ಬಿ.ಕೆ.ಹರಿಪ್ರಸಾದ್ ಅರ್ಧನಾರೀಶ್ವರಿ ಎಂಬ ವ್ಯಂಗ್ಯ ಹೇಳಿಕೆಗೆ ಮಂಗಳಮುಖಿ ಸಮುದಾಯ ಆಕ್ರೋಶ

ಬಿ.ಕೆ.ಹರಿಪ್ರಸಾದ್‌ ಅವರನ್ನು ಮಂಗಳಮುಖಿ ಸಮುದಾಯ ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ. ತಕ್ಷಣ ಕ್ಷಮೆ ಕೇಳಬೇಕು ಎಂದು ಮಂಗಳಮುಖಿ ಫೌಂಡೇಷನ್‍ನ ಪ್ರಧಾನ ಕಾರ್ಯದರ್ಶಿ ಅರುಂಧತಿ ಜಿ. ಹೆಗಡೆ ಆಗ್ರಹಿಸಿದ್ದಾರೆ.;

Update: 2025-07-12 14:16 GMT

ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಅರ್ಧನಾರೀಶ್ವರಿ ಎಂಬ ವ್ಯಂಗ್ಯ ಹೇಳಿಕೆಗೆ ಮಂಗಳಮುಖಿ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಕ್ಷಣ ಕ್ಷಮೆ ಕೇಳಬೇಕು ಎಂಬ ಒತ್ತಾಯ ಮಾಡಿದೆ. 

ಬಿ.ಕೆ. ಹರಿಪ್ರಸಾದ್ ಹೇಳಿಕೆಯನ್ನು ಮಂಗಳಮುಖಿ ಸಮುದಾಯ ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ.ಮಂಗಳಮುಖಿಯರು ಯಾವುದೇ ಕೆಲಸಗಳನ್ನು ಮಾಡುವುದಿಲ್ಲ ಎಂದು 30-40 ವರ್ಷಗಳ ಹಿಂದಿನ ಮಾತನಾಡುತ್ತಿದ್ದಾರೆ. ನಮಗೆ ಕಾಂಗ್ರೆಸ್‌ ಪಕ್ಷ ಅಧಿಕಾರ ನೀಡಿದರೆ, ಅವರ ನಾಯಕ ರಾಹುಲ್‌ಗಾಂಧಿಗಿಂತ ದಕ್ಷತೆಯಿಂದ ಆಡಳಿತ ಮಾಡುತ್ತೇವೆ ಎಂದು ಕರ್ನಾಟಕ ಮಂಗಳಮುಖಿ ಫೌಂಡೇಷನ್‍ನ ಪ್ರಧಾನ ಕಾರ್ಯದರ್ಶಿ ಅರುಂಧತಿ ಜಿ. ಹೆಗಡೆ ತಿರುಗೇಟು ನೀಡಿದ್ದಾರೆ. 

ಬೆಂಗಳೂರಿನಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಪ್ರಸಾದ್ ಹೇಳಿಕೆಯನ್ನು ಖಂಡಿಸುತ್ತೇವೆ. ಮಂಗಳಮುಖಿಯರು ತುಂಬ ತುಚ್ಛವಾಗಿ ಜೀವನವನ್ನು ಮಾಡುತ್ತಿಲ್ಲ. ಸಮಾಜದಲ್ಲಿ ಕೆಲಸ ಕಾರ್ಯಗಳಿಗೆ ಅವಕಾಶ ಇಲ್ಲದಿರುವ ಕಾರಣ ಅವರು ಭಿಕ್ಷೆ ಮತ್ತು ಲೈಂಗಿಕ ವೃತ್ತಿಯನ್ನು ಮಾಡುತ್ತಿದ್ದಾರೆ. ಹರಿಪ್ರಸಾದ್  ಬೆಂಗಳೂರು ದಕ್ಷಿಣದಲ್ಲಿ ಚುನಾವಣೆಗೆ ನಿಂತು ಇಲ್ಲಿಯವರೆಗೆ ಗೆಲ್ಲುವುದಕ್ಕೆ ಆಗಿಲ್ಲ ಎಂದು ಟೀಕಿಸಿದ್ದಾರೆ. 

ಮಂಗಳಮುಖಿ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು?

