ಲೋಕ ಸ್ವಾರಸ್ಯ | ʻಏನಿಲ್ಲ ಏನಿಲ್ಲ... ಏನೇನಿಲ್ಲʼ ಎಂದ ಕಾಶಪ್ಪನವರ್!
ಬುಧವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಹಾಡು ಹೇಳಿದ ಬಾಗಲಕೋಟೆ ಶಾಸಕ ವಿಜಯಾನಂದ ಕಾಶಪ್ಪನವರ್, ಇಳಕಲ್ ನಗರದ ತಮ್ಮ ನಿವಾಸದಲ್ಲಿ ಕರೆದಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ಹಾಡನ್ನು ಹಾಡಿದ್ದಾರೆ. ತಮ್ಮ ಪತ್ನಿ ವೀಣಾ ಕಾಶಪ್ಪನವರ್‌ಗೆ ಕಾಂಗ್ರೆಸ್ ಲೋಕಸಭೆ ಟಿಕೆಟ್ ಕೈತಪ್ಪಿದ್ದಕ್ಕೆ ಜನರಲ್ಲಿ ಇದ್ದ ಗೊಂದಲಕ್ಕೆ ಈ ವೇಳೆ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ʻಏನಿಲ್ಲ ಏನಿಲ್ಲ...ನಿನ್ನ ನನ್ನ ನಡುವೆ ಏನಿಲ್ಲ. ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ....ʼ ಎಂದು ಹಾಡಿದ್ದಾರೆ. ಇದು ಮೊದಲಿಗೆ ನಗು ತರಿಸಿದರೂ, ಹಾಡಿನ ಹಿಂದಿನ ಉದ್ದೇಶವೇನು ಎಂಬುದು ಸದ್ಯ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಬುಧವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಹಾಡು ಹೇಳಿದ ಬಾಗಲಕೋಟೆ ಶಾಸಕ ವಿಜಯಾನಂದ ಕಾಶಪ್ಪನವರ್, ಇಳಕಲ್ ನಗರದ ತಮ್ಮ ನಿವಾಸದಲ್ಲಿ ಕರೆದಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ಹಾಡನ್ನು ಹಾಡಿದ್ದಾರೆ. ತಮ್ಮ ಪತ್ನಿ ವೀಣಾ ಕಾಶಪ್ಪನವರ್‌ಗೆ ಕಾಂಗ್ರೆಸ್ ಲೋಕಸಭೆ ಟಿಕೆಟ್ ಕೈತಪ್ಪಿದ್ದಕ್ಕೆ ಜನರಲ್ಲಿ ಇದ್ದ ಗೊಂದಲಕ್ಕೆ ಈ ವೇಳೆ ಸ್ಪಷ್ಟನೆ ನೀಡಿದ್ದಾರೆ.
ʻʻಕಾಂಗ್ರೆಸ್ ಪಕ್ಷ ಅಂದ್ರೆ ಕಾಶಪ್ಪನವರ ಕುಟುಂಬ. ಕಾಶಪ್ಪನವರ ಕುಟುಂಬ ಅಂದ್ರೆ ಕಾಂಗ್ರೆಸ್. ಇಡೀ ಜಿಲ್ಲೆಯಲ್ಲಿ ಈಗ ಬಹಳಷ್ಟು ಜನರು ಕಾತುರದಿಂದ ಏನಾಗುತ್ತೆ, ಮುಂದೇನು ಆಗಬಹುದು ಎಂದು ಕಾಯುತ್ತಿದ್ದಾರೆ. ಏನು ಆಗಲ್ಲ, ನಾನು ಹುಟ್ಟಿದ್ದು ಕಾಂಗ್ರೆಸ್‌ನಲ್ಲಿ, ಸಾಯೋದು ಸಹ ಕಾಂಗ್ರೆಸ್ಸಿಗನಾಗೆಯೇ ಸಾಯುತ್ತೇನೆ” ಎಂದು ಹೇಳಿದ್ದಾರೆ.
ʻʻಈಗ ಇಡೀ ಕ್ಷೇತ್ರದ ಜನರ ಕಣ್ಣು ನನ್ನ ಮೇಲಿದೆ. ಕಾರಣ ನನ್ನ ಹೆಂಡತಿಗೆ ಟಿಕೆಟ್ ಕೇಳಿದ್ದೆ, ಕೊಡಲಿಲ್ಲ. ನಮಗಿಂತ ಪಕ್ಷವೇ ದೊಡ್ಡದು ಎಂದು ನಂಬಿರುವ ಕುಟುಂಬ ನಮ್ಮದು. ನನಗೆ ಸಿಟ್ಟು ಬರುತ್ತೆ, ಆದರೆ, ಮನಸ್ಸು ಆ ರೀತಿ ಇಲ್ಲ. ಯಾರಾದ್ರೂ ಬಂದು ವಿರೋಧ ಮಾಡು (ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ವಿರುದ್ಧ ಕೆಲಸ) ಅಂದ್ರೂ ನಾನು ವಿರೋಧ ಮಾಡಲ್ಲʼʼ ಎಂದಿದ್ದಾರೆ.
ʻʻಇದು ನನ್ನ ತಾಯಿ ಸಾಕ್ಷಿಯಾಗಿ ಹೇಳುತ್ತಿರುವ ಮಾತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಪ್ರಚಾರ ಮಾಡ್ತಿದ್ದೀನಿ. ಪತ್ನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಪಕ್ಷದ ವಿರುದ್ಧ ಕೆಲಸ ಮಾಡಲ್ಲʼʼ ಎಂದು ತಮ್ಮ ಪಕ್ಷ ನಿಷ್ಠೆ ಸ್ಪಷ್ಟಪಡಿಸಿದ್ದಾರೆ.
ʻʻನನ್ನ ಪತ್ನಿ ವೀಣಾ ಕಾಶಪ್ಪನವರ್ ಟಿಕೆಟ್ ವಂಚಿತಳಾದ ಬಳಿಕ ಬಿಜೆಪಿ ಸಂಪರ್ಕಿಸಿದ್ದಾಳೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದುʼʼ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಸ್ಪಷ್ಟನೆ ನೀಡಿದ್ಧಾರೆ.
ʻʻವಿಧಾನಸಭಾ ಚುನಾವಣೆಯಲ್ಲಿ ನನಗೆ ಬೂತ್ ಮಟ್ಟದ ಅಧ್ಯಕ್ಷರು ಮಾಡಿದ ಪ್ರಾಮಾಣಿಕ ಪ್ರಯತ್ನವೇ 30 ಸಾವಿರ ಅಂತರದ ಗೆಲುವಿಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ಸಂಯುಕ್ತಾ ಪಾಟೀಲಗೆ ನಾನು ಪಡೆದ ಮತಕ್ಕಿಂತ ಹೆಚ್ಚಿನ ಲೀಡ್ ಬರಬೇಕು. ಆ ರೀತಿ ಕೆಲಸ ಮಾಡಬೇಕುʼʼ ಎಂದು ವಿಜಯಾನಂದ ಕಾಶಪ್ಪನವರ್ ಕಾರ್ಯಕರ್ತರಿಗೆ ಹೇಳಿದರು.