Bangalore Stampede | ಆರ್‌ಸಿಬಿ ಕಾಲ್ತುಳಿತ ಬಳಿಕ ಕಣ್ತೆರೆದ ಸರ್ಕಾರ; ಜನಸಂದಣಿ ನಿಯಂತ್ರಣ ವಿಧೇಯಕ ಮಂಡನೆ: ಮಸೂದೆಯಲ್ಲಿ ಏನಿದೆ?

ದೇಶದಲ್ಲಿ ಅನೇಕ ಕಾಲ್ತುಳಿತ ಪ್ರಕರಣಗಳು ನಡೆದು ಸಾವು-ನೋವು ಹಾಗೂ ಆಸ್ತಿ ಹಾನಿ ಉಂಟಾಗಿರುವುದನ್ನು ತಡೆಗಟ್ಟಲು ಈ ವಿಧೇಯಕ ಅಗತ್ಯವಾಗಿದೆ ಎಂದು ಅವರು ಪರಮೇಶ್ವರ್‌ ತಿಳಿಸಿದ್ದಾರೆ.;

Update: 2025-08-21 05:11 GMT

ವಿಧಾನ ಸಭೆ ಅಧಿವೇಶನ 

ಆರ್‌ಸಿಬಿ ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿರ್ವಹಿಸಲು '2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ) ವಿಧೇಯಕ'ವನ್ನು ವಿಧಾನಸಭೆಯಲ್ಲಿ ಮಂಡಿಸಿದೆ.

ಗೃಹ ಸಚಿವ ಪರಮೇಶ್ವರ್ ಅವರು ಗುರುವಾರ ವಿಧೇಯಕ ಮಂಡಿಸಿ, ಅದರ ಕುರಿತು ಸಮಗ್ರ ವಿವರಣೆ ನೀಡಿದರು.

ಬೆಳಗಾವಿ ಅಧಿವೇಶನದ ಸಮಯದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಲಾಠಿ ಚಾರ್ಜ್ ಆಗಿದ್ದನ್ನು ಉಲ್ಲೇಖಿಸಿದ ಪರಮೇಶ್ವರ್, ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಘಟನೆ ರಾಜ್ಯವನ್ನು ಬೆಚ್ಚಿ ಬೀಳಿಸಿ ಎಚ್ಚರಿಕೆಯ ಗಂಟೆಯಾಗಿತ್ತು ಎಂದ ಅವರು, ದೇಶದಲ್ಲಿ ಅನೇಕ ಕಾಲ್ತುಳಿತ ಪ್ರಕರಣಗಳು ನಡೆದು ಸಾವು-ನೋವು ಹಾಗೂ ಆಸ್ತಿ ಹಾನಿ ಉಂಟಾಗಿವೆ. ರಾಜ್ಯದಲ್ಲಿ ಇದನ್ನು ತಪ್ಪಿಸಲು ವಿಧೇಯಕ ಜಾರಿ ಅಗತ್ಯವಾಗಿತ್ತು ಎಂದು ಪ್ರತಿಪಾದಿಸಿದರು.

ವಿಧೇಯಕದ ಅನ್ವಯ, ಕಾರ್ಯಕ್ರಮದ ಅನುಸಾರ ಸೇರುವ ಜನರ ಸಂಖ್ಯೆ ಆಧರಿಸಿ ಅನುಮತಿ ನೀಡಲಾಗುತ್ತದೆ.

