
ಪರೀಕ್ಷಾ ಅಕ್ರಮಗಳಿಗೆ ಕೆಇಎ ‘5ನೇ ಆಯ್ಕೆ’ಯ ಸೂತ್ರ ; ಕೆಪಿಎಸ್‌ಸಿ ಅಕ್ರಮಗಳಿಗೂ ಇದೇ ಮದ್ದು
ಈಗಾಗಲೇ ತಮಿಳುನಾಡು ಹಾಗೂ ರಾಜಾಸ್ಥಾನ ಲೋಕಸೇವಾ ಆಯೋಗಗಳು ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಐದನೇ ಆಯ್ಕೆ ನೀಡುವ ಮೂಲಕ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಹೆಜ್ಜೆಯಿಟ್ಟಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ, ತಾನು ನಡೆಸುವ ಎಲ್ಲಾ ನೇಮಕಾತಿ ಪರೀಕ್ಷೆಗಳ ಉತ್ತರ ಪತ್ರಿಕೆಗಳಲ್ಲಿ (OMR) ಐದನೇ ಆಯ್ಕೆ ಕಡ್ಡಾಯಗೊಳಿಸಿದೆ. ಈ ಹೊಸ ನಿಯಮವು, ಖಾಲಿ ಬಿಟ್ಟ ಶೀಟ್‌ಗಳನ್ನು ದುರ್ಬಳಕೆ ಮಾಡಿಕೊಂಡು ನಡೆಯುತ್ತಿದ್ದ ಅಕ್ರಮಗಳಿಗೆ ಸಂಪೂರ್ಣ ತಡೆ ಹಾಕಲಿದೆ ಎಂಬ ಬಲವಾದ ವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದೆ.
ಈ ಹಿಂದೆ, ಪಿಎಸ್‌ಐ ನೇಮಕಾತಿಯಂತಹ ಪರೀಕ್ಷೆಗಳಲ್ಲಿ ಒಎಮ್ಆರ್ ಶೀಟ್‌ಗಳನ್ನು ತಿದ್ದಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಪರಿಹಾರವಾಗಿ, ತಮಿಳುನಾಡು ಮತ್ತು ರಾಜಸ್ಥಾನದ ಮಾದರಿಯಲ್ಲಿ, ಅಭ್ಯರ್ಥಿಗಳು ಯಾವುದೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ, ಐದನೇ ಆಯ್ಕೆಯನ್ನು ಕಡ್ಡಾಯವಾಗಿ ಗುರುತು ಮಾಡುವ ನಿಯಮವನ್ನು ಕೆಇಎ ಜಾರಿಗೆ ತಂದಿದೆ. ಇದನ್ನು ಗುರುತು ಮಾಡದೆ ಖಾಲಿ ಬಿಟ್ಟರೆ, ಪ್ರತಿ ಪ್ರಶ್ನೆಗೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಇದೀಗ ಕೆಇಎ ಮಾದರಿಯನ್ನು ಕರ್ನಾಟಕ ಲೋಕಸೇವಾ ಆಯೋಗ (KPSC) ಮತ್ತು ಇತರ ನೇಮಕಾತಿ ಸಂಸ್ಥೆಗಳೂ ಅಳವಡಿಸಿಕೊಳ್ಳಬೇಕು ಎಂದು ಸ್ಪರ್ಧಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.
ಏನಿದು ಆಯ್ಕೆ ಐದು?
ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ನೇಮಕಾತಿ ಪ್ರಾಧಿಕಾರಗಳು ಇಲ್ಲಿಯವರೆಗೂ ಉತ್ತರ ಪತ್ರಿಕೆಯಲ್ಲಿ ಆಯ್ಕೆ ಎ, ಬಿ, ಸಿ, ಡಿ ಎಂದು ಉತ್ತರದ ನಾಲ್ಕು ಆಯ್ಕೆಗಳನ್ನು ನೀಡಲಾಗುತ್ತಿತ್ತು. ಪರೀಕ್ಷಾರ್ಥಿಗೆ ಉತ್ತರ ಗೊತ್ತಿಲ್ಲದಿದ್ದರೆ ನಾಲ್ಕು ಆಯ್ಕೆಗಳನ್ನು ಖಾಲಿ ಬಿಟ್ಟು ಬರಬಹುದಾಗಿತ್ತು. ಆದರೆ ಖಾಲಿ ಬಿಟ್ಟು ಬಂದರೆ ಅಕ್ರಮಗಳಿಗೆ ದಾರಿಯಾಗಬಹುದು ಎಂಬ ಆತಂಕ ಲಕ್ಷಾಂತರ ಸ್ಪರ್ಧಾರ್ಥಿಗಳಲ್ಲಿತ್ತು. 2021 ರಲ್ಲಿ ರಾಜ್ಯ ಪೊಲೀಸ್ ಇಲಾಖೆ ನಡೆಸಿದ್ದ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳ ಉತ್ತರ ಪತ್ರಿಕೆ ತಿದ್ದಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಆದ್ದರಿಂದ ಕೆಇಎ ಉತ್ತರ ಪತ್ರಿಕೆಯಲ್ಲಿ ಐದನೇ ಆಯ್ಕೆ ನೀಡಿದ್ದು ಕಡ್ಡಾಯವಾಗಿ ಭರ್ತಿ ಮಾಡುವಂತೆ ತಿಳಿಸಿದೆ.
ಭರ್ತಿ ಮಾಡದಿದ್ದರೆ 0.25 ಅಂಕ ಕಡಿತ
ಕೆಇಎ ನಡೆಸುವ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಐದು ಆಯ್ಕೆಗಳನ್ನು ನೀಡಲಾಗಿದೆ. ಉತ್ತರ ಗೊತ್ತಿಲ್ಲದಿದ್ದರೆ ಐದನೇ ಆಯ್ಕೆಯನ್ನು ಗುರುತು ಮಾಡಬೇಕು. ಅದಕ್ಕಾಗಿಯೇ ಐದು ನಿಮಿಷಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಗುರುತು ಮಾಡದೆ ಖಾಲಿ ಬಿಟ್ಟರೆ ಸರಿಯುತ್ತರದಲ್ಲಿ 0.25 ಅಂಕಗಳನ್ನು ಕಡಿತ ಮಾಡಲಾಗುವುದು ಎಂದು ಕೆಇಎ ಸ್ಪಷ್ಟಪಡಿಸಿದೆ.
ತಂತ್ರಜ್ಞಾನ ಅಳವಡಿಸಿಕೊಂಡ ಕೆಇಎ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ಮೂರು ವರ್ಷಗಳಿಂದ ಹಲವಾರು ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಿದ್ಯಾರ್ಥಿ ಸ್ನೇಹಿ ಎಂದು ಸಾಬೀತುಪಡಿಸಿದೆ. ಮಾರ್ಚ್‌ನಲ್ಲಿ ಅಳವಡಿಸಿಕೊಂಡ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನ ಚಾಟ್ ಬಾಟ್ ವ್ಯವಸ್ಥೆ ಬಳಸಿ ಅಭ್ಯರ್ಥಿಗಳು ತಮ್ಮ ಪ್ರಶ್ನೆ ಅಥವಾ ಅನುಮಾನಗಳಿಗೆ ನೇರವಾಗಿ ಉತ್ತರ ಪಡೆಯಬಹುದಾಗಿದೆ. ಪ್ರಾಯೋಗಿಕವಾಗಿ ಆರಂಭಿಸಿದ ನಂತರ ಇದುವರೆಗೂ ಲಕ್ಷಾಂತರ ಅಭ್ಯರ್ಥಿಗಳು ಇದರ ಮೂಲಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿದ್ದಾರೆ. ಕೆಇಎ ಆಪ್ ಬಿಡುಗಡೆ ಮಾಡಿದ್ದು, ಆ ಮೂಲಕ ವಿದ್ಯಾರ್ಥಿಗಳು ಆಪ್‌ನಲ್ಲಿಯೇ ಅಪ್ಲಿಕೇಶನ್ ಹಾಕುವುದು, ಶುಲ್ಕ ಕಟ್ಟುವುದು, ತಮ್ಮ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
