
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ
ಬಿಜೆಪಿ ಯಾರ ಪರವಾಗಿ ಧರ್ಮಸ್ಥಳಕ್ಕೆ ಹೋಗಿದ್ದರೋ, ಅವರ ವಿರುದ್ಧವೇ ಕುಸುಮಾವತಿ ದೂರು
“ಸೌಜನ್ಯ ಹೆಸರು ಹೇಳಿಕೊಂಡು ಹಣ ಮಾಡಿದ್ದಾರೆ, ದೊಡ್ಡ ಮನೆ ಕಟ್ಟಿಸಿದ್ದಾರೆ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ“ ಎಂಬ ಕುಸುಮಾವತಿಯವರ ಮಾತಿಗೆ ಉತ್ತರ ನೀಡದೆ ಮೌನವಹಿಸಿದ್ದೇಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ, ಷಡ್ಯಂತ್ರ ನಡೆಯುತ್ತಿದೆ ಎಂದು ಧರ್ಮಸ್ಥಳ ಚಲೋ ಮಾಡಿದ ಬಿಜೆಪಿ ನಾಯಕರು ಸೌಜನ್ಯ ತಾಯಿ ಕುಸುಮಾವತಿಯವರು ತಮ್ಮೆದುರು ಹೇಳಿದ ನೈಜ ಸಂಗತಿಯನ್ನು ಜಗತ್ತಿಗೆ ತಿಳಿಸು ಧೈರ್ಯವಿದೆಯೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ(ಎಕ್ಸ್)ನಲ್ಲಿ ಪ್ರತಿಕ್ರಿಯಿಸಿರುವ ಅವರು, ಬಿ.ವೈ. ವಿಜಯೇಂದ್ರ ಅವರೇ, ಮೊದಲು ಸೌಜನ್ಯ ಕುಟುಂಬಕ್ಕೆ ನಿಮ್ಮ ಪಕ್ಷ ನೀಡಿದ ಕಿರುಕುಳಕ್ಕೆ ನ್ಯಾಯ ಸಿಗಬೇಕಲ್ಲವೇ? ನೊಂದ ಕುಟುಂಬಕ್ಕೆ ಬಿಜೆಪಿ ನೀಡುತ್ತಿರುವ ಕಿರುಕುಳದ ಬಗ್ಗೆ ಉತ್ತರ ಸಿಗಲೇಬೇಕು. ಬಿಜೆಪಿ ಯಾರ ಪರವಾಗಿ ಧರ್ಮಸ್ಥಳಕ್ಕೆ ಹೋಗಿದ್ದರೋ ಅವರ ವಿರುದ್ಧವೇ ಕುಸುಮಾವತಿ ದೂರು ಹೇಳಿದ್ದಾರೆ. ಬಿಜೆಪಿ ನಾಯಕರು ಕುಸುಮಾವತಿಯವರ ಮಾತು ಕೇಳಿಸಿಕೊಂಡ ನಂತರವೂ ಕಾರ್ಯಕ್ರಮದ ವೇದಿಕೆ ಹತ್ತಿ ಕೂರುವುದಕ್ಕೆ ಹೇಗೆ ಮನಸಾಯಿತು ಎಂದಿದ್ದಾರೆ.
“ಸೌಜನ್ಯ ಹೆಸರು ಹೇಳಿಕೊಂಡು ಹಣ ಮಾಡಿದ್ದಾರೆ, ದೊಡ್ಡ ಮನೆ ಕಟ್ಟಿಸಿದ್ದಾರೆ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ“ ಎಂಬ ಕುಸುಮಾವತಿಯವರ ಮಾತಿಗೆ ಉತ್ತರ ನೀಡದೆ ಮೌನವಹಿಸಿದ್ದೇಕೆ ಎಂದಿದ್ದಾರೆ.
ಬಿಜೆಪಿಯವರು ಸೌಜನ್ಯ ಪರವೋ, ವಿರುದ್ಧವೋ ಎನ್ನುವುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂದಿದ್ದ ಬಿಜೆಪಿಗೆ ಯಾರಿಂದ ನ್ಯಾಯ ಸಿಗಬೇಕು ಎನ್ನುವುದನ್ನು ಸೌಜನ್ಯ ತಾಯಿ ಸ್ಪಷ್ಟವಾಗಿ ಹೇಳಿದ್ದಾರೆ, ನ್ಯಾಯ ಕೊಡಿಸುವರೇ? ಸೌಜನ್ಯ ತಾಯಿಯವರ ಕಾನೂನು ಹೋರಾಟಕ್ಕೆ ಬಿಜೆಪಿ ಪಕ್ಷವೇ ಹಣದ ನೆರವನ್ನು ನೀಡಲಿದೆ ಎಂದು ಘೋಷಿದ್ದಾರೆ. ಆ ಕಾನೂನು ಹೋರಾಟ ಯಾರ ವಿರುದ್ಧವಾಗಿರುತ್ತದೆ ಎಂಬ ಪ್ರಜ್ಞೆ ಬಿಜೆಪಿಗಿದೆಯೇ? ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವುದರಲ್ಲಿ ಬಿಜೆಪಿಗೆ ನೈಜ ಬದ್ಧತೆ ಇದ್ದಿದ್ದೇ ಆಗಿದ್ದರೆ ಕುಸುಮಾವತಿಯವರ ಮಾತು ಕೇಳಿದ ನಂತರ ಧರ್ಮಸ್ಥಳ ಚಲೋ ಮಾಡುವ ಬದಲು “ಧರ್ಮಸ್ಥಳದಿಂದ ವಾಪಸ್ ಚಲೋ“ ಕಾರ್ಯಕ್ರಮ ಮಾಡಬೇಕಿತ್ತು! ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.