Bhatkal To Pakistan: Part-1| ಭಟ್ಕಳ-ಪಾಕಿಸ್ತಾನದ ʼವಿವಾಹ ನಂಟುʼ: ಗೃಹ ಇಲಾಖೆಗೇಕೆ ಚಿಂತೆ?
ಸಾಮಾನ್ಯವಾಗಿ ದೇಶದ ಎಲ್ಲಾದರೂ ಭಯೋತ್ಪಾದನಾ ಕೃತ್ಯಗಳು ನಡೆದಾಕ್ಷಣ ಭಾರತೀಯ ಗುಪ್ತಚರ ದಳ (ಐಬಿ) ಕಣ್ಣು ಭಟ್ಕಳದತ್ತಲೂ ಬೀಳುತ್ತದೆ. ಹೆಚ್ಚೇಕೆ, ಅಲ್ಲಿನ ಪಾಕಿಸ್ತಾನ ಮತ್ತು ಗಲ್ಫ್ ದೇಶಗಳ ಜತೆ ಸಂಬಂಧಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ.;
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದೆ.
ದೇಶದಲ್ಲಿ ಅಕ್ರಮವಾಗಿ ನೆಲೆ ನಿಂತಿರುವ ಪಾಕಿಸ್ತಾನೀಯರನ್ನು ವಾಪಸ್ ಕಳುಹಿಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಖಡಕ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವೈವಾಹಿಕ ಸಂಬಂಧ ಬೆಳೆಸಿ ನೆಲೆ ಕಂಡುಕೊಂಡಿರುವ ಪಾಕಿಸ್ತಾನೀಯರಿಗೆ ಕೇಂದ್ರದ ನಿರ್ಬಂಧ ಆತಂಕ ತಂದೊಡ್ಡಿದೆ. ಭಯೋತ್ಪಾದನೆ ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ದ ಪ್ರತೀಕಾರದ ಕ್ರಮಗಳು ವೈವಾಹಿಕ ಸಂಬಂಧಗಳ ಮೇಲೂ ಪರಿಣಾಮ ಬೀರಿವೆ.
ಭಾರತದಲ್ಲಿ ಭಯೋತ್ಪಾದಕರ ಸಂಭಾವ್ಯ ದುಷ್ಕೃತ್ಯ ತಡೆಯುವುದೇ ಕೇಂದ್ರ ಸರ್ಕಾರದ ರಾಜತಾಂತ್ರಿಕ ನಿರ್ಧಾರಗಳಿಗೆ ಪ್ರಮುಖ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅತೀ ಹೆಚ್ಚು ವೈವಾಹಿಕ ನಂಟಿನ ಕುಟುಂಬಗಳಿವೆ. ಅದೇ ರೀತಿ, ಹೊನ್ನಾವರ, ಮಂಗಳೂರು, ರಾಮನಗರ ಹಾಗೂ ಬೆಂಗಳೂರಿನಲ್ಲೂ ಪಾಕಿಸ್ತಾನಿಯರೊಂದಿಗಿನ ವಿವಾಹ ಸಂಬಂಧದ ಪ್ರಕರಣಗಳ ಚರ್ಚೆ ಮುನ್ನೆಲೆಗೆ ಬಂದಿದೆ.
