
ಸಿಎಂ ಸಿದ್ದರಾಮಯ್ಯ
ಅನುಭವದ ಆಧಾರದ ಮೇಲೆ ಇವಿಎಂ ಬದಲಿಗೆ ಬ್ಯಾಲೆಟ್: ಸಿಎಂ ಸಿದ್ದರಾಮಯ್ಯ
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮತಪತ್ರಗಳ ಮೂಲಕವೇ ನಡೆಸುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ, ಇವಿಎಂ ಬಳಕೆಯನ್ನು ಕೈಬಿಡುವ ತಮ್ಮ ಬದ್ಧತೆಯನ್ನು ರಾಜ್ಯ ಸರ್ಕಾರ ಪುನರುಚ್ಚರಿಸಿದೆ.
ನಮ್ಮ ಅನುಭವದ ಆಧಾರದ ಮೇಲೆ, ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಬದಲಿಗೆ, ಮತಪತ್ರಗಳ (ಬ್ಯಾಲೆಟ್ ಪೇಪರ್) ಮೂಲಕವೇ ಚುನಾವಣೆಗಳನ್ನು ನಡೆಸಬೇಕು ಎಂಬುದಾಗಿ ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಸರ್ಕಾರ ಈ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವಿಎಂಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಕುರಿತು ಮತ್ತೊಮ್ಮೆ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದರು. "ಜಗತ್ತಿನ ಹಲವು ಮುಂದುವರಿದ ರಾಷ್ಟ್ರಗಳು ಇವಿಎಂ ಬಳಸಿ, ಅವುಗಳ ಬಗ್ಗೆ ಸಂಶಯಗಳು ಮೂಡಿದ ಕಾರಣ ಮತ್ತೆ ಮತಪತ್ರಗಳ ವ್ಯವಸ್ಥೆಗೆ ಮರಳಿವೆ. ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿರಬೇಕು ಮತ್ತು ಮತದಾರರಲ್ಲಿ ಯಾವುದೇ ಗೊಂದಲ ಅಥವಾ ಅಪನಂಬಿಕೆಗೆ ಆಸ್ಪದವಿರಬಾರದು. ಇದೇ ಕಾರಣಕ್ಕಾಗಿ ನಾವು ಮತಪತ್ರಗಳ ಬಳಕೆಯನ್ನು ಬಲವಾಗಿ ಬೆಂಬಲಿಸುತ್ತೇವೆ," ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಸಂಪುಟ ಸಭೆಯಲ್ಲೂ ನಿರ್ಣಯ
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮತಪತ್ರಗಳ ಮೂಲಕವೇ ನಡೆಸುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ, ಇವಿಎಂ ಬಳಕೆಯನ್ನು ಕೈಬಿಡುವ ತಮ್ಮ ಬದ್ಧತೆಯನ್ನು ರಾಜ್ಯ ಸರ್ಕಾರ ಪುನರುಚ್ಚರಿಸಿದೆ.
ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತನಿಖೆಯೇ ಮುಂದುವರಿಯಲಿದೆ
ಇದೇ ವೇಳೆ, ಧರ್ಮಸ್ಥಳದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವಂತೆ ಕೆಲವು ಸ್ವಾಮೀಜಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, "ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿದೆ. ಎಸ್‌ಐಟಿ ಅಧಿಕಾರಿಗಳು ಸಮರ್ಥರಾಗಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ. ಸದ್ಯಕ್ಕೆ ತನಿಖೆಯನ್ನು ಬೇರೆ ಯಾವುದೇ ಸಂಸ್ಥೆಗೆ ವಹಿಸುವ ಅವಶ್ಯಕತೆ ಇಲ್ಲ," ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತಪತ್ರ ಬಳಕೆ: ಬಿಜೆಪಿಗೇಕೆ ಗಾಬರಿ? ಡಿಸಿಎಂ ಡಿ.ಕೆ. ಶಿವಕುಮಾರ್
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಲು ನಮ್ಮ ಸರ್ಕಾರ ತೀರ್ಮಾನಿಸಿದರೆ, ಬಿಜೆಪಿಯವರಿಗೆ ಏಕೆ ಆತಂಕವಾಗಬೇಕು?" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಶುಕ್ರವಾರ ತಮ್ಮ ಸದಾಶಿವನಗರ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಬಿಜೆಪಿ ವ್ಯಕ್ತಪಡಿಸುತ್ತಿರುವ ವಿರೋಧಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
"ಇದು ಕರ್ನಾಟಕ ಸರ್ಕಾರದ ಸ್ವತಂತ್ರ ತೀರ್ಮಾನ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಹೇಗೆ ನಡೆಸಬೇಕೆಂಬ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಬಿಜೆಪಿಯವರೇ ಈ ಹಿಂದೆ ಮಾಡಿದ ಕಾನೂನಿನಲ್ಲಿ ಈ ಅವಕಾಶವಿದೆ. ನಾವು ಮತಪತ್ರ ಬಳಸಲು ತೀರ್ಮಾನಿಸಿದ್ದರೆ, ನಿಮಗೆ ಗಾಬರಿ ಯಾಕೆ? 'ಕಳ್ಳನ ಮನಸ್ಸು ಹುಳ್ಳಗೆ' ಎಂಬಂತೆ ಯಾಕೆ ವರ್ತಿಸುತ್ತಿದ್ದೀರಿ?" ಎಂದು ಡಿ.ಕೆ. ಶಿವಕುಮಾರ್ ಬಿಜೆಪಿಯನ್ನು ಕುಟುಕಿದರು.
ಅವರು ಮುಂದುವರಿದು, "ನಾವು ಲೋಕಸಭೆ ಚುನಾವಣೆಗಳ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಸಹಕಾರಿ ಸಂಘಗಳ ಚುನಾವಣೆಯಂತೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸುತ್ತೇವೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಕೇಂದ್ರ ಚುನಾವಣಾ ಆಯೋಗವು ಅವರ ನಿಯಮಗಳಂತೆ ನಡೆಸುತ್ತದೆ, ಅದಕ್ಕೆ ನಮ್ಮ ಆಕ್ಷೇಪವಿಲ್ಲ" ಎಂದು ಸ್ಪಷ್ಟಪಡಿಸಿದರು.
ಬಿಬಿಎಂಬಿ ಚುನಾವಣೆಯಲ್ಲೂ ಮತಪತ್ರವೇ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲೂ ಮತಪತ್ರಗಳನ್ನು ಬಳಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಸರ್ಕಾರವು ಸದ್ಯಕ್ಕೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಈ ತೀರ್ಮಾನವನ್ನು ಮಾಡಿದೆ" ಎಂದು ಸೂಚ್ಯವಾಗಿ ಉತ್ತರಿಸಿದರು.