ಕೋಲಿ ಸಮಾಜ ಎಸ್ಟಿಗೆ: ಸೆ. 20ಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ: ಸಚಿವ ಪ್ರಿಯಾಂಕ್ ಖರ್ಗೆ
ಕುರುಬ ಹಾಗೂ ಕೋಲಿ ಕಬ್ಬಲಿಗ ಸಮಾಜವನ್ನು ಎಸ್‌ಟಿ ಸೇರಿಸುವ ವಿಚಾರದಲ್ಲಿ ಎಂಥ್ರಾಪಲಾಜಿ ವರದಿ ಸಲ್ಲಿಸಿದ ಸಮಿತಿಯ ಮುಂದೆ ಚರ್ಚೆ ನಡೆಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.;
ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಬಹುದಿನಗಳ ಬೇಡಿಕೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರವು ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಸೆಪ್ಟೆಂಬರ್ 20ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೋಲಿ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವಾಗಿ ಸಮಾಜ ಕಲ್ಯಾಣ ಸಚಿವನಾಗಿದ್ದಾಗ ನಾನೇ ಕೆಲವು ಸ್ಪಷ್ಟನೆಗಳನ್ನು ನೀಡಿದ್ದೆ. ಸಾಂಸ್ಕೃತಿಕ ಮತ್ತು ಐತಿಹಾಸಿಕ ದಾಖಲೆಗಳೊಂದಿಗೆ ಪ್ರಸ್ತಾವನೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಕೇಂದ್ರಕ್ಕೆ ಸಲ್ಲಿಸಲಾಗುವುದು" ಎಂದರು. "ಯಾವುದೇ ಸಂಘಟನೆಯ ಪರ ಅಥವಾ ವಿರೋಧದಿಂದಲ್ಲ, ಬದಲಿಗೆ ಸಂವಿಧಾನದ ಪ್ರಕಾರವೇ ಎಲ್ಲವೂ ನಡೆಯಲಿದೆ" ಎಂದು ಅವರು ಸ್ಪಷ್ಟಪಡಿಸಿದರು.
ಬೆಳೆ ಹಾನಿ ಪರಿಹಾರ ಶೀಘ್ರ ಬಿಡುಗಡೆ
ರಾಜ್ಯದಲ್ಲಿ ನಿರಂತರ ಮಳೆಯಿಂದ ಉಂಟಾಗಿರುವ ಬೆಳೆ ಹಾನಿ ಕುರಿತು ಮಾತನಾಡಿದ ಸಚಿವರು, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿದ್ದು, ಬೆಳೆ ವಿಮೆ ಪರಿಹಾರವನ್ನು ಮುಂದಿನ ಒಂದು ವಾರದೊಳಗೆ ರೈತರ ಖಾತೆಗೆ ಜಮಾ ಮಾಡಲಾಗುವುದು" ಎಂದು ಭರವಸೆ ನೀಡಿದರು. "ಎರಡನೇ ಸುತ್ತಿನ ಮಳೆ ನಿಲ್ಲದ ಕಾರಣ ಸರ್ವೆ ಕಾರ್ಯ ಕಷ್ಟವಾಗುತ್ತಿದೆ. ಮೊದಲ ಹಂತದಲ್ಲೇ 1.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. 3.08 ಲಕ್ಷ ನೋಂದಾಯಿತ ರೈತರ ಪೈಕಿ 1.36 ಲಕ್ಷ ರೈತರ (45%) ಬೆಳೆ ಹಾನಿಗೊಳಗಾಗಿದ್ದು, ಅವರಿಗೆ ಮೊದಲ ಆದ್ಯತೆಯಲ್ಲಿ ಪರಿಹಾರ ನೀಡಲಾಗುವುದು" ಎಂದು ತಿಳಿಸಿದರು.
ರಸ್ತೆಗಳ ಗುಣಮಟ್ಟ ಪರೀಕ್ಷೆಗೆ ಆಡಿಟ್
ಮಳೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯ ಪಿಡಿ ಖಾತೆಯಲ್ಲಿ 40 ಕೋಟಿ ರೂ. ಲಭ್ಯವಿದೆ. ಮಳೆಗಾಲ ಮುಗಿದ ನಂತರ, ನವೆಂಬರ್ ವೇಳೆಗೆ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಇದೇ ವೇಳೆ, ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು 'ರಸ್ತೆ ಆಡಿಟ್' ನಡೆಸಲಾಗುವುದು ಎಂದು ಸಚಿವರು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ
"ಧರ್ಮಸ್ಥಳ, ಮದ್ದೂರು, ಚಾಮುಂಡೇಶ್ವರಿ ಚಲೋ ಮಾಡುವ ಮೂಲಕ ಬಿಜೆಪಿಯವರಿಗೆ ಏನು ಬೇಕಾಗಿದೆ? ಪ್ರಚೋದನಕಾರಿ ಹೇಳಿಕೆ ನೀಡುವುದೇ ಅವರ ಚಾಳಿಯಾಗಿದೆ. ಸಿ.ಟಿ. ರವಿ, ಪ್ರತಾಪ್ ಸಿಂಹ ಸೇರಿದಂತೆ ಯಾವ ಬಿಜೆಪಿ ನಾಯಕರು ತಮ್ಮ ಮಕ್ಕಳ ಕೈಗೆ ಮಚ್ಚು, ಲಾಂಗು ಕೊಟ್ಟು ಧರ್ಮ ರಕ್ಷಣೆಗೆ ಕಳುಹಿಸಿದ್ದಾರೆ? ರಾಜ್ಯವನ್ನು ಉತ್ತರ ಪ್ರದೇಶ, ಬಿಹಾರ ಮಾಡಲು ಹೊರಟಿದ್ದಾರೆಯೇ?" ಎಂದು ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆ
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ಸಂಬಂಧಿಸಿದಂತೆ, "ಚುನಾವಣಾ ಆಯೋಗವು ಬಿಜೆಪಿಯ ಕೈಗೊಂಬೆಯಾಗಿದೆ. ನಾವು ನೀಡಿದ ದೂರುಗಳ ಬಗ್ಗೆಯೂ ವಿಚಾರಣೆ ನಡೆಸುತ್ತಿಲ್ಲ. ಮತದಾರರ ಪಟ್ಟಿ ನೀಡಲು ಆಯೋಗ ವಿಫಲವಾಗಿದೆ" ಎಂದು ಅವರು ಗಂಭೀರ ಆರೋಪ ಮಾಡಿದರು.
ಸಚಿವ ಸಂಪುಟ ಪುನಾರಚನೆ ಕುರಿತ ಪ್ರಶ್ನೆಗೆ, "ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ" ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.