ಅದರಲ್ಲೂ ಪ್ರಮುಖವಾಗಿ ಭಟ್ಕಳ ಎಂದರೆ, ದೇಶದ ಭೂಪಟದಲ್ಲಿ ಉತ್ತರ ಪ್ರದೇಶದ ಅಜಂಘರ್ ಬಳಿಕ ಹೆಚ್ಚು ಉಗ್ರರನ್ನು ಸೃಷ್ಟಿಸಿದ ಸ್ಥಳ ಎಂಬ ಕಳಂಕ ಪಡೆದ ಕರ್ನಾಟಕದ ಕರಾವಳಿಯ ಪುಟ್ಟ ನಗರ ಎಂದನಿಸುಕೊಂಡಿದೆ. ಭಾರತ ಪೊಲೀಸರು ಮತ್ತು ಇಂಟರ್‌ಪೋಲ್‌ಗೆ ಬೇಕಾದ ಹತ್ತಾರು ಉಗ್ರರು ಭಟ್ಕಳ ನಗರದವರು ಮತ್ತು ಹೆಚ್ಚಿನವರು ಪಾಕಿಸ್ತಾನದ ಐಎಸ್‌ಐ ಸಂಪರ್ಕ ಹೊಂದಿದವರು ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಯಲ್ಲೇ ಆಶ್ರಯವನ್ನೂ ಪಡೆಯುತ್ತಿದ್ದಾರೆ ಎಂದು ಪೊಲೀಸ್ ದಾಖಲೆಗಳು ಹೇಳುತ್ತವೆ. ಅವುಗಳಿಗೆ ಉದಾಹರಣೆ ಎಂದರೆ ಲಷ್ಕರೆ ಇ ತಯ್ಯಬಾದ ಉಪ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಯಾಸಿನ್ ಭಟ್ಕಳ್ (ಕೆಲ ವರ್ಷಗಳ ಹಿಂದೆ ನೇಪಾಳದಲ್ಲಿ ಭಾರತೀಯ ಪೊಲೀಸರಿಂದ ಬಂಧಿತನಾಗಿದ್ದಾನೆ) ಹೀಗೆ ಪಟ್ಟಿ ಬೆಳೆಯುತ್ತದೆ.
ಸಾಮಾನ್ಯವಾಗಿ ದೇಶದ ಎಲ್ಲಾದರೂ ಭಯೋತ್ಪಾದನಾ ಕೃತ್ಯಗಳು ನಡೆದಾಕ್ಷಣ ಭಾರತೀಯ ಗುಪ್ತಚರ ದಳ (ಐಬಿ) ಕಣ್ಣು ಭಟ್ಕಳದತ್ತಲೂ ಬೀಳುತ್ತದೆ. ಹೆಚ್ಚೇಕೆ, ಅಲ್ಲಿನ ಪಾಕಿಸ್ತಾನ ಮತ್ತು ಗಲ್ಫ್ ದೇಶಗಳ ಜತೆ ಸಂಬಂಧಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ.
ಈಗ ಗುಪ್ತಚರ ದಳದ ಕಣ್ಣು ಭಟ್ಕಳಕ್ಕೆ ಮತ್ತೆ ಬಿದ್ದಿದೆ. ಭಟ್ಜಳದಲ್ಲಿ ಅಲ್ಲಿನ ನವಾಯತ ಸಮೂದಾಯದ ವ್ಯಕ್ತಿಗಳನ್ನು ಮದುವೆಯಾದ ಪಾಕಿಸ್ತಾನಿ ಯುವತಿಯರು, ಆ ಮೂಲಕ ಭಾರತ- ಪಾಕಿಸ್ತಾನ ನಡುವಿನ ಅವರ ವ್ಯವಹಾರಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎಲ್‌ಇಟಿಯ ಉಪ ಸಂಘಟನೆ ದ ರೆಸಿಸ್ಟೆನ್ಸ್ ಫ್ರಂಟ್ (The Resistance Front- TRF) ನರಮೇಧ ಮಾಡಿದ ಬಳಿಕ ಭಾರತದಲ್ಲಿ ವೀಸಾದಲ್ಲಿರುವ, ತಲೆಮರೆಸಿಕೊಂಡಿರುವ ಪಾಕಿಸ್ತಾನಿ ಪ್ರಜೆಗಳ ಪತ್ತೆಗೆ ಕೇಂದ್ರ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದೆ. ರಿಯಾಜ್ ಭಟ್ಜಳ್ ರೂವಾರಿಯಾಗಿರುವ ಇಂಡಿಯನ್ ಮುಜಾಹಿದ್ದೀನ್ ಮತ್ತು ಟಿಆರ್‌ಎಫ್ ಸಂಘಟನೆಗಳು ಎಲ್‌ಇಟಿ ಸಂಪರ್ಕ ಹೊಂದಿರುವುದರಿಂದ ಈ ಎಲ್ಲಾ ದೃಷ್ಟಿಕೋನಗಳಿಂದ ತನಿಖೆ ನಡೆಸುತ್ತಿರುವ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳಿಗೆ ಭಟ್ಕಳ-ಪಾಕಿಸ್ತಾನದ ವಿವಾಹ ನಂಟಿನ ಬಗ್ಗೆಯೂ ಸಹಜವಾಗಿ ದೃಷ್ಟಿ ಬಿದ್ದಿದೆ ಎಂದು ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡುತ್ತಾ ವಿಶ್ಲೇಷಿಸಿದ್ದಾರೆ.
