ಸಿಇಟಿ ಕೌನ್ಸೆಲಿಂಗ್: ಸೀಟು ಪಡೆದರೂ ಪ್ರವೇಶ ಪಡೆಯದ 351 ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿ
ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್ ಸೀಟು ಪಡೆದ ಒಟ್ಟು 351 ವಿದ್ಯಾರ್ಥಿಗಳು ಪ್ರವೇಶಕ್ಕೆ ನಿಗದಿಪಡಿಸಿದ ದಿನಾಂಕವಾದ ಸೆಪ್ಟೆಂಬರ್ 14, 2025 ರೊಳಗೆ ಕಾಲೇಜಿಗೆ ಸೇರ್ಪಡೆಯಾಗಿಲ್ಲ.;
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಮೂರನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಸೀಟು ಆಯ್ಕೆ ಮಾಡಿದರೂ ಕಾಲೇಜುಗಳಿಗೆ ಸೇರದ 351 ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಸಿಇಟಿ ನಿಯಮಗಳ ಪ್ರಕಾರ, ಮೊದಲ ಮತ್ತು ಎರಡನೇ ಸುತ್ತುಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಿಗೆ ಬೇರೆ ಆಯ್ಕೆಗಳಿಗೆ ಅವಕಾಶವಿತ್ತು. ಆದರೆ ಮೂರನೇ ಸುತ್ತು ಕೊನೆಯ ಸುತ್ತಾಗಿದ್ದು, ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ಕಡ್ಡಾಯವಾಗಿ ಪ್ರವೇಶ ಪಡೆಯಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿತ್ತು.
ವಿದ್ಯಾರ್ಥಿಗಳು ತಮಗೆ ಪ್ರವೇಶ ಪಡೆಯಲು ಇಷ್ಟವಿರುವ ಕಾಲೇಜುಗಳನ್ನು ಮಾತ್ರ ಆಯ್ಕೆ ಮಾಡಬೇಕೆಂದು ತಿಳಿಸಲಾಗಿತ್ತು. ಆದರೂ, ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್ ಸೀಟು ಪಡೆದ ಒಟ್ಟು 351 ವಿದ್ಯಾರ್ಥಿಗಳು ಪ್ರವೇಶಕ್ಕೆ ನಿಗದಿಪಡಿಸಿದ ದಿನಾಂಕವಾದ ಸೆಪ್ಟೆಂಬರ್ 14, 2025 ರೊಳಗೆ ಕಾಲೇಜಿಗೆ ಸೇರ್ಪಡೆಯಾಗಿಲ್ಲ. ಇದರಿಂದಾಗಿ ಇತರ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಕೈತಪ್ಪಿ ಹೋಗಿದೆ ಎಂದು ಕೆಇಎ ತಿಳಿಸಿದೆ.
ಈ ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಸೀಟುಗಳನ್ನು ನಿರ್ಬಂಧಿಸಿರುವ ಸಾಧ್ಯತೆಗಳಿದ್ದು, ಅವರಲ್ಲಿ ಕೆಲವರು ಈಗಾಗಲೇ ಕಾಮೆಡ್-ಕೆ ಅಥವಾ ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸೀಟ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಮತ್ತು ಇತರ ಅರ್ಹ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಈ ವಿದ್ಯಾರ್ಥಿಗಳನ್ನು ಯಾವುದೇ ಇತರ ಕೋಟಾದಡಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೇರಿಸಿಕೊಳ್ಳಬಾರದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಕೆಇಎ ಶಿಫಾರಸು ಮಾಡಿದೆ.
ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಕೌನ್ಸೆಲಿಂಗ್‌ನಲ್ಲಿ ಸೀಟು ಆಯ್ಕೆ ಮಾಡಿದರೂ ಕಾಲೇಜುಗಳಿಗೆ ಸೇರದ 351 ವಿದ್ಯಾರ್ಥಿಗಳಿಗೆ ಈಗಾಗಲೇ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ವಿದ್ಯಾರ್ಥಿಗಳಿಂದ ನಾವು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದೇವೆ. ಅವರ ಕಾರಣಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ.
ಅವರ ಮೇಲೆ ಶಿಸ್ತು ಕ್ರಮ, ದಂಡ, ನಾಲ್ಕು ವರ್ಷಗಳ ಕಾಲ ಕೌನ್ಸೆಲಿಂಗ್‌ನಿಂದ ನಿಷೇಧದ ತೀರ್ಮಾನಕ್ಕೂ ಮೊದಲು ವಿದ್ಯಾರ್ಥಿಗಳಿಂದ ಸ್ಪಷ್ಟೀಕರಣ ಕೇಳಿ ಅವರಿಗೊಂದು ಅವಕಾಶ ನೀಡಿದ್ದೇವೆ. ಆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.