ಟ್ರಂಪ್​ ಮಾತು ಕೇಳಿ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದ ಮೋದಿ : ಬಿ.ಕೆ ಹರಿಪ್ರಸಾದ್​ ಟೀಕೆ

ಟ್ರಂಪ್ ಅವರ ಹೇಳಿಕೆಯಿಂದ ಭಾರತ ತಲೆತಗ್ಗಿಸುವಂತಾಗಿದೆ. ಅವರು ಎರಡು ಬಾರಿ ಟ್ವೀಟ್ ಮಾಡಿ, ಮಧ್ಯಸ್ಥಿಕೆಯ ಬಗ್ಗೆ ಮಾತನಾಡಿದ್ದಾರೆ. ಟ್ರಂಪ್ ಹೇಳಿದ್ದು ನಿಜವೇ, ಸುಳ್ಳೇ ಎಂದು ಮೋದಿ ಉತ್ತರಿಸಬೇಕಿತ್ತು," ಎಂದು ಅಭಿಪ್ರಾಯಪಟ್ಟಿದ್ದಾರೆ.;

Update: 2025-05-13 11:52 GMT

ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ವೇಳೆ ಕೇಂದ್ರದ ಮೋದಿ ಸರ್ಕಾರ ಪ್ರದರ್ಶಿಸಿದ ವಿದೇಶಾಂಗ ನೀತಿಯನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಗೆ ಮೋದಿ ಸರ್ಕಾರ ಪ್ರತಿಕ್ರಿಯಿಸದೇ ಇರುವುದು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ಅವರು ಆರೋಪಿಸಿದ್ದಾರೆ.

'ದ ಫೆಡರಲ್ ಕರ್ನಾಟಕ' ದ ಜತೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂದೂರ್ ಮತ್ತು ಭಾರತ-ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಮೋದಿ ಸರ್ಕಾರದ ಮೌನ ಮತ್ತು ಕ್ರಮಗಳನ್ನು ಅವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಸಾಮರ್ಥ್ಯದ ಶೇಕಡಾ 1ರಷ್ಟು ಸಾಮರ್ಥ್ಯ  ಹಾಲಿ ಪ್ರಧಾನಿಗೆ ಇಲ್ಲ ಎಂದು ಹೇಳಿದ್ದಾರೆ.

ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಪ್ರಧಾನಮಂತ್ರಿ ಮೋದಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಆರೋಪಿಸಿದ ಹರಿಪ್ರಸಾದ್, "ಪಹಲ್ಗಾಮ್ ದಾಳಿಯ ನಂತರ ಸರ್ವಪಕ್ಷ ಸಭೆ ಕರೆದರೂ ಮೋದಿ ಗೈರಾಗಿದ್ದಾರೆ. ಸರ್ವಪಕ್ಷ ಸಭೆ ಕರೆದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು," ಎಂದು ಅವರು ಹೇಳಿದ್ದಾರೆ.

ಟ್ರಂಪ್ ಹೇಳಿಕೆಗೆ ಆಕ್ಷೇಪ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ತಮ್ಮ ಮಧ್ಯಸ್ಥಿಕೆಯಿಂದ ಸಾಧಿಸಲಾಗಿದೆ ಎಂದು ಹೇಳಿದ್ದಾರೆ. ವ್ಯಾಪಾರ ಕಡಿತಗೊಳಿಸುವ ಬೆದರಿಕೆಯ ಮೂಲಕ ಶತ್ರುತ್ವವನ್ನು ನಿಲ್ಲಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಹರಿಪ್ರಸಾದ್, ''ಟ್ರಂಪ್ ಅವರ ಹೇಳಿಕೆಯಿಂದ ಭಾರತ ತಲೆತಗ್ಗಿಸುವಂತಾಗಿದೆ. ಅವರು ಎರಡು ಬಾರಿ ಟ್ವೀಟ್ ಮಾಡಿ, ಮಧ್ಯಸ್ಥಿಕೆಯ ಬಗ್ಗೆ ಮಾತನಾಡಿದ್ದಾರೆ. ಇದು ದೇಶದ ಸಾರ್ವಭೌಮತ್ವದ ಪ್ರಶ್ನೆ. ಟ್ರಂಪ್ ಹೇಳಿದ್ದು ನಿಜವೇ, ಸುಳ್ಳೇ ಎಂದು ಮೋದಿ ಉತ್ತರಿಸಬೇಕಿತ್ತು," ಎಂದು ಅಭಿಪ್ರಾಯಪಟ್ಟಿದ್ದಾರೆ. .

