ಮದ್ದೂರು ಗಣೇಶ ವಿಸರ್ಜನೆ ಗಲಾಟೆ : ಲಾಠಿ ಏಟು ತಿಂದಿದ್ದ ಮಹಿಳೆ ಮೇಲೆ ಎಫ್‌ಐಆರ್

ಪ್ರತಿಭಟನೆ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ಸಂದರ್ಭದಲ್ಲಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜ್ಯೋತಿ ಎಂಬುವರಿಗೂ ಲಾಠಿ ಏಟು ಬಿದ್ದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಟೀಕೆಗಳು ಎದುರಾಗಿದ್ದವು.;

Update: 2025-09-11 13:49 GMT

ಬಿಜೆಪಿ ಪ್ರತಿಭಟನೆ ವೇಳೆ ಲಾಠಿ ಏಟು ತಿಂದಿದ್ದ ಮಹಿಳೆ ಜ್ಯೋತಿ

Click the Play button to listen to article

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರಿಂದ ಲಾಠಿ ಏಟು ತಿಂದು ಸುದ್ದಿಯಾಗಿದ್ದ ಮಹಿಳೆ ವಿರುದ್ಧ ಇದೀಗ ಎಫ್‌ಐಆರ್‌ ದಾಖಲಾಗಿದೆ. ಮುಖ್ಯಮಂತ್ರಿ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಶಿವಪುರ ನಿವಾಸಿ ಜ್ಯೋತಿ ಅವರ ವಿರುದ್ಧ ಮದ್ದೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದಾಗ ಕಲ್ಲುತೂರಾಟ ನಡೆದಿತ್ತು. ಈ ಘಟನೆಯು ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು. ಇದನ್ನು ಖಂಡಿಸಿ, ಮರುದಿನ ಸಾವಿರಾರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಪ್ರತಿಭಟನೆ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ಸಂದರ್ಭದಲ್ಲಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜ್ಯೋತಿ ಎಂಬುವರಿಗೂ ಲಾಠಿ ಏಟು ಬಿದ್ದಿತ್ತು. ಪೊಲೀಸರು ಮಹಿಳೆಯ ಮೇಲೆ ಲಾಠಿ ಬೀಸುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಟೀಕೆಗಳು ಎದುರಾಗಿದ್ದವು.

ಎಫ್‌ಐಆರ್‌ಗೆ ಕಾರಣವೇನು?

ಈ ಘಟನೆಯ ನಂತರ, ಜ್ಯೋತಿ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಮುಖ್ಯಮಂತ್ರಿ ಮತ್ತು ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ, ಕೋಮುಗಳ ನಡುವೆ ವೈಷಮ್ಯ ಮತ್ತು ದ್ವೇಷವನ್ನು ಉತ್ತೇಜಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮದ್ದೂರು ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಅವರು ಸ್ವತಃ ದೂರುದಾರರಾಗಿ, ಜ್ಯೋತಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ ಆರೋಪದ ಮೇಲೆ ಈ ಎಫ್‌ಐಆರ್‌ ದಾಖಲಾಗಿದೆ.

ಮದ್ದೂರಿನಲ್ಲಿ ನಡೆದಿದ್ದು ಏನು?

ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕಲ್ಲುತೂರಾಟವು ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಈ ಕೃತ್ಯವನ್ನು ಖಂಡಿಸಿ, ಮರುದಿನ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗುವ ಲಕ್ಷಣಗಳು ಕಾಣಿಸಿಕೊಂಡಾಗ, ಪೊಲೀಸರು ಜನರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದರು. ಬಳಿಕ ಬಿಜೆಪಿ ನಾಯಕರು ಮದ್ದೂರಿನಲ್ಲಿ ಸೇರಿ ಮೆರವಣಿಗೆ ನಡೆಸಿದ್ದರು.

Tags:    

Similar News