15 ವರ್ಷದ ಬಾಲಕಿ ಮಗುವಿಗೆ ಜನ್ಮ, ಬಾಲ್ಯವಿವಾಹದ ಕರಾಳ ಮುಖ ಬಯಲಿಗೆ
ಬಾಲಕಿಯ ಗರ್ಭಧಾರಣೆ ಮತ್ತು ಹೆರಿಗೆ ಕುರಿತು ವಿವರಗಳನ್ನು ಆರ್‌ಸಿಎಚ್ ಪೋರ್ಟಲ್ ಮೂಲಕ ಪತ್ತೆಹಚ್ಚಲಾಗಿದೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.;
ಸಾಂದರ್ಭಿಕ ಚಿತ್ರ
: 15 ವರ್ಷದ ಬಾಲಕಿ ಮಗುವಿಗೆ ಜನ್ಮ, ಬಾಲ್ಯವಿವಾಹದ ಕರಾಳ ಮುಖ ಬಯಲಿಗೆ
ಕೇವಲ 15 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಯಾದಗಿರಿ ಜಿಲ್ಲೆಯ ಕೊಡೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯು ರಾಜ್ಯದಲ್ಲಿ ಇನ್ನೂ ಜೀವಂತವಾಗಿರುವ ಬಾಲ್ಯವಿವಾಹ ಪದ್ಧತಿಯ ಕರಾಳ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.
ಈ ಸಂಬಂಧ ಬಾಲಕಿಯ ಪತಿ, ಆಕೆಯ ಪೋಷಕರು ಹಾಗೂ ಅತ್ತೆ-ಮಾವಂದಿರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸದಾಶಿವ ಮಲ್ಲೇಶಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಬಾಲಕಿಗೆ ಜೂನ್ 2021ರಲ್ಲಿ, ಆಕೆಗೆ ಕೇವಲ 13 ವರ್ಷವಿದ್ದಾಗ ಬಾಲ್ಯವಿವಾಹ ಮಾಡಲಾಗಿತ್ತು. ವಿವಾಹದ ನಂತರ ಗರ್ಭಿಣಿಯಾಗಿದ್ದ ಬಾಲಕಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (RCH) ಪೋರ್ಟಲ್‌ನಲ್ಲಿ ಬಾಲಕಿಯ ಗರ್ಭಧಾರಣೆ ಮತ್ತು ಹೆರಿಗೆಯ ವಿವರಗಳು ದಾಖಲಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಹಲವಾರು ಪ್ರಕರಣಗಳು ವರದಿಯಾಗುತ್ತಿವೆ. ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಳ್ಳಿಮನಿ ಅವರೇ ಬಾಲ್ಯವಿವಾಹ ಮಾಡಿಕೊಂಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಅವರ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಲ್ಲದೆ, ಯಾದಗಿರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾದ ಪ್ರಕರಣಗಳು ವರದಿಯಾಗಿವೆ.