ಕಾಂಗ್ರೆಸ್ಸಿನಲ್ಲಿ ಅವರ ಸ್ಥಾನಮಾನವನ್ನು ಅವರೇ ವಿಮರ್ಶಿಸಿಕೊಳ್ಳಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಸಮುದಾಯದ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿದೆ. ಇದು ಬಿಜೆಪಿಯಿಂದ ಸಾಧ್ಯವಾಗಿದೆ. ರಸ್ತೆಯಲ್ಲಿ ಕುಣಿಯುವವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತದೆ ಎಂದರೆ ಯಾವ ಕಾರಣಕ್ಕೆ ಸಿಗುತ್ತದೆ? ಯಾವ ರೀತಿಯಲ್ಲಿ ಸಿಗುತ್ತದೆ ಎಂಬುದನ್ನು ಹರಿಪ್ರಸಾದ್ ಅವರೇ ಯೋಚಿಸಬೇಕು. ಬಿಜೆಪಿ ಪಕ್ಷಕ್ಕೆ ವ್ಯಂಗ್ಯವಾಗಿ ಅರ್ಧನಾರೀಶ್ವರಿ ಎಂದು ಹೇಳಿದ್ದಾರೆ. ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಮತ್ತು ಜಾನಪದ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮಾಡಿ ಆಡಳಿತವನ್ನು ನಡೆಸಲು ಅವರಿಗೆ ಬಿಜೆಪಿ ಅವಕಾಶ ನೀಡಿದೆ. ನಮ್ಮ ಮತ್ತು ಸಮುದಾಯದ ಘನತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದ್ದಾರೆ. 

ಮಾಜಿ ಮುಖ್ಯಮಂತ್ರಿ  ಬಿ.ಎಸ್‌.ಯಡಿಯೂರಪ್ಪ ನಮ್ಮ ಸಮುದಾಯದ ಜನಾಂಗಕ್ಕೆ ಶೇ.1ರಷ್ಟು ಮೀಸಲಾತಿ ನೀಡುವುದರ ಮೂಲಕ ನಮ್ಮ ಜನಾಂಗದ ಎಷ್ಟೋ ಜನ ಮಂಗಳಮುಖಿಯರು ಸರ್ಕಾರಿ ಉದ್ಯೋಗಗಳಲ್ಲಿ ಗ್ರಾಮಲೆಕ್ಕಿಗರಾಗಿ ಮತ್ತು ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಮಂಗಳಮುಖಿ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು? ಹರಿಪ್ರಸಾದ್ ರಾಜ್ಯಸಭೆ ಸದಸ್ಯರಾಗಿ ದಮನಿತ, ಶೋಷಿತ ವರ್ಗಗಳ ಧ್ವನಿಯಾಗಿರಬೇಕಿತ್ತು. ಆದರೆ ಅವರ ಬಾಯಿಯಲ್ಲಿ ಇಂತಹ ಹೀನವಾದ ಮಾತುಗಳು ಬರುತ್ತದೆ ಎಂದು ನಮ್ಮ ಸಮಾಜವು ನೀರಿಕ್ಷಿಸಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಮಹಿಳಾ ಮುಖ್ಯಮಂತ್ರಿ ಮಾಡಲು ಒತ್ತಾಯ

ಮಂಗಳಮುಖಿಯರು ಹುಟ್ಟಿದ ದಿನದಿಂದ ಅಪ್ಪ ಅಮ್ಮ ಅವರಿಂದ ದೂರವಾಗಿರುತ್ತಾರೆ. ನೆರೆಹೊರೆಯವರಿಂದ ಮತ್ತು ಸಮಾಜದಿಂದ ದೂರವಾಗಿರುತ್ತಾರೆ . ಅಲ್ಲದೇ, ಸ್ನೇಹಿತರಿಂದಲೂ ದೂರವಾಗಿರುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಮಹಿಳೆಯರು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇಂದಿನವರೆಗೂ ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿಯನ್ನು ಮಾಡಿಲ್ಲ. ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಮಹಿಳಾ ಮುಖ್ಯಮಂತ್ರಿಯನ್ನು ಮಾಡಲು ಕಾಂಗ್ರೆಸ್‌ ಪಕ್ಷದವರಿಗೆ ಮತ್ತು ಹೈಕಮಾಂಡ್ ಗೆ ಸಲಹೆ ನೀಡಿ ಎಂದು ಒತ್ತಾಯಿಸಿದ್ದಾರೆ. 

ಹರಿಪ್ರಸಾದ್ ರಾಜಕೀಯ ಕೆಸರೆರಚಾಟಕ್ಕೆ ಮಂಗಳಮುಖಿಯರನ್ನು ಬಳಸಿಕೊಳ್ಳುವುದು ಮತ್ತು ನಮ್ಮ ಸಮುದಾಯವನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನೈತಿಕವಾಗಿ ಅವರನ್ನು ಪ್ರಶ್ನಿಸಿಸಿಕೊಳ್ಳಬೇಕು. ನೀವು ನೀಡಿರುವ ಹೇಳಿಕೆಯು ಅಕ್ಷಮ್ಯ ಅಪರಾಧ. ಹರಿಪ್ರಸಾದ್ ಮಂಗಳಮುಖಿ ಸಮುದಾಯದ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಬೇರೆ ರೀತಿಯ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.


Tags:    

Similar News