ಆರ್‌ಎಸ್‌ಎಸ್ ವಿರುದ್ಧ ಶಾಸಕರ ಹೇಳಿಕೆ; ಹಳೆಯ ವಿಡಿಯೋ ಹಂಚಿಕೊಂಡು ಬಿಜೆಪಿ ಕಾಲೆಳೆದ ಕಾಂಗ್ರೆಸ್
ಬಿಜೆಪಿ ಶಾಸಕ ಸುರೇಶ್‌ಗೌಡ ಆರ್‌ಎಸ್‌ಎಸ್ ವಿರುದ್ಧ ಈ ಹಿಂದೆ ಮಾತನಾಡಿದ್ದ ವಿಡಿಯೊವನ್ನು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಹಂಚಿಕೊಂಡಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ.
ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನ ವಿಚಾರವು ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ರಾಜಕೀಯ ಕೋಲಾಹಲ ಸೃಷ್ಟಿಸುತ್ತಿದೆ. ಜತೆಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿದೆ.
ಈ ಮಧ್ಯೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್‌ಗೌಡ ಅವರು ಈ ಹಿಂದೆ ಆರ್‌ಎಸ್‌ಎಸ್ ಟೀಕಿಸಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊಗಳಿ ಮಾತನಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾಂಗ್ರೆಸ್ ನಾಯಕರು ಕೂಡ ಈ ವಿಡಿಯೊ ಹಂಚಿಕೊಂಡು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇಬ್ಬರೂ ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡು ಟೀಕಾಪ್ರಹಾರ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ತಮ್ಮ ಸಾಮಾಜಿಕ ಮಾಧ್ಯಮ ʼಎಕ್ಸ್ʼನಲ್ಲಿ ಆರ್‌ಎಸ್‌ಎಸ್ ಈ ದೇಶ, ಸಮಾಜ, ಸಂವಿಧಾನಕ್ಕೆ ಮಾತ್ರ ಮಾರಕವಲ್ಲ. ಸ್ವತಃ ಬಿಜೆಪಿ ನಾಯಕರಿಗೂ ಮಾರಕವಾಗಿದೆ..! ಈ ಸತ್ಯವನ್ನು ಹೇಳಿದ್ದು ಬಿಜೆಪಿಯವರೇ ಹೊರತು ನಾವಲ್ಲ. ಆರ್‌ಎಸ್‌ಎಸ್‌ನವರು ಕಡುಭ್ರಷ್ಟರು ಎಂಬ ಸತ್ಯವನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡರೇ ಹೇಳಿದ್ದಾರೆ. ಇದಕ್ಕೆ ಉತ್ತರ ಹೇಳುವ ಧೈರ್ಯ ಬಿಜೆಪಿ ನಾಯಕರಾದ ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಅವರಿಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಆರ್‌ಎಸ್‌ಎಸ್ ಸರ್ವಾಧಿಕಾರಿತನಕ್ಕೆ ಬಿಜೆಪಿಯ ಬಲಿಷ್ಠ ನಾಯಕರೂ ಬಲಿಯಾಗಿ ಬಿಲ ಸೇರಿದ್ದಾರೆ. ಆರ್‌ಎಸ್‌ಎಸ್ ಎಂಬ ವಿಷಜಂತು ಬಿಜೆಪಿಯವರನ್ನೂ ಸುಟ್ಟು ಬೂದಿ ಮಾಡಿದೆ. ಈಗ ಬಿಜೆಪಿಯವರು ಸ್ಪರ್ಧೆಗೆ ಬಿದ್ದವರಂತೆ ಆರ್‌ಎಸ್‌ಎಸ್ ಪರ ಸಮರ್ಥನೆಗೆ ಇಳಿದು ನಮ್ಮನ್ನು ನಿಂದಿಸುತ್ತಿದ್ದಾರೆ. ಬಿಜೆಪಿಯವರ ಈ ಸಮರ್ಥನಾ ಅಭಿಯಾನ ನಡೆಯುತ್ತಿರುವುದು ಆರ್‌ಎಸ್‌ಎಸ್ ಮೇಲಿನ ಭಕ್ತಿಯಿಂದಲ್ಲ, ಭಯದಿಂದ..! ಆರ್‌ಎಸ್‌ಎಸ್‌ನ ಕಾಲಾಳುಗಳಂತೆ ವರ್ತಿಸದಿದ್ದರೆ ಬಿಜೆಪಿಯವರಿಗೆ ಭವಿಷ್ಯವೂ ಇಲ್ಲ, ಬದುಕೂ ಇಲ್ಲ ಎಂದು ಟೀಕಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರನ್ನು ಮೂಲೆಗೆ ತಳ್ಳಿದ ಇದೇ ಆರ್‌ಎಸ್‌ಎಸ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನೂ ನೆಮ್ಮದಿಯಾಗಿರಲು ಬಿಟ್ಟಿರಲಿಲ್ಲ. ಕೊನೆಗೂ ಎಳೆದು ಮೂಲೆಗೆ ಕೂರಿಸುವಲ್ಲಿ ಯಶಸ್ವಿಯಾಗಿತ್ತು ಎಂದು ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ಗುಲಾಮಗಿರಿ ಮಾಡದಿದ್ದರೆ ತಮ್ಮ ತಂದೆಯವರಿಗಾದ ಗತಿ ತಮಗೂ ಆಗಬಹುದೆಂಬ ಭಯ ವಿಜಯೇಂದ್ರರಿಗೆ ಇರಬಹುದೇನೋ?, ಸುರೇಶ್ ಗೌಡರ ಹೇಳಿಕೆ ಹೊರಬಂದ ನಂತರವೂ ಅವರ ವಿರುದ್ದ ಯಾವುದೇ ಕ್ರಮ ಜರುಗಿಸದೆ ಅವರಿಗೆ ಟಿಕೆಟ್ ನೀಡಿ ಅವಕಾಶ ಕಲ್ಪಿಸಲಾಗಿತ್ತು ಎಂದರೆ ಏನರ್ಥ?, ಅವರಿಂದ ಆರ್‌ಎಸ್‌ಎಸ್ ಬಗೆಗಿನ ಇನ್ನಷ್ಟು ನಿಗೂಢ ಸತ್ಯಗಳು ಹೊರಬಾರದಿರಲಿ ಎಂಬ ಉದ್ದೇಶದಿಂದ ಅಲ್ಲವೇ?, ಯಡಿಯೂರಪ್ಪನವರಂತೆ ಇನ್ನೆಷ್ಟು ಜನ ಸಂಘಕ್ಕೆ ಅಕ್ರಮ ಹಣದ ಕಾಣಿಕೆ ಸಲ್ಲಿಸಿದ್ದಾರೆ? , ಈ ಹಣ ಹವಾಲಾ ಮೂಲಕ ತಲುಪುತ್ತದೆಯೇ ಅಥವಾ ಆರ್‌ಟಿಜಿಎಸ್ ಮೂಲಕ ತಲುಪುತ್ತದೆಯೇ?, ಸಂಘಪರಿವಾರಕ್ಕೆ ಎಷ್ಟು ಭೂಮಿಯನ್ನು ಅಕ್ರಮದ ಮೂಲಕ ದಯಪಾಲಿಸಲಾಗಿದೆ?, ಆರ್‌ಎಸ್‌ಎಸ್‌ನ ಈ ಎಲ್ಲಾ ವ್ಯವಹಾರಗಳು ನಿಗೂಢವಾಗಿಯೂ, ರಹಸ್ಯವಾಗಿಯೂ ಇರುವುದೇಕೆ? , ಐಟಿ, ಇಡಿ, ಸಿಬಿಐಗಳು ಈ ಅಕ್ರಮ, ಅವ್ಯವಹಾರಗಳತ್ತ ಗಮನಿಸುವುದಿಲ್ಲವೇ? ಎಂಬ ಪ್ರಶ್ನೆಗಳ ಸರಮಾಲೆಯೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಭ್ರಷ್ಟಾಚಾರದ ಹಣವು ಸಂಘದ ಸೇವೆಗೆ ಸಲ್ಲಿಕೆಯಾಗಿರುವ ಇನ್ನೆಷ್ಟು ಪ್ರಕರಣಗಳಿವೆ ಎಂಬ ಸತ್ಯ ಬಯಲಿಗಿಡಬೇಕಿದೆ. ಎಷ್ಟೆಷ್ಟು ಸರ್ಕಾರದ ಹಣ "ಸಂಘ ಸಮರ್ಪಣಾಮಸ್ತು" ಆಗಿದೆ ಎಂಬುದನ್ನು ತಿಳಿಯಬೇಕಿದೆ. ಬಿಜೆಪಿ ಹಾಗೂ ಸಂಘದ ನಡುವಿನ ಅಕ್ರಮ ಹಾಗೂ ಅನೈತಿಕ ವ್ಯವಹಾರಗಳನ್ನು ಹೊರಗೆಳೆಯಬೇಕಿದೆ. ಯಡಿಯೂರಪ್ಪನವರು ಕಾಲಕಾಲಕ್ಕೆ ಆರ್‌ಎಸ್‌ಎಸ್‌ಗೆ ದುಬಾರಿ ಕಾಣಿಕೆ ನೀಡುತ್ತಾ ಕೇಶವ ಕೃಪೆಗೆ ಪಾತ್ರರಾಗಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುತ್ತಾ ಬಂದಿದ್ದಾರೆ. ನೋಂದಣಿಯಾಗದ ಸಂಘವು ತನ್ನ ಇತರ ಅಂಗಸಂಸ್ಥೆಗಳ ಮೂಲಕ ವಸೂಲಿ ದಂಧೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಗೆ ಟ್ವಿಟರ್ ಮೂಲಕ ಪ್ರಶ್ನೆ
