ಲೋಕಸಭೆ ಚುನಾವಣೆ | ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲ್ಲ: ಎಸ್.ಎಲ್ ಭೈರಪ್ಪ ಭವಿಷ್ಯ

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲ ಎಂದು ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ಭವಿಷ್ಯ ನುಡಿದಿದ್ದಾರೆ.

Update: 2024-03-30 11:45 GMT
ಎಸ್.ಎಲ್ ಭೈರಪ್ಪ

ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಭವಿಷ್ಯ ನುಡಿದಿದ್ದಾರೆ.

ಭೈರಪ್ಪ ಅವರ ಮನೆಗೆ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎಲ್. ಭೈರಪ್ಪ, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲ. ಕಳೆದ ಬಾರಿಗಿಂತಲೂ ಅರ್ಧದಷ್ಟು ಜಾಸ್ತಿ ಸ್ಥಾನಗಳನ್ನು ಪಡೆಯಬಹುದು ಎಂದರು.

ಉತ್ತರ ಭಾರತದ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಗುವುದು ಗ್ಯಾರಂಟಿ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಕಷ್ಟ. ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಕರ್ನಾಟಕದಲ್ಲೂ ಉತ್ತರಪ್ರದೇಶ ಮಾದರಿಯಲ್ಲಿ ಬಿಜೆಪಿ ಸರ್ಕಾರ ನಡೆದಿದ್ದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸೀಟು ಗೆಲ್ಲಬಹುದಿತ್ತು. ಯೋಗಿ ಆದಿತ್ಯನಾಥ ಅವರ ರೀತಿಯ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ ಎಂದು ಹೇಳಿದ್ದಾರೆ.

ನನ್ನ ಪ್ರಕಾರ ಕರ್ನಾಟಕದಲ್ಲಿ ಈ ಬಾರಿ ಮತ ವಿಭಜನೆಯಾಗುವ ಸಾಧ್ಯತೆ ಇದೆ. ಆದರೆ, ಬಿಜೆಪಿ ತೀರಾ ಸೋತು ಹೋಗುವುದೂ ಇಲ್ಲ. ಆದರೆ, ಕಡಿಮೆ ಸ್ಥಾನ ಸಿಗಲಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಅವರಿಂದ ಅಧಿಕಾರಿಗಳನ್ನು ನಿಯಂತ್ರಿಸುವುದಕ್ಕೆ ಆಗಿರಲಿಲ್ಲ. ಅಧಿಕಾರಿಗಳ ಬಗ್ಗೆ ಮೃದುವಾಗಿದ್ದರು. ಆದರೆ, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿದೆ. ಆದರೆ, ಹೋಗುತ್ತಿರುವ ದಾರಿ ಉತ್ತಮವಾಗಿಲ್ಲ. ಮಹಿಳೆಯರಿಗೆ ಉಚಿತ ಬಸ್ ಟಿಕೆಟ್ ನೀಡಲಾಗಿದೆ. ಎಲ್ಲವನ್ನೂ ಉಚಿತವಾಗಿ ಕೊಡುವುದು ಸರಿಯಾದ ಕ್ರಮವಲ್ಲ. ಈ ರೀತಿ ಎಲ್ಲವನ್ನೂ ಉಚಿತವಾಗಿ ಕೊಡುವುದು ಜನಪ್ರಿಯತೆ ತಂದು ಕೊಡಬಹುದು. ಆದರೆ, ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. 

Tags:    

Similar News