ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌! ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ನಿರೀಕ್ಷೆ

ಜೂನ್ 26 ಮತ್ತು 27 ರಂದು ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ. ಈ ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.;

Update: 2025-06-22 04:53 GMT

ಕರ್ನಾಟಕದಲ್ಲಿ ಮುಂಗಾರು ಬಿರುಸುಗೊಂಡಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ (IMD) ಜೂನ್ 26ರವರೆಗೆ ಈ ಪ್ರದೇಶಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಇಂದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಗುಡುಗು ಸಹಿತ ಭಾರಿ ಮಳೆಗೆ ಸಾಕ್ಷಿಯಾಗಲಿವೆ.

ರಾಜಧಾನಿ ಬೆಂಗಳೂರು ಕೂಡ ಮಳೆಯ ಸಿಂಚನವನ್ನು ಪಡೆಯಲಿದೆ. ಮುಂದಿನ 24 ಗಂಟೆಗಳಲ್ಲಿ ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಗಾಳಿಯೊಂದಿಗೆ ಹಗುರ ಮಳೆಯಾಗುವ ನಿರೀಕ್ಷೆ ಇದೆ. ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಇಂದು ಮತ್ತು ಜೂನ್ 23, 24, 25 ರಂದು ಭಾರಿ ಮಳೆ/ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಭಾರಿ ಮಳೆಯ ಆರ್ಭಟ ನಿರೀಕ್ಷಿಸಲಾಗಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾದರೆ, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮೈಸೂರು, ಹಾಸನ, ಚಾಮರಾಜನಗರ, ರಾಮನಗರ, ಕೋಲಾರ, ಮಂಡ್ಯ, ದಾವಣಗೆರೆ, ತುಮಕೂರು ಜಿಲ್ಲೆಗಳಲ್ಲಿ ಜೂನ್ 22 ರಿಂದ 25 ರವರೆಗೆ ಹಗುರ ಮಳೆಯಾಗಲಿದೆ.

26ರಿಂದ ಮಳೆಗೆ ಬಿಡುವು

ಜೂನ್ 26 ಮತ್ತು 27 ರಂದು ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ. ಈ ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

Tags:    

Similar News