ಪಾರದರ್ಶಕತೆಗೆ ಮೊದಲ ಆದ್ಯತೆ
ಕೆಇಎ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಹೆಚ್, ʼದ ಫೆಡರಲ್ ಕರ್ನಾಟಕʼ ದೊಂದಿಗೆ ಮಾತನಾಡಿ, ಮೊದಲಿನಿಂದಲೂ ಕೆಇಎ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಿದೆ. ಡಾ. ಎಂ.ಆರ್. ಜಯರಾಮ್ ಸಮಿತಿ ಶಿಫಾರಸಿನಂತೆ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕು ಎಂಬ ಉದ್ದೇಶದಿಂದ ಕೆಇಎ ಒಂದು ಹೆಜ್ಜೆ ಮುಂದಿಟ್ಟಿದ್ದು, ಉತ್ತರ ಪತ್ರಿಕೆಯಲ್ಲಿ ಐದನೇ ಆಯ್ಕೆಯನ್ನು ಪರಿಚಯಿಸಿದೆ. ಮಧ್ಯವರ್ತಿಗಳು ಕೆಲವು ವಿದ್ಯಾರ್ಥಿಗಳ ಬಳಿ ಉತ್ತರ ಪತ್ರಿಕೆ ಖಾಲಿ ಬಿಟ್ಟು ಬಂದರೆ ನಾವು ಉತ್ತರ ಬರೆಸಿ ನಿಮ್ಮನ್ನು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುತ್ತೇವೆ ಎಂದು ಆಮಿಷ ಒಡ್ಡುತ್ತಿರುವ ಬಗ್ಗೆ ಕೆಲವು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಆದ್ದರಿಂದ ಕೆಇಎ ಮುಂದಿನ ದಿನಗಳಲ್ಲಿ ನಡೆಸುವ ಪರೀಕ್ಷೆಗಳಾದ ಸಹಾಯಕ ಪ್ರಧ್ಯಾಪಕ ಹುದ್ದೆಗಳು, ಬಿಎಂಟಿಸಿ ನಿರ್ವಾಹಕ ಹುದ್ದೆಗಳು, ಗ್ರಾಮ ಲೆಕ್ಕಾಧಿಕಾರಿ ಹುದ್ದೆ, ವಿವಿಧ ನಿಗಮ ಮಂಡಳಿಗಳ ಎಸ್‌ಡಿಎ ಹಾಗೂ ಎಫ್‌ಡಿಎ ಸೇರಿದಂತೆ ಪ್ರಾಧಿಕಾರ ನಡೆಸುವ ಎಲ್ಲಾ ನೇಮಕಾತಿ ಪರೀಕ್ಷೆಗಳ ಉತ್ತರ ಪತ್ರಿಕೆಗಳಲ್ಲಿ ಐದನೇ ಆಯ್ಕೆ ನೀಡಲಾಗುವುದು" ಎಂದು ತಿಳಿಸಿದರು.
ಈ ಕುರಿತು ಪರೀಕ್ಷೆ ನಡೆಯುವ ಕೊಠಡಿ ಮೇಲ್ವಿಚಾರಕರಿಗೂ ಪರಿಕ್ಷಾರ್ಥಿಗಳ ಬಳಿ ಐದನೇ ಆಯ್ಕೆಯನ್ನು ಗುರುತು ಮಾಡಿಸುವಂತೆ ತಿಳಿಸಲಾಗಿದೆ. ಈ ಕ್ರಮವು ಉತ್ತಮವಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತು ನಂಬಿಕೆ ಮೂಡಿಸುತ್ತದೆ. ಬೆಂಗಳೂರಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಅದೇ ದಿನ ಸಂಜೆ ತಮ್ಮ ಒಎಂಆರ್ ಶೀಟ್‌ಗಳನ್ನು ವೆಬ್‌ಸೆಟ್‌ನಲ್ಲಿ ನೋಡಬಹುದು. ಆದರೆ ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಒಎಂಆರ್ ಶೀಟ್‌ಗಳು ಕೆಇಎ ಕಚೇರಿಗೆ ತಲುಪಿದ ಕನಿಷ್ಠ ಆರು ಗಂಟೆಗಳಲ್ಲಿ ಅಭ್ಯರ್ಥಿಗಳು ವೀಕ್ಷಿಸಬಹುದು ಎಂದು ಮಾಹಿತಿ ನೀಡಿದರು.