ಇನ್ನೊಂದೆಡೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದು, ಶಾಸಕ ಹೇಳಿಕೆ ಹಿನ್ನೆಲೆಯಲ್ಲಿ ಸಂಘದ ನೋಂದಣಿ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ರಾಜ್ಯದಲ್ಲಿನ ನಿಮ್ಮ ಬಿಜೆಪಿ ಶಾಸಕ ಹೇಳುವ ಪ್ರಕಾರ ಬಿಜೆಪಿ ಪಕ್ಷವನ್ನು ವಿಶ್ವದ ಅತಿದೊಡ್ಡ ಎನ್‌ಜಿಒ ನಿಯಂತ್ರಿಸುತ್ತಿದೆಯಂತೆ. ಅವರ ಪ್ರಕಾರ, ಬಿಜೆಪಿ ನಾಯಕರು ಆರ್‌ಎಸ್‌ಎಸ್‌ಗೆ ಅಧೀನರಾಗಿದ್ದಾರೆ. ಆರ್‌ಎಸ್‌ಎಸ್ ನಕಲಿ ದೇಶ ಭಕ್ತರು. ಆರ್‌ಎಸ್‌ಎಸ್ ಅತ್ಯಂತ ಭ್ರಷ್ಟ ಸಂಘಟನೆಯಾಗಿದ್ದು, ಅದಕ್ಕೆ ಸಂಬಂಧಿಸಿದವರು ನಗದು ಅಥವಾ ಭೂಮಿ ರೂಪದಲ್ಲಿ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಆರ್‌ಎಸ್‌ಎಸ್ ಅತ್ಯಂತ ಭ್ರಷ್ಟ ಮತ್ತು ಶಕ್ತಿಶಾಲಿ. ಆರ್‌ಎಸ್‌ಎಸ್ ಫಲಾನುಭವಿಗಳ ಪಟ್ಟಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಇದೆ. ಅವರು ಅಧಿಕಾರ ಉಳಿಸಿಕೊಳ್ಳಲು ಆರ್‌ಎಸ್‌ಎಸ್‌ಗೆ ಹಣ ನೀಡಿದ್ದರು. ಆರ್‌ಎಸ್‌ಎಸ್ ಪತ್ರಿಕೆಗಳಿಗೆ ಯಡಿಯೂರಪ್ಪನವರು ಹಣ ನೀಡುವ ಮೂಲಕ ಲಾಭ ಮಾಡಿಕೊಟ್ಟಿದ್ದಾರೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ದೇಶಿಸಲಾದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ 100 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಈ ಸೋಕಾಲ್ಡ್ "ಎನ್‌ಜಿಒ" ಲೂಟಿ ಮಾಡಿದೆ ಎಂಬ ಸ್ಪೋಟಕ ವಿಷಯವನ್ನು ತನಿಖೆಗಳು ಬಹಿರಂಗಪಡಿಸಿವೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ವಿರುದ್ಧ ಕೋರ್ಟ್ ಮೊರೆ ಹೋಗುವ ಎಚ್ಚರಿಕೆ
ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡಿರುವ ಶಾಸಕ ಸುರೇಶ್‌ಗೌಡ, ನಕಲಿ ವಿಡಿಯೊ ಮೂಲಕ ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಈ ವಿಡಿಯೊ ಸಂಬಂಧ ಈಗಾಗಲೇ ನ್ಯಾಯಾಲಯ ತಡೆ ನೀಡಿದೆ. ಕಾಂಗ್ರೆಸ್ ನಾಯಕರು ಈ ಸಂಬಂಧ ಸ್ಪಷ್ಟನೆ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.