ನಂದಿಬೆಟ್ಟದ ಟಿಪ್ಪು ಅರಮನೆ ಮೇಲೆ ಕುಖ್ಯಾತ ಪಾತಕಿ 'ಲಾರೆನ್ಸ್ ಬಿಷ್ಣೋಯ್' ಹೆಸರು; ಪ್ರವಾಸಿಗರಲ್ಲಿ ಆತಂಕ

ಸ್ಥಳಕ್ಕೆ ಭೇಟಿ ನೀಡಿದ ನಂದಿಗಿರಿಧಾಮ ಠಾಣೆಯ ಪೊಲೀಸರು, ತಕ್ಷಣವೇ ಆ ಬರಹದ ಮೇಲೆ ಬಣ್ಣ ಬಳಿದು ಅದನ್ನು ಅಳಿಸಿಹಾಕಿದ್ದಾರೆ.

Update: 2025-10-27 14:15 GMT

ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿರುವ, ಐತಿಹಾಸಿಕ ಪ್ರಾಮುಖ್ಯತೆಯ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯ ಗೋಡೆಯ ಮೇಲೆ ಕುಖ್ಯಾತ ಅಂತರರಾಷ್ಟ್ರೀಯ ಪಾತಕಿ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಕೆತ್ತಲಾಗಿದ್ದು, ಇದು ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.

ನಂದಿಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ, ಪುರಾತತ್ವ ಇಲಾಖೆಗೆ ಸೇರಿದ ಟಿಪ್ಪು ಬೇಸಿಗೆ ಅರಮನೆಯ ಗೋಡೆಯ ಮೇಲೆ ಯಾರೋ ಕಿಡಿಗೇಡಿಗಳು 'ಲಾರೆನ್ಸ್ ಬಿಷ್ಣೋಯ್' ಎಂದು ಬರೆದು, ಅದರ ನಡುವೆ ಪ್ರೀತಿಯ ಸಂಕೇತವನ್ನೂ ಬಿಡಿಸಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುವ ಮತ್ತು ಬಿಗಿ ಭದ್ರತೆ ಇರುವ ಸ್ಥಳದಲ್ಲಿ ಈ ಘಟನೆ ನಡೆದಿರುವುದು ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ನಂದಿಗಿರಿಧಾಮ ಠಾಣೆಯ ಪೊಲೀಸರು, ತಕ್ಷಣವೇ ಆ ಬರಹದ ಮೇಲೆ ಬಣ್ಣ ಬಳಿದು ಅದನ್ನು ಅಳಿಸಿಹಾಕಿದ್ದಾರೆ. ಈ ಕೃತ್ಯ ಎಸಗಿದ ಕಿಡಿಗೇಡಿಗಳು ಯಾರು ಮತ್ತು ಇದರ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಯಾರು ಈ ಲಾರೆನ್ಸ್ ಬಿಷ್ಣೋಯ್?

ಲಾರೆನ್ಸ್ ಬಿಷ್ಣೋಯ್ ಭಾರತದ ಅತ್ಯಂತ ಕುಖ್ಯಾತ ಮತ್ತು ಕ್ರೂರ ಪಾತಕಿಗಳಲ್ಲಿ ಒಬ್ಬ. ಪಂಜಾಬ್ ಮೂಲದವನಾದ ಈತ, ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ದೇಶದಾದ್ಯಂತ ತನ್ನ ಅಪರಾಧ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾನೆ. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಿಷ್ಣೋಯ್, ನಂತರ ತನ್ನದೇ ಆದ ಬೃಹತ್ ಗ್ಯಾಂಗ್ ಕಟ್ಟಿದ್ದಾನೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಬರ್ಬರ ಹತ್ಯೆಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹಲವು ಬಾರಿ ಜೀವ ಬೆದರಿಕೆ ಹಾಕುವ ಮೂಲಕ ಈತ ದೇಶಾದ್ಯಂತ ಕುಖ್ಯಾತಿ ಪಡೆದಿದ್ದಾನೆ. ಕೊಲೆ, ಸುಲಿಗೆ, ಅಪಹರಣ, ಡ್ರಗ್ಸ್ ಸಾಗಾಟದಂತಹ ನೂರಾರು ಪ್ರಕರಣಗಳು ಈತನ ಮೇಲಿವೆ. ಕೆನಡಾದಲ್ಲಿ ತಲೆಮರೆಸಿಕೊಂಡಿರುವ ಗೋಲ್ಡಿ ಬ್ರಾರ್ ಜೊತೆಗೂಡಿ, ಜೈಲಿನಿಂದಲೇ ವಿಡಿಯೋ ಕಾಲ್ ಮೂಲಕ ತನ್ನ ಸಹಚರರಿಗೆ ಸೂಚನೆ ನೀಡಿ ಅಪರಾಧ ಕೃತ್ಯಗಳನ್ನು ನಡೆಸುತ್ತಾನೆ.

Tags:    

Similar News