ಕೆಪಿಎಸ್‌ಸಿಯೂ ಐದನೇ ಆಯ್ಕೆ ನೀಡಲಿ
ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಹಾಗೂ ಸಂಶೋಧಕರ (ಅಕ್ಸರ) ಸಂಘಟನೆ ಅಧ್ಯಕ್ಷ ಸಂತೋಷ್ ಮರೂರ್ ʼದ ಫೆಡರಲ್ ಕರ್ನಾಟಕʼ ದ ಜತೆ ಮಾತನಾಡಿ, "ಅಕ್ಸರ ಸಂಘಟನೆ ಹೋರಾಟದ ಫಲವಾಗಿ ಕೆಇಎ ಒಎಂಆರ್ ಶೀಟ್‌ನಲ್ಲಿ ಐದನೇ ಆಯ್ಕೆಯನ್ನು ನೀಡುವ ನಿಯಮವನ್ನು ಅಳವಡಿಸಿಕೊಂಡಿದೆ. ಕೆಇಎ ರೀತಿಯೇ ಕರ್ನಾಟಕ ಲೋಕಸೇವಾ ಆಯೋಗ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಅಳವಡಿಸಿಕೊಳ್ಳಬೇಕು. ಇದರಿಂದ ಪರೀಕ್ಷೆಗಳಲ್ಲಿ ಪಾರದರ್ಶಕತೆಯನ್ನು ತರಬಹುದು ಹಾಗೂ ವಿದ್ಯಾರ್ಥಿಗಳಿಗೂ ಪರೀಕ್ಷಾ ವ್ಯವಸ್ಥೆಯ ಬಗ್ಗೆ ನಂಬಿಕೆ ಬರುತ್ತದೆ. ಸರ್ಕಾರ ಒಳ ಮೀಸಲಾತಿ ನೀಡಿ ಹೊಸ ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸುವಂತೆ ಆದೇಶಿಸಿದೆ. ಆದರೆ ಸರ್ಕಾರ ಕೇವಲ ಎರಡು ವರ್ಷಗಳಿಗೆ ಮಾತ್ರ ವಯೋಮಿತಿ ಸಡಿಸಿಲಿರುವುದು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಸರ್ಕಾರ ಕನಿಷ್ಠ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಬೇಕು. ಕೆಇಎ ರೀತಿಯೇ ಕೆಪಿಎಸ್‌ಸಿಯೂ ಪರೀಕ್ಷಾ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು" ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ಇಲಾಖೆಯಲ್ಲೂ ಅಳವಡಿಕೆ
ರಾಜ್ಯ ಶಿಕ್ಷಣ ಇಲಾಖೆ ನಡೆಸುವ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ(ಟೆಟ್) ಮತ್ತು ನೇಮಕಾತಿ ಪರೀಕ್ಷೆಗಳಲ್ಲಿಯೂ ಕೆಇಎ ರೀತಿ ಉತ್ತರ ಪತ್ರಿಕೆಯಲ್ಲಿ ಐದನೇ ಆಯ್ಕೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯೂ ಅಳವಡಿಸಿಕೊಳ್ಳಲು ಮುಂದಾಗಿದ್ದು, ಪರೀಕ್ಷೆಯಲ್ಲಿ ಪಾರದರ್ಶಕತೆ ತರಲು ಮಹತ್ವದ ನಿರ್ಧಾರ ಕೈಗೊಂಡಿದೆ.
