Karnataka Examination Authority to allocate seats for D. Pharm course, government orders
x

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಡಿ.ಫಾರ್ಮ ಕೌನ್ಸೆಲಿಂಗ್ ಇನ್ನು ಮುಂದೆ ಕೆಇಎ ಜವಾಬ್ದಾರಿ : ಪಾರದರ್ಶಕತೆಗೆ ಸರ್ಕಾರದ ಆದೇಶ

ಕೆಇಎ ರೋಬೋಟಿಕ್ಸ್ ಪದ್ಧತಿಯ ಮುಖಾಂತರ ಕೌನ್ಸಿಲಿಂಗ್‌ನ್ನು ಮಾಡುವುದರಿಂದ ಯಾವುದೇ ಗೊಂದಲಕ್ಕೆ ಅವಕಾಶವಿರುವುದಿಲ್ಲ. ಡಿ.ಫಾರ್ಮ್ ಕೌನ್ಸಿಲಿಂಗ್‌ನ್ನು ಮ್ಯಾನ್ಯುಯಲ್ ಆಗಿ ಮಾಡುವುದರಿಂದ ಸ್ಪಷ್ಟತೆ ಇರುವುದಿಲ್ಲ.


Click the Play button to hear this message in audio format

ಡಿಪ್ಲೊಮಾ ಇನ್ ಫಾರ್ಮಸಿ (ಡಿ.ಫಾರ್ಮ) ಕೋರ್ಸಿನ ಸರ್ಕಾರಿ ಮತ್ತು ಖಾಸಗಿ ಕೋಟಾದ ಸೀಟುಗಳ ಹಂಚಿಕೆಯನ್ನು 2025-26ನೇ ಸಾಲಿನಿಂದ ಮೆರಿಟ್ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕವೇ ನಡೆಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದಾಗಿ ಡಿ.ಫಾರ್ಮ ಪ್ರವೇಶ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆ ತರಲು ಸರ್ಕಾರ ಮುಂದಾಗಿದೆ.

ಇದುವರೆಗೆ ಡಿ.ಫಾರ್ಮ ಕೋರ್ಸಿನ ಸರ್ಕಾರಿ ಕೋಟಾದ ಸೀಟುಗಳನ್ನು ಪರೀಕ್ಷಾ ಪ್ರಾಧಿಕಾರ ಮಂಡಳಿ ಮತ್ತು ಸರ್ಕಾರಿ ಔಷಧ ವಿಜ್ಞಾನ ಕಾಲೇಜುಗಳ ಸಹಯೋಗದಲ್ಲಿ ಮ್ಯಾನುಯಲ್ (ಮಾನವಚಾಲಿತ) ಕೌನ್ಸೆಲಿಂಗ್ ಮೂಲಕ ಹಂಚಿಕೆ ಮಾಡಲಾಗುತ್ತಿತ್ತು. ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಈ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಈ ವ್ಯವಸ್ಥೆಯಲ್ಲಿ ಹಲವು ಗೊಂದಲಗಳಿದ್ದು, ಸರ್ಕಾರಿ ಕೋಟಾದ ಸೀಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಉಳಿಯುತ್ತಿದ್ದವು. 2022-23 ರಿಂದ 2024-25ರವರೆಗಿನ ಅಂಕಿಅಂಶಗಳನ್ನು ಪರಿಶೀಲಿಸಿದಾಗ, ಸುಮಾರು 4,000 ಸೀಟುಗಳ ಪೈಕಿ ಕೇವಲ 800 ಸೀಟುಗಳು ಮಾತ್ರ ಭರ್ತಿಯಾಗಿದ್ದು, ಉಳಿದವು ಖಾಲಿ ಉಳಿದಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಈ ಸಮಸ್ಯೆಯನ್ನು ಬಗೆಹರಿಸಲು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರ ಪ್ರಸ್ತಾವನೆಯನ್ನು ಪರಿಗಣಿಸಿ, ಸರ್ಕಾರವು ಡಿ.ಫಾರ್ಮ ಸೀಟು ಹಂಚಿಕೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕೆಇಎಗೆ ವಹಿಸಲು ತೀರ್ಮಾನಿಸಿದೆ. ಈಗಾಗಲೇ ಬಿ.ಫಾರ್ಮ, ಎಂ.ಫಾರ್ಮ ಮತ್ತು ಫಾರ್ಮ-ಡಿ ಕೋರ್ಸುಗಳ ಸೀಟು ಹಂಚಿಕೆಯನ್ನು ಕೆಇಎ ಯಶಸ್ವಿಯಾಗಿ ನಡೆಸುತ್ತಿದೆ. ಇದೀಗ ಡಿ.ಫಾರ್ಮ ಕೂಡ ಕೆಇಎ ವ್ಯಾಪ್ತಿಗೆ ಬರುವುದರಿಂದ ಎಲ್ಲಾ ಫಾರ್ಮಸಿ ಕೋರ್ಸುಗಳ ಪ್ರವೇಶಕ್ಕೆ ಒಂದೇ ವೇದಿಕೆ ಲಭ್ಯವಾಗಲಿದೆ.

ಕೆಇಎ ತನ್ನ ಸುಸಜ್ಜಿತ ಆನ್‌ಲೈನ್ ಕೌನ್ಸೆಲಿಂಗ್ ವ್ಯವಸ್ಥೆ ಮತ್ತು ರೋಬೋಟಿಕ್ಸ್ ಪದ್ಧತಿಯ ಮೂಲಕ ಸೀಟು ಹಂಚಿಕೆ ಮಾಡುವುದರಿಂದ, ಮಾನವ ಸಹಜ ದೋಷಗಳು, ದುಷ್ಕೃತ್ಯಗಳು ಮತ್ತು ವಿದ್ಯಾರ್ಥಿಗಳ ಗೊಂದಲಗಳನ್ನು ತಪ್ಪಿಸಬಹುದು. ಅಲ್ಲದೆ, ವೃತ್ತಿಪರ ಕೋರ್ಸುಗಳ ಕೌನ್ಸೆಲಿಂಗ್ ನಿರ್ವಹಣೆಯಲ್ಲಿ ಕೆಇಎಗೆ ಅಪಾರ ಅನುಭವ, ಪರಿಣಿತಿ ಮತ್ತು ಮೂಲಸೌಕರ್ಯ ಲಭ್ಯವಿದೆ. ಈ ಕೇಂದ್ರೀಕೃತ ವ್ಯವಸ್ಥೆಯಿಂದಾಗಿ ಡಿಪ್ಲೊಮಾ ಸೇರಿದಂತೆ ಬಹು ಫಾರ್ಮಸಿ ಕೋರ್ಸುಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯ ಮೂಲಕ ಭಾಗವಹಿಸಲು ಅನುಕೂಲವಾಗಲಿದೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಪಿ.ಕೆ. ಅವರು ಅಧಿಕೃತ ಆದೇಶ ಹೊರಡಿಸಿದ್ದು, 2025-26ನೇ ಸಾಲಿನಿಂದಲೇ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

Read More
Next Story