ಹನಿಟ್ರ್ಯಾಪ್ ಪ್ರಕರಣ | ನಾಪತ್ತೆಯಾಗಿದ್ದ ಮುಮ್ತಾಜ್ ಆಲಿ ಶವವಾಗಿ ಪತ್ತೆ!
ಭಾನುವಾರ ಮಂಗಳೂರಿನ ಕುಳೂರಿನ ಸೇತುವೆ ಮೇಲೆ ಮುಮ್ತಾಜ್ ಅವರ BMW X5 ಕಾರು ಪತ್ತೆಯಾಗಿತ್ತು. ಈಜು ತಜ್ಞ ಈಶ್ವರ್ ಮಲ್ಪೆ ಅವರು ಮುಮ್ತಾಜ್ ಶೋಧ ನಡೆಸಿದ್ದರು. ಸತತ 28 ಗಂಟೆಗಳ ಕಾರ್ಯಾಚರಣೆ ಬಳಿಕ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ.;
ನಾಪತ್ತೆಯಾಗಿದ್ದ ಮುಮ್ತಾಜ್ ಆಲಿ ಅವರ ಮೃತದೇಹ ಮಂಗಳೂರಿನ ಕುಳೂರು ಸೇತುವೆ ಅಡಿ ಭಾಗದಲ್ಲಿ ಪತ್ತೆಯಾಗಿದೆ. ಮುಮ್ತಾಜ್ ಅಲಿ ಅವರು ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ.
ಭಾನುವಾರ ನಾಪತ್ತೆಯಾಗಿದ್ದ ಅವರ ಪತ್ತೆಗಾಗಿ ಹುಡುಕಾಟ ನಡೆಸಲಾಗಿತ್ತು. 24 ಗಂಟೆಗಳ ಹುಡುಕಾಟದ ಬಳಿಕ ಕೊನೆಗೂ ಮೃತದೇಹ ಪತ್ತೆಯಾಗಿದ್ದು, ನಿನ್ನೆ ಬೆಳಿಗ್ಗೆ 4.40 ರಿಂದ 5 ಗಂಟೆ ಹೊತ್ತಿಗೆ ನದಿಗೆ ಮುಮ್ತಾಜ್ ಹಾರಿದ್ದಾರೆ ಎನ್ನಲಾಗಿದೆ. ತಣ್ಣೀರು ಬಾವಿ ಈಜುಗಾರರ ತಂಡಕ್ಕೆ ಮೃತದೇಹ ಸಿಕ್ಕಿದೆ.
ಭಾನುವಾರ ಮಂಗಳೂರಿನ ಕುಳೂರಿನ ಸೇತುವೆ ಮೇಲೆ ಮುಮ್ತಾಜ್ ಅವರ BMW X5 ಕಾರು ಪತ್ತೆಯಾಗಿತ್ತು. ಈಜು ತಜ್ಞ ಈಶ್ವರ್ ಮಲ್ಪೆ ಅವರು ಮುಮ್ತಾಜ್ ಶೋಧ ಕಾರ್ಯಾಚರಣೆ ನಡೆಸಿದ್ದರು. ಸತತ 28 ಗಂಟೆಗಳ ಕಾರ್ಯಾಚರಣೆ ಬಳಿಕ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ.
ಘಟನೆ ಹಿನ್ನೆಲೆ
ಮೃತ ಮುಮ್ತಾಜ್ ಅಲಿ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವ ಮತ್ತು ಮಾಜಿ MLC ಆಗಿರುವ ಬಿ.ಎಮ್.ಫಾರೂಕ್ ಅವರ ತಮ್ಮ. ಇವರು ಭಾನುವಾರ ಬೆಳ್ಳಂಬೆಳಗ್ಗೆ ನಾಪತ್ತೆಯಾಗಿದ್ದರು. ಕುಳೂರು ಸೇತುವೆ ಮೇಲೆ ತಮ್ಮ ಐಷಾರಾಮಿ BMW ಕಾರು ನಿಲ್ಲಿಸಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಹೀಗಾಗಿ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಕೋಸ್ಟ್ ಗಾರ್ಡ್, ಎಫ್,ಎಸ್ ಡಿಆರ್ ಎಫ್, ಅಗ್ನಿಶಾಮಕ ದಳ, ಈಶ್ವರ್ ಮಲ್ಪೆ ಸೇರಿದಂತೆ ಮುಳುಗು ತಜ್ಞರು ಶೋಧ ಕಾರ್ಯ ನಡೆಸಿದ್ದರು. ಸದ್ಯ ಈಗ ಮೃತದೇಹ ಪತ್ತೆಯಾಗಿದೆ.
ಬ್ಲಾಕ್‌ಮೇಲ್‌ಗೆ ಬೇಸತ್ತು ಆತ್ಮಹತ್ಯೆ?
ಮಹಿಳೆಯೊಬ್ಬರ ಬ್ಲಾಕ್ ಮೇಲ್ ನಿಂದ ಮುಮ್ತಾಜ್ ಅವರು ಭಾರೀ ಹಣ ಕಳೆದುಕೊಂಡಿದ್ದರು ಎನ್ನಲಾಗಿದೆ. ಹಲವು ತಿಂಗಳಿಂದ ಮಹಿಳೆಗೆ ಮುಮ್ತಾಜ್ ಅಲಿ ಲಕ್ಷ ಲಕ್ಷ ಹಣವನ್ನು ನೀಡಿದ್ದರು. ಆದರೆ ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದ ಮಹಿಳೆ, ಹಣದ ಜೊತೆಗೆ ಮದುವೆ ಆಗುವಂತೆಯೂ ಟಾರ್ಚರ್ ಕೊಟ್ಟಿದ್ದಳು. ಆದರೆ ಇದಕ್ಕೆ ಒಪ್ಪದೇ ಹಣ ಕೊಡೋದನ್ನೂ ಮುಮ್ತಾಜ್ ನಿಲ್ಲಿಸಿದ್ದರು.
ಮುಮ್ತಾಜ್ ಅವರನ್ನು ಹನಿಟ್ರ್ಯಾಪ್ ಮಾಡಿ, ಆಡಿಯೋ ಮುಂದಿಟ್ಟು ನಿರಂತರ ಬ್ಲಾಕ್ ಮೇಲ್ ಮಾಡಲಾಗಿತ್ತು. ಎರಡು ಕೋಟಿ ರೂ. ಹಣ ಕೊಡದೇ ಇದ್ದರೆ ಆಡಿಯೋ ವೈರಲ್ ಮಾಡ್ತೇವೆ ಎಂದು ಬೆದರಿಕೆ ಹಾಕಿದ್ದರು. ಕೊನೆಗೆ 25 ಲಕ್ಷ ಕೊಟ್ಟರೂ ಮತ್ತೆ ಮತ್ತೆ ನಿರಂತರ ಬೆದರಿಕೆ ಹಾಕಿದ್ದು, ಹಣ ಕೊಡಲು ಒಪ್ಪದೇ ಇದ್ದಾಗ ಕುಟುಂಬಸ್ಥರಿಗೆ ವಿಷಯವನ್ನು ತಿಳಿಸಿದ್ದರು. ಈ ಘಟನೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮುಮ್ತಾಜ್ ಆಲಿ ಸಹೋದರ ಹೈದರ್ ದೂರು ಆಧರಿಸಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯೆಬ್ ಹಾಗೂ ಸಿರಾಜ್ ವಿರುದ್ದ ಎಫ್ಐಆರ್ ದಾಖಲಾಗಿದೆ.