ತನ್ನದೇ ಬಾಲ್ಯ ವಿವಾಹ ತಡೆದ ವಿದ್ಯಾರ್ಥಿನಿ: ಸಹಾಯವಾಣಿ 1098ಕ್ಕೆ ಕರೆ ಮಾಡಿ ಭವಿಷ್ಯ ಉಳಿಸಿಕೊಂಡಳು!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಬಾಲಕಿಯ ಮನೆಗೆ ಭೇಟಿ ನೀಡಿದರು. ಅವರು ಪೋಷಕರಿಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಮದುವೆಯನ್ನು ತಡೆದಿದ್ದಾರೆ.;
ಬಾಲ್ಯ ವಿವಾಹ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಉನ್ನತ ಶಿಕ್ಷಣದ ಕನಸು ಕಾಣುತ್ತಿದ್ದ ವಿದ್ಯಾರ್ಥಿನಿಯೊಬ್ಬಳು, ಪೋಷಕರು ನಿಶ್ಚಯಿಸಿದ್ದ ತನ್ನದೇ ಬಾಲ್ಯ ವಿವಾಹವನ್ನು ತಡೆಯಲು ಧೈರ್ಯದಿಂದ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಹೂವಿನ ಹಡಗಲಿ ತಾಲೂಕಿನ ಈ ವಿದ್ಯಾರ್ಥಿನಿಗೆ ಪೋಷಕರು ಮದುವೆಯಾಗುವಂತೆ ತೀವ್ರ ಒತ್ತಡ ಹೇರಿದ್ದರು. ಆದರೆ, ತನ್ನ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಕುರಿತು ನಡೆದಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಸಹಾಯವಾಣಿಯ ಮಹತ್ವವನ್ನು ಅರಿತಿದ್ದ ಆಕೆ, ಪೋಷಕರ ಒತ್ತಡಕ್ಕೆ ಮಣಿಯದೆ ತಕ್ಷಣವೇ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.
ಕರೆಯನ್ನು ಸ್ವೀಕರಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಾಲಕಿಯ ಮನೆಗೆ ಭೇಟಿ ನೀಡಿದ್ದಾರೆ. ಪೋಷಕರಿಗೆ ಬಾಲ್ಯ ವಿವಾಹದ ಕಾನೂನುಬಾಹಿರ ಸ್ವರೂಪ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಮದುವೆಯನ್ನು ಯಶಸ್ವಿಯಾಗಿ ತಡೆದಿದ್ದಾರೆ. ಅಲ್ಲದೆ, ಪೋಷಕರಿಗೆ ಎಚ್ಚರಿಕೆ ನೀಡಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, "ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಬಾಲ್ಯ ವಿವಾಹ ತಡೆಗಟ್ಟಲು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಇದರ ಫಲವಾಗಿ ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿನಿಯರಿಗೆ ಈ ಬಗ್ಗೆ ಅರಿವು ಮೂಡಿಸುತ್ತಿದ್ದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ಇಂತಹ ಪ್ರಕರಣಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ" ಎಂದು ತಿಳಿಸಿದರು.
ಚಿತ್ರದುರ್ಗದಲ್ಲೂ ಜಾಗೃತಿಯ ಫಲ
ಇತ್ತೀಚೆಗೆ ಚಿತ್ರದುರ್ಗದಲ್ಲಿಯೂ ಇದೇ ಮಾದರಿಯ ಘಟನೆಯೊಂದು ನಡೆದಿತ್ತು. 16 ವರ್ಷದ ಬಾಲಕಿಯೊಬ್ಬಳು, ತನಗಿಂತ ಹೆಚ್ಚು ವಯಸ್ಸಿನ, ಇತ್ತೀಚೆಗೆ ಪತ್ನಿಯನ್ನು ಕಳೆದುಕೊಂಡ ವ್ಯಕ್ತಿಯೊಂದಿಗೆ ಪೋಷಕರು ನಿಶ್ಚಯಿಸಿದ್ದ ಮದುವೆಯನ್ನು ವಿರೋಧಿಸಿ, ನೇರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು.
8ನೇ ತರಗತಿಯಲ್ಲಿದ್ದಾಗ ಶಾಲೆಗೆ ಭೇಟಿ ನೀಡಿದ್ದ ಪೊಲೀಸ್ ಸಿಬ್ಬಂದಿ ನೀಡಿದ್ದ ಜಾಗೃತಿ ಮಾಹಿತಿಯನ್ನು ನೆನಪಿಸಿಕೊಂಡ ಆಕೆ, "ನನಗೆ ಮದುವೆಯಾಗಲು ಇಷ್ಟವಿಲ್ಲ, ಆದರೆ ನನ್ನ ಪೋಷಕರು ಮತ್ತು ಅಣ್ಣ ಸೇರಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ," ಎಂದು ದೂರು ನೀಡಿದ್ದಳು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ನವೀನ್ ಕುಮಾರ್, ಬಾಲಕಿಯ ಕುಟುಂಬವನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ಮದುವೆಯನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಗಿದ್ದರು.