ಇವಿಎಂ ಮತ ಯಂತ್ರ | ಬಿಜೆಪಿಯ ದ್ವಿಮುಖ ನೀತಿ- ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರಿನಲ್ಲಿ ಎಥಿಕಲ್ ಇವಿಎಂ ಹ್ಯಾಕಥಾನ್ ನಡೆಸುವಂತೆ ಚುನಾವಣಾ ಆಯೋಗಕ್ಕೆ ಈ ಹಿಂದೆ ನಾನು ಪತ್ರ ಬರೆದಿದ್ದೆ, ಇದುವರೆಗೂ ನನ್ನ ಪತ್ರಕ್ಕೆ ಉತ್ತರ ನೀಡಿಲ್ಲವೇಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.;
ಸಚಿವ ಪ್ರಿಯಾಂಕ ಖರ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿಯವರೇ ಈ ಹಿಂದೆ ವಿದ್ಯುನ್ಮಾನ ಮತಯಂತ್ರ ಬಳಕೆ ವಿರೋಧಿಸಿ ಬ್ಯಾಲೆಟ್ ಪೇಪರ್ ಪರವಾಗಿದ್ದ ಸಂಗತಿಯನ್ನು ಮರೆತಂತಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ʼಎಕ್ಸ್ʼನಲ್ಲಿ ಪ್ರತಿಕ್ರಿಯಿಸಿರುವ ಅವರು, ಇವಿಎಂ ಬಗ್ಗೆ ಅಪಸ್ವರ ಎತ್ತಿರುವ ಬಿಜೆಪಿ ನಾಯಕರಿಗೆ ನೆನಪಿಸಲು ಬಯಸುತ್ತೇನೆ, ಬಿಜೆಪಿಗರಿಗಿರುವುದು ಬರೀ ಮರೆವಲ್ಲ, ಜಾಣ ಮರೆವು! ಎಂದು ವಾಗ್ದಾಳಿ ನಡೆಸಿದ್ದಾರೆ.
ಇವಿಎಂ ಯಂತ್ರಗಳು ಸಂವಿಧಾನ ವಿರೋಧಿ ಮಾತ್ರವಲ್ಲ, ದುರ್ಬಳಕೆಗೆ ದಾರಿ ಮಾಡಿಕೊಡುತ್ತವೆ ಎಂದು ಪುಸ್ತಕ ಬರೆದವರು ಬಿಜೆಪಿ ಪಕ್ಷದ ನಾಯಕರಾದ ಸುಬ್ರಮಣ್ಯಸ್ವಾಮಿ ಮತ್ತು ಕಲ್ಯಾಣರಾಮನ್. ಇವಿಎಂಗಳನ್ನು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು “ಡೆಮಾಕ್ರಸಿ ಅಟ್ ರಿಸ್ಕ್“ ಎಂಬ ಪುಸ್ತಕ ಬರೆದವರು ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ವಕ್ತಾರ ಜಿವಿಎಲ್ ನರಸಿಂಹರಾವ್. ಇವಿಎಂಗಳನ್ನು ಕಟುವಾಗಿ ವಿರೋಧಿಸಿದ ಬಿಜೆಪಿಯ ಉನ್ನತ ನಾಯಕ ಎಲ್. ಕೆ ಅಡ್ವಾಣಿ ಅವರೇ ʼಡೆಮಾಕ್ರಸಿ ಅಟ್ ರಿಸ್ಕ್ʼ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು ಎಂದು ಮಾಹಿತಿ ನೀಡಿದರು.
ಇವಿಎಂ ಬಗೆಗಿನ ಬಿಜೆಪಿ ನಾಯಕರಿಗೆ ಹುಟ್ಟಿದ ಅನುಮಾನಗಳನ್ನು ಬಗೆಹರಿಸುವ ಸಲುವಾಗಿಯೇ ಜಗತ್ತಿನ ನಾಲ್ಕನೇ ತಂತ್ರಜ್ಞಾನದ ಕೇಂದ್ರವೆನಿಸಿಕೊಂಡಿರುವ ಬೆಂಗಳೂರಿನಲ್ಲಿ ಎಥಿಕಲ್ ಇವಿಎಂ ಹ್ಯಾಕಥಾನ್ ನಡೆಸುವಂತೆ ಚುನಾವಣಾ ಆಯೋಗಕ್ಕೆ ಈ ಹಿಂದೆ ನಾನು ಪತ್ರ ಬರೆದಿದ್ದೆ, ಇದುವರೆಗೂ ನನ್ನ ಪತ್ರಕ್ಕೆ ಉತ್ತರ ನೀಡಿಲ್ಲ. ಎಥಿಕಲ್ ಹ್ಯಾಕಥಾನ್ ನಡೆಸುವ ಧೈರ್ಯವನ್ನೂ ತೋರಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಇದು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆಯೋ, ಇವಿಎಂಗಳ ಬಗೆಗಿನ ಆವಿಶ್ವಾಸವೊ?, ಚುನಾವಣಾ ಆಯೋಗದ ವಕ್ತಾರರಾದ ಬಿಜೆಪಿಯವರು ಉತ್ತರ ನೀಡುವರೇ?. ಮುಂದುವರೆದ ರಾಷ್ಟ್ರಗಳು ಇವಿಎಂ ಬಿಟ್ಟು ಬ್ಯಾಲೆಟ್ ಮಾದರಿಯ ಚುನಾವಣೆಗೆ ಮರಳಿರುವಾಗ ರಾಜ್ಯದ ಬಿಜೆಪಿ ನಾಯಕರಿಗೇಕೆ ಬ್ಯಾಲೆಟ್ ಬಗ್ಗೆ ಅಸಹನೆ? ಅಪನಂಬಿಕೆ? ಎಂದು ಪೋಸ್ಟ್ ಮಾಡಿದ್ದಾರೆ.