ಭಟ್ಕಳ-ಪಾಕಿಸ್ತಾನ ಸಂಬಂಧ
ಹಾಗಾಗಿ ಭಟ್ಕಳದ ಪಾಕಿಸ್ತಾನ ಸಂಬಂಧ ಮತ್ತೆ ಪೊಲೀಸರ ʼಆಸಕ್ತಿʼಗೆ ಕಾರಣವಾಗಿದೆ. ಪ್ರಮುಖವಾಗಿ ಭಟ್ಕಳ- ಪಾಕಿಸ್ತಾನ ವಿವಾಹ ನಂಟಿನ ಬಗ್ಗೆ ಮತ್ತೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ.
ಪಾಕಿಸ್ತಾನದೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದವರು ಸೇರಿ ರಾಜ್ಯದಲ್ಲಿ 92 ಮಂದಿ ಪಾಕಿಸ್ತಾನಿಯರನ್ನು ಪತ್ತೆ ಹಚ್ಚಲಾಗಿದೆ. ವೀಸಾ ಅವಧಿ ಮುಗಿದ ಬಳಿಕವೂ ನೆಲೆಯೂರಿರುವ ಬೇರೆ ರಾಷ್ಟ್ರಗಳ ಪ್ರಜೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಪಾಕಿಸ್ತಾನಿಗರ ಪೈಕಿ 88 ಮಂದಿ ದೀರ್ಘಕಾಲದ ವೀಸಾದ ಮೇಲೆ ಭಾರತದಲ್ಲಿದ್ದರೆ, ಉಳಿದ ನಾಲ್ವರು ಅಲ್ಪಾವಧಿಯ ವೀಸಾ ಮೇಲೆ ವಾಸ್ತವ್ಯ ಹೂಡಿದ್ದಾರೆ. ಕೇಂದ್ರ ಸರ್ಕಾರದ ಮುಂದಿನ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯ (FRRO) ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು 'ದ ಫೆಡರಲ್ ಕರ್ನಾಟಕ' ಕ್ಕೆ ತಿಳಿಸಿದ್ದಾರೆ.
"ಸುಮಾರು ಹದಿನಾಲ್ಕು ಪಾಕಿಸ್ತಾನಿ ಮಹಿಳೆಯರು ಭಟ್ಕಳದಲ್ಲಿ ವಿವಾಹ ಸಂಬಂಧ ಬೆಳೆಸಿಕೊಂಡು ನೆಲೆಸಿದ್ದಾರೆ. ಅವರ ವೀಸಾಗಳು ಪ್ರತಿಬಾರಿ ಊರ್ಜಿತಗೊಳ್ಳುತ್ತಿದೆ. ಈಗ ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಅವರ ಮಾಹಿತಿಗಳನ್ನು ರಾಜ್ಯ ಪೊಲೀಸರ ಮೂಲಕ ಪಡೆದುಕೊಳ್ಳಲಾಗುತ್ತಿದೆ," ಎಂದವರು ಹೇಳಿದ್ದಾರೆ.
ವೈವಾಹಿಕ ಸಂಬಂಧ ವಿಚಾರ ಮುನ್ನೆಲೆ ಬಂದಿದ್ದೇಕೆ?
ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಸಾಮೂಹಿಕ ನರಹತ್ಯೆ ನಡೆಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನದ ನಾಗರಿಕರನ್ನು ವಾಪಸ್ ಕಳುಹಿಸಲು ಆದೇಶ ಮಾಡಿರುವುದರಿಂದ ಭಟ್ಕಳದಲ್ಲಿ ಪಾಕಿಸ್ತಾನದ ಯುವತಿಯರು ಮದುವೆಯಾದ ಪ್ರಕರಣ ಮುನ್ನೆಲೆಗೆ ಬಂದಿದೆ.
ದೀರ್ಘಕಾಲದ ವೀಸಾ ಹೊಂದಿದವರಿಗೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಅವರನ್ನೂ ವಾಪಸ್ ಕಳುಹಿಸಬೇಕು ಎಂದು ಆದೇಶ ಬಂದರೆ ಮದುವೆಯಾಗಿ ಭಟ್ಕಳದಲ್ಲಿ ನೆಲೆಸಿದ ಪಾಕಿಸ್ತಾನದ ನಾಗರಿಕರು ಹಾಗೂ ಅವರ ಮಕ್ಕಳು ದೇಶ ತೊರೆಯಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಂ.ನಾರಾಯಣ ಅವರು ಹೇಳಿದರು.
ಮದುವೆ ಆಗಿರುವವರಿಗೆ ವಿನಾಯ್ತಿ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್ ಪ್ರಜೆಗಳನ್ನು ಹೊರಗೆ ಹಾಕಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸುತ್ತಿದೆ. ಪ್ರತೀಕಾರ ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಕೆಲ ಮಹತ್ವದ ತೀರ್ಮಾನ ಕೈಗೊಂಡಿದ್ದು, ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳನ್ನು ಪಟ್ಟಿ ಮಾಡಲಾಗುತ್ತಿದೆ. ಅಂಕಿ ಅಂಶಗಳ ಸಂಗ್ರಹ ವರದಿ ಬಂದ ಕೂಡಲೇ ಪಾಕ್ ಪ್ರಜೆಗಳನ್ನು ವಾಪಸ್ ಕಳುಹಿಸುತ್ತೇವೆ. ಕೇಂದ್ರ ಸರ್ಕಾರ ದೀರ್ಘಾವಧಿ ವೀಸಾ, ಮದುವೆ ಆಗಿರುವವರಿಗೆ ವಿನಾಯಿತಿ ನೀಡಿದೆ. ಅವರನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಹೊರಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಭಟ್ಕಳಕ್ಕೆ ಯಾಕೆ ಕಳಂಕ
ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆ ಹಾಗೂ ಲಷ್ಕರೆ-ಇ-ತಯ್ಯಬಾ, ಸಿಮಿ ಇತ್ಯಾದಿ ಸಂಘಟನೆಗಳ ಸಂಪರ್ಕ ಸಾಧಿಸಿದ್ದ ಹಾಗೂ ದೇಶದ ಹಲವೆಡೆ ಭಯೋತ್ಪಾದನಾ ಕತ್ಯಗಳಲ್ಲಿ ಭಾಗಿಯಾಗಿದ್ದ ರಿಯಾಜ್ ಭಟ್ಕಳ ಹಾಗೂ ಇಕ್ಬಾಲ್ ಭಟ್ಕಳ ಸೋದರರು, ಯಾಸೀನ್ ಭಟ್ಕಳ ಸೇರಿದಂತೆ ಸುಮಾರು ಹತ್ತು ಯುವಕರು ಭಟ್ಕಳಕ್ಕೆ ಕಳಂಕ ತಂದ ಆರೋಪಿಗಳು. ರಿಯಾಜ್ , ಇಕ್ಬಾಲ್ ಸೇರಿದಂತೆ ಹಲವರು ಇನ್ನೂ ಭಾರತದ ಪೊಲೀಸರಿಗೆ ಬೇಕಾಗಿದ್ದಾರೆ ಹಾಗೂ ಇಂಟರ್ ಪೋಲ್ ತಂಡದ ನಿಗಾದಲ್ಲಿದ್ದಾರೆ.