ಮನ್ ಕಿ ಬಾತ್‌ನಲ್ಲಿ ನಿರಾಸೆ

ಮೋದಿ ಅವರ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ 140 ಕೋಟಿ ಭಾರತೀಯರಿಗೆ ಈ ವಿಷಯದ ಬಗ್ಗೆ ಸ್ಪಷ್ಟನೆ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು ಎಂದು ಹೇಳಿದ ಬಿ ಕೆ ಹಿರಿಪ್ರಸಾದ್​, "ಯಾರು ಅಸಲಿ, ಯಾರು ನಕಲಿ ಎಂದು ಮೋದಿ ಜನರಿಗೆ ತಿಳಿಸಬೇಕಿತ್ತು. ಆದರೆ, ಅವರು ಈ ಬಗ್ಗೆ ಮಾತನಾಡಿಲ್ಲ. ಶಿಮ್ಲಾ ಒಪ್ಪಂದ ಮುರಿದಂತೆ, ಎಲ್ಲವನ್ನೂ ಮೀರಿ ಮೋದಿ ಮಂಡಿಯೂರಿದ್ದಾರೆ," ಎಂದು ಅವರು ಲೇವಡಿ ಮಾಡಿದರು.

ಇಂದಿರಾ ಗಾಂಧಿಗಿದ್ದ ತಾಕತ್ತು ಮೋದಿಗಿಲ್ಲ 

ಹರಿಪ್ರಸಾದ್ ಅವರು ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಧೈರ್ಯವನ್ನು ಸ್ಮರಿಸಿಕೊಂಡಿದ್ದಾರೆ. "ಅಮೆರಿಕವು ಇಂದಿರಾ ಗಾಂಧಿಯವರ ವಿರುದ್ಧ ಕೀಳು ಪದಗಳನ್ನು ಬಳಸಿತ್ತು. ಆದರೆ, ಅವರು ಬಗ್ಗಲಿಲ್ಲ. ಬಾಂಗ್ಲಾದೇಶದ ಮೇಲೆ ಯುದ್ಧ ಘೋಷಿಸಿ, 18 ದಿನಗಳಲ್ಲಿ ಗೆದ್ದು ತೋರಿಸಿದರು. 93,000 ಪಾಕಿಸ್ತಾನಿ ಸೈನಿಕರು ಶರಣಾಗತರಾದರು. ಇಂದಿರಾ ಗಾಂಧಿಯವರು ತೋರಿಸಿದ ಧೈರ್ಯದ ಶೇಕಡಾ 1ರಷ್ಟು ಕೂಡ ಮೋದಿ ತೋರಿಸಿಲ್ಲ," ಎಂದು ಹೇಳಿದ್ದಾರೆ.

ವಿದೇಶಾಂಗ ನೀತಿಯ ವೈಫಲ್ಯ

ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸರ್ಕಾರಕ್ಕೆ ಬೆಂಬಲ ನೀಡಿದ್ದರೂ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ. "ವಿದೇಶಾಂಗ ನೀತಿ ಜಾರಿಯಲ್ಲಿ ನಾವು ಎಡವಿದ್ದೇವೆ. ನಮ್ಮ ನೆರೆಯ ರಾಷ್ಟ್ರಗಳು ನಮ್ಮ ಜೊತೆಗಿಲ್ಲ. ಭಾರತ ಕೇವಲ ವ್ಯಾಪಾರದ ದೇಶವಲ್ಲ, ಎಲ್ಲವನ್ನೂ ಅಮೆರಿಕ ಹೇಳಿದಂತೆ ಕೇಳಲು ಆಗುವುದಿಲ್ಲ," ಎಂದು ಅವರು ಒತ್ತಿ ಹೇಳಿದ್ದಾರೆ.

Tags:    

Similar News