ಕಾರವಾರ | ಕುಸಿದುಬಿದ್ದ ಕೋಡಿಭಾಗ್ ಸೇತುವೆ: ನದಿಗೆ ಬಿದ್ದ ಲಾರಿ, ಎನ್‌ಎಚ್‌ಎ ವಿರುದ್ಧ ಪ್ರಕರಣ

ಸೇತುವೆ ನಿರ್ವಹಣೆ ಲೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎ) ಹಾಗೂ ಐಆರ್‌ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Update: 2024-08-07 06:24 GMT

ಉತ್ತರಕನ್ನಡ ಜಿಲ್ಲೆಯ ಕಾರವಾರ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಭಾಗ್ ಸೇತುವೆ ಕಾಳಿ ನದಿಗೆ ಬಿದ್ದು ತಮಿಳುನಾಡು ಮೂಲದ ಲಾರಿ ನದಿಗೆ ಉರುಳಿದೆ. ಲಾರಿ ಚಾಲಕನನ್ನು ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಸೇತುವೆ ನಿರ್ವಹಣೆ ಲೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎ) ಹಾಗೂ ಐಆರ್‌ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾರವಾರ - ಗೋವಾ ಸಂಪರ್ಕಿಸುವ ನಗರದ ಕೋಡಿಭಾಗ್ ಬಳಿ ಇರುವ ಈ ಸೇತುವೆ ಮಂಗಳವಾರ ತಡರಾತ್ರಿ ಸುಮಾರು 12.50ರ ವೇಳೆ ಕುಸಿದಿದೆ. ಫಿಲ್ಲರ್ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದೆ. ಇದೇ ವೇಳೆ ಗೋವಾದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಲಾರಿ ನದಿಗೆ ಉರುಳಿತ್ತು. ತಕ್ಷಣ ಮೀನುಗಾರರು ಹಾಗೂ ಸ್ಥಳೀಯ ಪೊಲೀಸರು ಲಾರಿ ಚಾಲಕ, ಕೇರಳ ಮೂಲದ ಮುರುಗನ್‌ (37) ಎಂಬವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಸಂಭವಿಸುವ ವೇಳೆ ಬೈಕ್ ಹಾಗೂ ಕಾರು ಕೂಡ ಇದೇ ಸೇತುವೆ ಮೇಲೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು, ಅವರು ಸ್ವಲ್ಪದರಲ್ಲೇ ಮುಂದೆ ಸಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಲಾರಿ ನೀರಿನಲ್ಲಿ ಬಿದ್ದಿದ್ದು, ನದಿಯಲ್ಲಿ ಮತ್ಯಾವುದಾದರೂ ವಾಹನಗಳಿವೆಯಾ ಎಂಬ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಪೊಲೀಸರು ದೋಣಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ.

ʻʻದೊಡ್ಡದಾಗಿ ಶಬ್ದ ಬಂತು ಹೊರಗೆ ಬಂದು ನೋಡಿದಾಗ ಸೇತುವೆ ಸಂಪೂರ್ಣ ಕುಸಿದಿತ್ತು. ಓರ್ವನನ್ನು ಮೀನುಗಾರರು ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ. ಸದ್ಯ ಒಂದು ಲಾರಿ ಮಾತ್ರ ನದಿಗೆ ಬಿದ್ದಿದೆ ಎಂದು ಹೇಳುತ್ತಿದ್ದಾರೆ. ಬೈಕ್, ಕಾರು ಕೂಡ ಇತ್ತು. ಅವರು ಮುಂದೆ ಚಲಿಸಿರಬಹುದು ಎನ್ನುತ್ತಿದ್ದಾರೆ. ಈಗಾಗಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೀನುಗಾರರೊಂದಿಗೆ ನದಿಯಲ್ಲಿ ಹುಡುಕಾಟ ನಡೆಸಲಾಗಿದೆʼʼ ಎಂದು ಸ್ಥಳೀಯರಾದ ನಾಗೇಶ್ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಉತ್ತರಕನ್ನಡ ಎಸ್‌ಪಿ ನಾರಾಯಣ ಭೇಟಿ ನೀಡಿದ್ದು, ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ʻʻಇದುವರೆಗೂ ಬಂದ ಮಾಹಿತಿ ಪ್ರಕಾರ ಒಂದೇ ಲಾರಿ ಬಿದ್ದಿದೆ. ಕಾರ್ಯಾಚರಣೆ ಮುಂದುವರೆದಿದೆ. ಇದುವರೆಗೂ ಬೇರೆ ಮಾಹಿತಿ ಸಿಕ್ಕಿಲ್ಲ. ಅಬ್ಬರದ ಮಳೆ, ತುಂಬಿ ಹರಿಯುತ್ತಿರುವ ಕಾಳಿ ನದಿಯ ಸವಾಲಿನ ಮಧ್ಯೆಯೂ ಕರಾವಳಿ ಕಾವಲು ಪಡೆ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಕಾರ್ಯಾಚರಣೆ ಮುಂದುವರೆದಿದೆ. ಅಬ್ಬರದ ಮಳೆಯಿಂದಾಗಿ ಕಾಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಲಾರಿ ಚಾಲಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಮಧ್ಯರಾತ್ರಿ ಏಕಾಏಕಿ ಕೋಡಿಭಾಗ್ ಸೇತುವೆ ಕುಸಿದು ಬಿದ್ದಿತು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಲಾರಿ ಚಾಲಕ ಬಾಲಮುರುಗನ್​ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆʼʼ ಎಂದು ನಾರಾಯಣ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಲಾರಿ ಚಾಲಕ, ʻʻಲಾರಿ ಚಾಲನೆ ಮಾಡುವ ಸಂದರ್ಭದಲ್ಲಿ ಯಾವುದೇ ವಾಹನಗಳು ಸೇತುವೆ ಮೇಲಿರಲಿಲ್ಲ. ನಾನೊಬ್ಬನೇ ಸೇತುವೆ ಮೇಲೆ ಲಾರಿ ಚಲಾಯಿಸುತ್ತಿದ್ದೆ. ಸೇತುವೆ ಮೇಲೆ ಇರುವಾಗಲೇ ಅವಘಡ ಸಂಭವಿಸಿದೆ. ನಾನು ಬದುಕುಳಿದಿದ್ದೇ ಅಚ್ಚರಿಯಾಗಿದೆ. ಜತೆಗೆ ಘಟನೆಯಿಂದ ಮನಸಿಗೆ ಆಘಾತ ಆಗಿದೆ. ರಕ್ಷಣೆ ಮಾಡಿದ ಎಲ್ಲರಿಗೂ ಕೃತಜ್ಞತೆಗಳುʼʼ ಎಂದು ಹೇಳಿದ್ದಾರೆ.

41 ವರ್ಷಗಳ ಹಿಂದೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣದ ವೇಳೆ ಒಂದೇ ಒಂದು ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇನ್ನೊಂದು ಮಾರ್ಗಕ್ಕೆ ಹಳೆ ಸೇತುವೆಯನ್ನೇ ಬಳಸಲಾಗುತ್ತಿತ್ತು. ಸದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎ) ಹಾಗೂ ಐಆರ್‌ಬಿ ಕಂಪನಿ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Similar News