ಕೊಡಗಿನಲ್ಲಿ ಬಾಲ್ಯವಿವಾಹದ ಅನಿಷ್ಠ: 15 ರ ಬಾಲೆಯನ್ನು ಭೀಕರವಾಗಿ ಕೊಲೆಗೈದ 32 ರ ವರ

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಬರೆದಿದ್ದ ಬಾಲಕಿ, ಫಲಿತಾಂಶ ಬಂದು ಉತ್ತಮ ಅಂಕದೊಂದಿಗೆ ಪಾಸಾದ ಖುಷಿಯಲ್ಲಿರುವಾಗಲೇ ಆಕೆಯ ಮನೆಯವರು ಮದುವೆಗೆ ನಿಶ್ಚಿತಾರ್ಥಕ್ಕೆ ಮುಂದಾಗಿದ್ದರು.;

Update: 2024-05-10 06:00 GMT

ಬಾಲ್ಯ ವಿವಾಹದಿಂದ ಪಾರಾಗಿದ್ದ 15 ವರ್ಷದ ಬಾಲಕಿಯನ್ನು ಕೊಲೆ ಮಾಡಿದ ಹಂತಕ ಆಕೆಯ ರುಂಡದೊಂದಿಗೆ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮುತ್ಲು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ನಿನ್ನೆಯಷ್ಟೇ (ಗುರವಾರ) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಸೂರಬ್ಬಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಯುಎಸ್‌ ಮೀನಾ ಕೊಲೆಯಾದ ಬಾಲಕಿ. ಈಕೆ ಶೇ.52ರಷ್ಟು ಫಲಿತಾಂಶ ಪಡೆದು ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿದ್ದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಮರುದಿನ ಬೆಳಿಗ್ಗೆ ಅಂದರೆ ಶುಕ್ರವಾರ ಗ್ರಾಮದ ನಿವಾಸಿ ಪ್ರಕಾಶ್ ಎಂಬಾತ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಇಡೀ ಗ್ರಾಮವನ್ನೇ ಸ್ಮಶಾನ ಮೌನಕ್ಕೆ ಜಾರುವಂತೆ ಮಾಡಿದೆ.

ಏನಿದು ಪ್ರಕರಣ?

ಕೊಲೆಯಾದ ಮೀನಾ ಎನ್ನುವ ಬಾಲಕಿ ಸುಬ್ರಮಣಿ ಮತ್ತು ಮುತ್ತಕ್ಕಿ ದಂಪತಿಯ ಒಬ್ಬಳೇ ಮಗಳು. ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗಳು ಒಳ್ಳೆಯ ಅಂಕದೊಂದಿಗೆ ಉತ್ತೀರ್ಣಳಾದ ಖುಷಿ ಒಂದೆಡೆಯಾದರೆ, ಮತ್ತೊಂದೆಡೆ ಅದೇ ಗ್ರಾಮದ 32 ವರ್ಷದ ಪ್ರಕಾಶ್‌ ಎನ್ನುವ ಯುವಕನೊಂದಿಗೆ ಮದುವೆ ಮಾಡಲು ನಿಶ್ಚಯ ಕಾರ್ಯಕ್ರಮ ಮಾಡಲು ಮುಂದಾಗಿದ್ದರು.

ಈ ಬಗ್ಗೆ ಮಾಹಿತಿ ತಿಳಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ 18 ವರ್ಷದ ನಂತರ ವಿವಾಹ ಮಾಡುವಂತೆ ಕಾನೂನಿನ ಅರಿವು ಮೂಡಿಸಿದ್ದರು. ಆನಂತರ ಎರಡೂ ಮನೆಯವರು ಮೀನಾಳಿಗೆ 18 ವರ್ಷ ತುಂಬಿದ ಮೇಲೆ ವಿವಾಹ ಮಾಡಲು ನಿಶ್ಚಿಯಿಸಿದರಾದರೂ ಕೆಲವರು ಮಕ್ಕಳ ಸಹಾಯವಾಣಿಗೆ ಎಚ್ಚರಿಕೆ ನೀಡಿದ್ದರು.

ಅಷ್ಟೇ ಅಲ್ಲದೇ ಈ ನಿಶ್ಚಿತಾರ್ಥ ನಿಲ್ಲಿಸಿದ್ದಕ್ಕಾಗಿ ಕೋಪಗೊಂಡಿದ್ದ ಕೊಲೆ ಆರೋಪಿ ಪ್ರಕಾಶ್ ಗುರುವಾರ ಸಂಜೆ 5.30 ರ ಸಮಯದಲ್ಲಿ ಬಾಲಕಿಯ ಮನೆಗೆ ತೆರಳಿ ಏಕಾಏಕಿ ಆಕೆಯ ತಂದೆ ಮತ್ತು ತಾಯಿಯ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿ ಮೀನಾಳನ್ನು ಎಳೆಕೊಂಡು ಹೋದ ಎನ್ನಲಾಗಿದೆ.

ಇಂದು (ಶುಕ್ರವಾರ) ಬೆಳಿಗ್ಗೆ ಗ್ರಾಮದ ಪಕ್ಕದಲ್ಲಿನ ಅರಣ್ಯ ಪ್ರದೇಶದಲ್ಲಿ ಬಾಲಕಿ ಮೀನಾಳ ರುಂಡವಿಲ್ಲದ ದೇಹ ಪತ್ತೆಯಾಗಿದ್ದು, ಆರೋಪಿ ರುಂಡದೊಂದಿಗೆ ಪರಾರಿಯಾಗಿದ್ದಾನೆ ಎನ್ನುವುದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‌ಪಿ ಕೆ ರಾಮರಾಜನ್, ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Tags:    

Similar News