ಆರಂಭವಾಗಲಿದೆ ಪ್ರಾಣಿಗಳ ಆರೈಕೆ ಡಿಪ್ಲೊಮಾ ಕೋರ್ಸ್!
x

ಆರಂಭವಾಗಲಿದೆ ಪ್ರಾಣಿಗಳ ಆರೈಕೆ ಡಿಪ್ಲೊಮಾ ಕೋರ್ಸ್!



ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ (Animal Care and Management)ಯ 10 ತಿಂಗಳುಗಳ ಡಿಪ್ಲೊಮಾ ಕೋರ್ಸ್ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಾತ್ವಿಕ ಅನುಮೋದನೆ ನೀಡಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ನಡೆದ ಮೃಗಾಲಯ ಪ್ರಾಧಿಕಾರದ 156ರ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮೃಗಾಲಯಗಳಲ್ಲಿ ವನ್ಯಜೀವಿಗಳ ಆರೈಕೆಗೆ ನುರಿತ ಸಿಬ್ಬಂದಿಯ ಅಗತ್ಯವಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಬೆಂಗಳೂರಿನ ಲೈಫ್ ಸೈನ್ಸ್ ಎಡ್ಯುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಈ ಕೋರ್ಸ್ ಆರಂಭಿಸಲು ತಾತ್ವಿಕ ಅನುಮೋದನೆ ನೀಡಿದ್ದಾರೆ.

ಈ ಡಿಪ್ಲೊಮಾ ಪದವಿ ಪಡೆದವರಿಗೆ ಉದ್ಯೋಗಾವಕಾಶಗಳು ಲಭಿಸುವಂತಿರಬೇಕು. ದೀರ್ಘಕಾಲ ಈ ಕೋರ್ಸ್ ಪ್ರಾಮುಖ್ಯತೆ ಪಡೆಯುವಂತಿರಬೇಕು, ಈ ನಿಟ್ಟಿನಲ್ಲಿ ಪಠ್ಯಕ್ರಮ ಮತ್ತು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾಧಕ ಬಾಧಕ ಚರ್ಚಿಸಿ ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಲು ಸೂಚಿಸಿದರು.

ಪ್ರಾಣಿಗಳ ಆರೈಕೆ ಹಾಗೂ ನಿರ್ವಹಣೆ ಮಾಡಲು ಆಸಕ್ತ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ವನ್ಯಜೀವಿ ಮತ್ತು ಸಾಕುಪ್ರಾಣಿಗಳ ಸಂರಕ್ಷಣೆ, ನಿರ್ವಹಣೆ, ಆರೈಕೆ ಕುರಿತಂತೆ ಅಗತ್ಯ ಜ್ಞಾನ ಮತ್ತು ಕೌಶಲ ನೀಡುವ ಈ ಡಿಪ್ಲೊಮಾ ಕೋರ್ಸ್ ಪಡೆದವರು ಮೃಗಾಲಯಗಳಲ್ಲಿ, ಪುನರ್ವಸತಿ ಕೇಂದ್ರಗಳಲ್ಲಿ ಪ್ರಾಣಿಪಾಲಕರಾಗಿ ಕೆಲಸ ನಿರ್ವಹಿಸಬಹುದು. ಅದೇ ರೀತಿ ಖಾಸಗಿಯಾಗಿಯೂ ಸಾಕು ಪ್ರಾಣಿಗಳ ಆರೈಕೆ ಕೇಂದ್ರಗಳನ್ನು ನಡೆಸಬಹುದು. ಶಾಲಾ, ಕಾಲೇಜುಗಳಲ್ಲಿ ಪ್ರಾಣಿ ಆರೈಕೆಯ ತರಬೇತಿ ನೀಡಬಹುದು ಎಂದು ಸಭೆಗೆ ತಿಳಿಸಲಾಯಿತು.

Read More
Next Story