಿಗಳು, ಕರ್ನಾಟಕ ಕೇವಲ ಸಾಂಸ್ಕೃತಿಕ ಕೇಂದ್ರವಲ್ಲ, ಬದಲಿಗೆ 337 ಬಿಲಿಯನ್ ಡಾಲರ್ ಜಿಎಸ್ಡಿಪಿ ಹೊಂದಿರುವ ಆರ್ಥಿಕ ಶಕ್ತಿಕೇಂದ್ರವಾಗಿದೆ. "ನಾವು ಭಾರತದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ರಾಷ್ಟ್ರದ ಜಿಡಿಪಿಗೆ ಶೇ. 9ರಷ್ಟು ಕೊಡುಗೆ ನೀಡುತ್ತಿದ್ದೇವೆ," ಎಂದರು.
ಬೆಂಗಳೂರು, 18,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಮತ್ತು 50ಕ್ಕೂ ಹೆಚ್ಚು ಯೂನಿಕಾರ್ನ್‌ಗಳಿಗೆ ನೆಲೆಯಾಗಿದ್ದು, ವಿಶ್ವದ 15 ಪ್ರತಿಷ್ಠಿತ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಅವರು ವಿವರಿಸಿದರು. "ನಮ್ಮ 'ಬಿಯಾಂಡ್ ಬೆಂಗಳೂರು' ಯೋಜನೆಯು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಂತಹ ನಗರಗಳಲ್ಲಿಯೂ ತಂತ್ರಜ್ಞಾನದ ಬೆಳವಣಿಗೆಯನ್ನು ಹರಡುತ್ತಿದೆ," ಎಂದು ತಿಳಿಸಿದರು.
ಸಂಸ್ಕೃತಿ, ಪರಂಪರೆ ಮತ್ತು ಪ್ರವಾಸೋದ್ಯಮದ ಆಕರ್ಷಣೆ
ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದ ವೈವಿಧ್ಯಮಯ ಇತಿಹಾಸ, ಯಕ್ಷಗಾನ, ಕರ್ನಾಟಕ ಸಂಗೀತ ಹಾಗೂ ಹಂಪಿ, ಪಟ್ಟದಕಲ್ಲಿನಂತಹ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ಉಲ್ಲೇಖಿಸಿದರು. "ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳಿಂದ ಹಿಡಿದು ವೈಭವೋಪೇತ ಅರಮನೆಗಳವರೆಗೆ ನಮ್ಮ ರಾಜ್ಯವು ವೈವಿಧ್ಯಮಯ ಪ್ರವಾಸೋದ್ಯಮದ ಅನುಭವಗಳನ್ನು ನೀಡುತ್ತದೆ. ಬನ್ನಿ, ಕರ್ನಾಟಕವನ್ನು ಶೋಧಿಸಿ," ಎಂದು ಅವರು ಆಹ್ವಾನಿಸಿದರು.
ಬೆಂಗಳೂರು ಟೆಕ್ ಸಮಿಟ್-2025: ಭವಿಷ್ಯಕ್ಕೆ ವೇದಿಕೆ
ನವೆಂಬರ್ 18 ರಿಂದ 20ರವರೆಗೆ ನಡೆಯಲಿರುವ ಟೆಕ್ ಸಮಿಟ್ ಬಗ್ಗೆ ಮಾಹಿತಿ ನೀಡಿದ ಅವರು, "'ಭವಿಷ್ಯೀಕರಿಸುವಿಕೆ' (Futurifying) ಎಂಬ ವಿಷಯದಡಿ ಈ ಸಮ್ಮೇಳನ ನಡೆಯಲಿದೆ. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಆರೋಗ್ಯ ಮತ್ತು ಹವಾಮಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಅನ್ವೇಷಣೆಗಳಿಗೆ ಇದು ವೇದಿಕೆ ಒದಗಿಸಲಿದೆ. ಈ ವರ್ಷ 60 ದೇಶಗಳ 1200 ಪ್ರದರ್ಶಕರು, 600 ಭಾಷಣಕಾರರು ಮತ್ತು ಸುಮಾರು 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
2017ರಲ್ಲಿ ಪ್ರಾರಂಭವಾದ 'ಜಾಗತಿಕ ನಾವೀನ್ಯತಾ ಮೈತ್ರಿ' (GIA) ಈಗ 35 ದೇಶಗಳಿಗೆ ವಿಸ್ತರಿಸಿದೆ. ಶಿಕ್ಷಣ, ಸಂಶೋಧನೆ, ಶುದ್ಧ ಇಂಧನ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಸಹಯೋಗ ಬೆಳೆಸಲು ಜಾಗತಿಕ ಸಮುದಾಯವನ್ನು ಆಹ್ವಾನಿಸಿದ ಸಿದ್ದರಾಮಯ್ಯ, "ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಪಾಲ್ಗೊಂಡು, ನಾವು ಒಟ್ಟಾಗಿ ಶಾಶ್ವತ ಹಾಗೂ ಪ್ರೇರಣಾದಾಯಕ ಪಾಲುದಾರಿಕೆಯ ಸೇತುವೆಯನ್ನು ಕಟ್ಟೋಣ," ಎಂದು ಹೇಳಿದರು.