ಪಾರದರದರ್ಶಕತೆ ಹೆಚ್ಚಲಿ
" ಇತ್ತೀಚಿನ ವರ್ಷಗಳಲ್ಲಿ ಕೆಇಎ ಹಲವಾರು ಪರೀಕ್ಷಾ ಸುಧಾರಣೆಗಳನ್ನು ತಂದಿದೆ. ಅದರ ಭಾಗವಾಗಿ ಉತ್ತರ ಪತ್ರಿಕೆಯಲ್ಲಿ ಐದನೇ ಆಯ್ಕೆಯನ್ನು ಕಡ್ಡಾಯವಾಗಿ ಗುರುತು ಮಾಡಬೇಕು ತಪ್ಪಿದಲ್ಲಿ 0.25 ಅಂಕಗಳನ್ನು ಕಡಿತಗೊಳಿಸುವ ನಿಯಮ ಉತ್ತಮವಾದದ್ದು ಹಾಗೂ ಪಾರದರ್ಶಕತೆ ಹೆಚ್ಚಾಗಲಿದೆ. ಕೆಲವು ಪರಿಕ್ಷಾರ್ಥಿಗಳು ಉತ್ತರ ಪತ್ರಿಕೆಯನ್ನು ಖಾಲಿ ಬಿಟ್ಟು ಬರುವುದನ್ನು ನೋಡಿದರೆ ಏನಾದರೂ ಅಕ್ರಮಗಳು ನಡೆಯಬಹುದು ಎಂಬ ಸಂಶಯ ಕಾಡುತ್ತದೆ. ಇತ್ತೀಚೆಗೆ ನಡೆದ 545 ಪಿಎಸ್‌ಐ ಪರೀಕ್ಷೆಯಲ್ಲಿಯೂ ಉತ್ತರ ಪತ್ರಿಕೆ ತಿದ್ದಲಾಗಿದೆ ಎಂಬ ಆರೋಪ ಬಂದಿತ್ತು. ಆದ್ದರಿಂದ ಕೆಇಎ ರೀತಿಯೇ ಕೆಪಿಎಸ್‌ಸಿ ಪರೀಕ್ಷಾ ಸುಧಾರಣೆ ಮಾಡಿಕೊಳ್ಳಬೇಕು ಎಂದು ಪಿಎಸ್‌ಐ ಪರೀಕ್ಷೆಗೆ ತಯಾರಿಯಾಗುತ್ತಿರುವ ಹನುಮಂತರಾಜು ಆರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಉದ್ದೇಶದಿಂದ ಕಳೆದ ಒಂದು ವರ್ಷದಲ್ಲಿ ಯಾವುದೇ ಹೊಸ ನೇಮಕಾತಿಗಳು ನಡೆದಿಲ್ಲ. ಸರ್ಕಾರವೂ ಇದೀಗ ನೇಮಕಾತಿಗಳನ್ನು ನಡೆಸುವಂತೆ ಆದೇಶ ನೀಡಿದೆ. ಕೆಇಎ ರೀತಿಯೇ ಕೆಪಿಎಸ್‌ಸಿ ಕೂಡ ಪರೀಕ್ಷೆಯಲ್ಲಿ ಕೆಲವೊಂದು ಮಾರ್ಪಾಡು ಮಾಡುವ ಮೂಲಕ ಉತ್ತರ ಪತ್ರಿಕೆಯಲ್ಲಿ ಐದನೇ ಆಯ್ಕೆಯನ್ನು ನೀಡಬೇಕು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ನೇಮಕಾತಿ ಪಾರದರ್ಶಕತೆ ಬಗ್ಗೆ ನಂಬಿಕೆ ಬರಲಿದೆ" ಎಂದು ಗ್ರೂಪ್ ʼಸಿʼ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಚಿತ್ರದುರ್ಗದ ಹರೀಶ್ ಬಿ.ಎಸ್ ಅಭಿಪ್ರಾಯಪಟ್ಟರು.