ಶಾಂತಿಪ್ರಿಯರು
ಆದರೆ, ಈ ಕಳಂಕವನ್ನು ಬಿಟ್ಟರೆ ನವಾಯತ ಸಮುದಾಯ ನಿಜವಾಗಿ ಶಾಂತಿ ಪ್ರಿಯರು ಮತ್ತು ಯಾವುದೇ ತಂಟೆ-ತಕರಾರಿಲ್ಲದೆ ತಮ್ಮಪಾಡಿಗೆ ತಮ್ಮಷ್ಟಕ್ಕೇ ಇರುವವರು ಎಂದು ಅಲ್ಲಿನ ನಿವಾಸಿ ರಮಾನಾಥ್ ಖಾರ್ವಿ ಹೇಳುತ್ತಾರೆ. ಸಹಜವಾಗಿ ಅರೆಬಿಕ್ ದೇಶಗಳೊಂದಿಗೆ ಸಂಪರ್ಕ ಹೊಂದಿರುವ ನವಾಯತರು ಅಲ್ಲಿ ಬಹುತೇಕ ಟೆಕ್ಸ್‌ಟೈಲ್ ಸೇರಿದಂತೆ ಹಲವು ಉದ್ದಿಮೆಗಳಲ್ಲಿ ಭಾಗಿಗಳಾಗಿದ್ದಾರೆ.
ಈಗ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿ ಬಳಿಕ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರದ ಛಾಯೆ ಭಟ್ಕಳಕ್ಕೂ ಅವರಿಸಿದೆ. ಉತ್ತರ ಪ್ರದೇಶದ ಅಜಂಘರ್ , ಬಳಿಕ ದಕ್ಷಿಣ ಭಾರತದ ಕರ್ನಾಟಕ ಕರಾವಳಿಯ ಭಟ್ಕಳ - ಉಗ್ರರನ್ನು ಹುಟ್ಟುಹಾಕಿದ ಎರಡನೇ ಪಟ್ಟಣ ಎಂದ ಕಳಂಕ ಒಂದು ಹಂತದಲ್ಲಿ ಬಂದಿತ್ತು. ಆ ಕಾರಣಕ್ಕಾಗಿ ಭಟ್ಕಳ ಮತ್ತು ಪಾಕಿಸ್ತಾನಿಯರ ವಿವಾಹ ಸಂಬಂಧಕ್ಕೂ ಭಯೋತ್ಪಾದನೆಗೂ ಸಂಪರ್ಕ ಇದೆಯೇ ಎಂಬ ಬಗ್ಗೆ ಸಹಜವಾಗಿಯೇ ಪೊಲೀಸರು ಮತ್ತು ಗುಪ್ತಚರ ಇಲಾಖೆಗಳು ಕಣ್ಣಿಟ್ಟಿವೆ.
ಎಲ್ಲಾ ಪ್ರದೇಶಗಳಲ್ಲಿ , ಎಲ್ಲಾ ಕ್ಷೇತ್ರಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಜನರಿದ್ದಾರೆ. ಹಾಗೆಯೇ ಭಟ್ಕಳದಲ್ಲೂ ಕೂಡ. ಹಾಗಂತ ಭಟ್ಕಳವನ್ನು ಭಯೋತ್ಪಾದಕರ ಸ್ಥಳ ಎನ್ನುವ ಹಣೆಪಟ್ಟಿ ನೀಡುವುದು ಸರಿಯಾದುದಲ್ಲ ಎಂದು ರಮಾನಾಥ ಖಾರ್ವಿ ಅಭಿಪ್ರಾಯಪಡುತ್ತಾರೆ.
(Bhatkal To Pakistan: Part-2 : ಭಟ್ಕಳ ಮತ್ತು ಪಾಕಿಸ್ತಾನ ವಿವಾಹ ನಂಟು ಹಾಗೂ ಪಾಕಿಸ್ತಾನಿ ಯುವತಿಯರ ಪರದಾಟದ ಬಗ್ಗೆ ವರದಿ ಪ್ರಕಟವಾಗಲಿದೆ).