ಕೆಇಎ: ಡಿಸಿಇಟಿ ಅಂತಿಮ ಸುತ್ತಿನ ಫಲಿತಾಂಶ ಪ್ರಕಟ, ಕೆ-ಸೆಟ್ ಪರೀಕ್ಷೆಗೆ ಅರ್ಜಿ ಅಹ್ವಾನ
ಸೀಟು ಖಾತರಿ ಚೀಟಿಯನ್ನು ಆ.29 ರೊಳಗೆ ಡೌನ್‌ಲೋಡ್ ಮಾಡಿಕೊಂಡು ಆ.30 ರೊಳಗೆ ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಕೆಇಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.;
ಪ್ರಸಕ್ತ ಸಾಲಿನ ಡಿಸಿಇಟಿ ಮೂರು ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.
ಆ.25 ರಿಂದ 27 ರವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಂಡು, ಆ.28 ರೊಳಗೆ ಶುಲ್ಕ ಪಾವತಿಸಬೇಕು. ಕಾಷನ್ ಡೆಪಾಸಿಟ್ ಕಟ್ಟಿದವರ ಹಣವನ್ನು ಶುಲ್ಕದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಕೆಎಇ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೀಟು ಖಾತರಿ ಚೀಟಿಯನ್ನು ಆ.29 ರೊಳಗೆ ಡೌನ್‌ಲೋಡ್ ಮಾಡಿಕೊಂಡು ಆ.30 ರೊಳಗೆ ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ವಿವರಿಸಿದ್ದಾರೆ. ಕೊನೆ ಸುತ್ತಿನಲ್ಲಿ ಒಟ್ಟು 860 ಮಂದಿಗೆ ವಿವಿಧ ವಿಭಾಗಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಎಂಡಿಎಸ್: ಅರ್ಜಿ ಸಲ್ಲಿಸಲು ಆ.24 ಕೊನೆ ದಿನ
ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಲಭ್ಯವಿರುವ ಸೀಟುಗಳಿಗೆ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಮಾಡುತ್ತಿದ್ದು, ಅರ್ಹರು ಆ.24 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಂಸಿಸಿ, ಕನಿಷ್ಠ ಅರ್ಹತೆಯ ಅಂಕಗಳನ್ನು ಕಡಿಮೆ ಮಾಡಿದ್ದು, ಅರ್ಹರಾಗುವ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಸಲ್ಲಿಸಿರುವವರು ಕೂಡ ಭಾಗವಹಿಸಬಹುದಾಗಿದೆ. ಮೂಲ ದಾಖಲೆಗಳ ಪರಿಶೀಲನೆ ಸಂಬಂಧ ನಂತರ ಮಾಹಿತಿ ನೀಡಲಾಗುವುದು ಎಂದು ಕೆಇಎ ತಿಳಿಸಿದೆ.
ಹೆಚ್ಚುವರಿ ಸೀಟ್ ಮ್ಯಾಟ್ರಿಕ್ಸ್
ಯುಜಿಸಿಇಟಿ ಅಥವಾ ನೀಟ್ ಪ್ರವೇಶ ಕುರಿತ ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್‌ಗಳನ್ನು ಮರು ಕ್ರಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚುವರಿ ಸೀಟ್ ಮ್ಯಾಟ್ರಿಕ್ಸ್ ಬಂದಿರುವ ಕಾರಣಕ್ಕೆ ಕೆಲವು ಕೋರ್ಸ್‌ಗಳಿಗೆ ಆಪ್ಷನ್ಸ್ ದಾಖಲಿಸುವುದಕ್ಕೂ ಅವಕಾಶ ನೀಡಲಾಗಿದೆ.
ಒಟ್ಟು 14 ಬಿಎಸ್‌ಸಿ ನರ್ಸಿಂಗ್, 12 ಆಯುರ್ವೇದ ಮತ್ತು ಎರಡು ಆರ್ಕಿಟೆಕ್ಚರ್ ಕಾಲೇಜುಗಳು ಹೆಚ್ಚುವರಿಯಾಗಿ ಸೀಟ್ ಮ್ಯಾಟ್ರಿಕ್ಸ್ ಗೆ ಸೇರ್ಪಡೆಯಾಗಿವೆ. ಈ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಇಚ್ಛಿಸುವವರು ವೆಬ್‌ಸೈಟ್‌ನಲ್ಲಿ ಲಭ್ಯ ಸೀಟುಗಳ ಮಾಹಿತಿ ಪಡೆದು ಆಪ್ಷನ್ಸ್ ದಾಖಲಿಸಬಹುದು ಎಂದು ವಿವರಿಸಿದ್ದಾರೆ.
ಕೆಸೆಟ್: ಆ.28 ರಿಂದ ಅರ್ಜಿ ಸಲ್ಲಿಕೆ ಆರಂಭ
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (ಕೆಸೆಟ್-2025) ನ.2 ರಂದು ನಡೆಯಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆ. 28ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಸೆ.18 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ಪಾವತಿಗೆ ಸೆ.19 ರವರೆಗೆ ಅವಕಾಶವಿರುತ್ತದೆ. ಅ.24 ರಂದು ಪ್ರವೇಶ ಪತ್ರ ಬಿಡುಗಡೆಯಾಗಲಿದೆ. ಆನ್ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದ್ದು, ಇತರ ಯಾವುದೇ ವಿಧದಲ್ಲಿ ಅರ್ಜಿ ಸ್ವೀಕರಿಸುವುದಿಲ್ಲ.
ಕೆಇಎ ವೆಬ್ ಸೈಟ್ https://cetonline.karnataka.gov.in/kea/ ಅನ್ನು ಪ್ರವೇಶಿಸುವ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಒಟ್ಟು 33 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಕೆಇಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.