Higher Education Department orders 50% reduction in fees for various courses that are not in demand
x

ಸಾಂದರ್ಭಿಕ ಚಿತ್ರ

ಬೇಡಿಕೆ ಕಡಿಮೆಯಾದ ಕೋರ್ಸ್‌ಗಳ ಶುಲ್ಕ ಶೇ.50 ಕಡಿತ ; ಉನ್ನತ ಶಿಕ್ಷಣ ಇಲಾಖೆ ಆದೇಶ

ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರಿಂಗ್, ಜವಳಿ ಮತ್ತು ರೇಷ್ಮೆ ತಂತ್ರಜ್ಞಾನ, ಆಟೋಮೊಬೈಲ್ ಕೋರ್ಸ್‌ಗಳಿಗೂ 2025-26ನೇ ಸಾಲಿನಿಂದ ಶುಲ್ಕ ಕಡಿತದ ಸೌಲಭ್ಯ ಸಿಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.


ಉನ್ನತ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ಕಡಿಮೆ ಬೇಡಿಕೆಯಿರುವ ಎಂಜಿನಿಯರಿಂಗ್‌ ಸೇರಿದಂತೆ ಹಲವು ಕೋರ್ಸ್‌ಗಳ ಶುಲ್ಕವನ್ನು ಶೇ. 50ರಷ್ಟು ಕಡಿತ ಮಾಡಿದ್ದು, ಬೇಡಿಕೆ ಹೆಚ್ಚಿರುವ ಕೋರ್ಸ್‌ಗಳ ಶುಲ್ಕವನ್ನು ಶೇ 7.5ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಬೇಡಿಕೆ ಕುಸಿದು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವ ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರಿಂಗ್, ಜವಳಿ ಮತ್ತು ರೇಷ್ಮೆ ತಂತ್ರಜ್ಞಾನ, ಆಟೋಮೊಬೈಲ್ ಕೋರ್ಸ್‌ಗಳಿಗೂ 2025-26ನೇ ಸಾಲಿನಿಂದ ಶುಲ್ಕ ಕಡಿತದ ಸೌಲಭ್ಯ ಸಿಗಲಿದೆ. ಶುಲ್ಕ ವಿನಾಯಿತಿ ಸೌಲಭ್ಯ ಪಡೆಯಲು ಬಯಸುವ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಕೆಇಎಗೆ ಮನವಿ ಸಲ್ಲಿಸಬೇಕು ಎಂದು ಸೂಚಿಸಿದೆ.

ದಾಖಲಾತಿ ಹೆಚ್ಚಿಸಲು ಕ್ರಮ

2024-25 ಶೈಕ್ಷಣಿಕ ಸಾಲಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ 5,723 ಸೀಟುಗಳಿದ್ದು, ಅವುಗಳಲ್ಲಿ 2,883 ಸೀಟುಗಳು ಹಂಚಿಕೆಯಾಗಿದ್ದವು. ಮೆಕ್ಯಾನಿಕಲ್ ವಿಭಾಗದ 5,977 ಸೀಟುಗಳಲ್ಲಿ 2,783 ಸೀಟುಗಳು ಮಾತ್ರ ಭರ್ತಿಯಾಗಿದ್ದು ಈ ವಿಭಾಗಗಳಿಗೆ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ.

ಕೆಲ ಕೋರ್ಸ್‌ಗಳ ಶುಲ್ಕ ಶೇ 7.5 ಹೆಚ್ಚಳ

ವಾಸ್ತುಶಿಲ್ಪ ಶಾಸ್ತ್ರ ಸೇರಿದಂತೆ ಕೆಲ ಕೋರ್ಸ್‌ಗಳ ಶುಲ್ಕವನ್ನು ಖಾಸಗಿ ಕಾಲೇಜುಗಳಿಗೆ ಶೇ 7.5ರಷ್ಟು, ಸರ್ಕಾರಿ ಕಾಲೇಜುಗಳಿಗೆ ಶೇ 5ರಷ್ಟು ಹೆಚ್ಚಿಸಲಾಗಿದೆ. ಈ ಶುಲ್ಕವು ವಿಶ್ವವಿದ್ಯಾಲಯ ನೋಂದಣಿ ಮತ್ತು ಇತರ ಸಂಸ್ಕರಣಾ ಶುಲ್ಕಗಳನ್ನು ಹೊರತುಪಡಿಸಿದೆ.

ಕಳೆದ ವರ್ಷ ಟೈಪ್-1 ಖಾಸಗಿ ಕಾಲೇಜುಗಳಲ್ಲಿ ಸಿಇಟಿ ಸೀಟುಗಳಿಗೆ ₹76,135, ಟೈಪ್-2 ಕಾಲೇಜುಗಳಿಗೆ ₹84,596, ಕಾಮೆಡ್-ಕೆ ಸೀಟುಗಳಿಗೆ ಟೈಪ್-1 ಕಾಲೇಜುಗಳಲ್ಲಿ ₹1,86,111 ಮತ್ತು ಟೈಪ್-2 ಕಾಲೇಜುಗಳಲ್ಲಿ ₹2,61,477 ಶುಲ್ಕವಿತ್ತು.

ಸೂಪರ್‌ನ್ಯೂಮರರಿ ಕೋಟಾದ ಅಡಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಅಂತಹ ವಿದ್ಯಾರ್ಥಿ ಗಳಿಗೆ ಮೊದಲ ವರ್ಷದಲ್ಲಿ ₹20,000 ಶುಲ್ಕ ವಿಧಿಸಲು ಅವಕಾಶ ನೀಡಲಾಗಿದೆ.

Read More
Next Story