ವಿಧೇಯಕದ ಪ್ರಮುಖ ಅಂಶಗಳು

  • 17,000ಕ್ಕಿಂತ ಕಡಿಮೆ ಜನ ಸೇರುವ ಕಾರ್ಯಕ್ರಮಕ್ಕೆ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು.
  • 7,000ದಿಂದ 50,000 ಜನರವರೆಗೆ ಸೇರುವ ಕಾರ್ಯಕ್ರಮಕ್ಕೆ ಡಿವೈಎಸ್ಪಿ ಅನುಮತಿ ಪಡೆಯಬೇಕು.
  • 50,000ಕ್ಕಿಂತ ಹೆಚ್ಚು ಜನ ಸೇರುವ ಕಾರ್ಯಕ್ರಮಕ್ಕೆ ಎಸ್ಪಿ ಅವರಿಂದ ಅನುಮತಿ ಕಡ್ಡಾಯ.
  • ಇದೇ ರೀತಿಯ ಕಾರ್ಯಕ್ರಮಗಳ ಆಯೋಜಕರೇ ಘಟನೆಯ ಜವಾಬ್ದಾರಿಯನ್ನು ಹೊರಬೇಕು.
  • 50,000ಕ್ಕಿಂತ ಹೆಚ್ಚು ಜನ ಸೇರುವ ಕಾರ್ಯಕ್ರಮಕ್ಕೆ ಆಯೋಜಕರು 1 ಕೋಟಿ ರೂ. ಬಾಂಡ್ ಕೊಡಬೇಕು.
  • ಒಂದು ವೇಳೆ ನಿಯಮಗಳನ್ನು ಪಾಲಿಸದಿದ್ದರೆ ಶಿಕ್ಷೆ ವಿಧಿಸಲು ಅವಕಾಶವಿದೆ.
  • ವದಂತಿ ಹರಡುವವರಿಗೂ ಶಿಕ್ಷೆ ಜಾರಿಯಾಗಲಿದೆ. ವದಂತಿ ಹರಡಿದರೆ ಮೂರು ವರ್ಷಗಳವರೆಗೆ ಶಿಕ್ಷೆ ಮತ್ತು 50,000 ದಂಡ ವಿಧಿಸಬಹುದು.
  • ಪೊಲೀಸರು ಕೂಡ ನಿಯಮಗಳನ್ನು ಪಾಲಿಸದಿದ್ದರೆ ಅವರಿಗೂ ಶಿಕ್ಷೆ ವಿಧಿಸಲಾಗುವುದು.
  • ಯಾವುದೇ ಘಟನೆಯಿಂದ ಪ್ರಾಣಹಾನಿಯಾದರೆ ಕನಿಷ್ಠ 10 ವರ್ಷಗಳ ಶಿಕ್ಷೆಗೆ ಅವಕಾಶವಿದೆ.
  • ಕುಟುಂಬದ ಕಾರ್ಯಕ್ರಮಗಳು ಮದುವೆ, ಖಾಸಗಿ ಸಮಾರಂಭಗಳು ಮತ್ತು ಖಾಸಗಿ ಆವರಣಗಳಲ್ಲಿ ನಡೆಯುವ ಬಾಡಿಗೆ, ಭೋಗ್ಯ, ಗುತ್ತಿಗೆಗೆ ಪಡೆದ ಸ್ಥಳಗಳಲ್ಲಿನ ಕಾರ್ಯಕ್ರಮಗಳಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ.
Live Updates
2025-08-21 06:37 GMT

ರಾಜ್ಯದಲ್ಲಿ ದೊಡ್ಡ ಜಾತ್ರೆಗಳು, ಹಬ್ಬಗಳು ನಡೆಯುತ್ತವೆ. ಅವುಗಳಿಗೆ ವಿಧೇಯಕ ಅನ್ವಯವಾಗಲಿದೆಯೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಶಾಸಕ ಸುನೀಲ್‌ ಕುಮಾರ್‌ ಆಗ್ರಹಿಸಿದರು.

ಒಂದು ಕೋಟಿ ರೂ. ಬಾಂಡ್ ಕೊಡಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ. ಒಂದು ಕೋಟಿ ರೂ. ಬಾಂಡ್ ಕೊಡಲು ದೇಗುಲಗಳಿಂದ ಸಾದ್ಯವೇ, ಇವುಗಳಿಗೆ ರಿಯಾಯಿತಿ ನೀಡಬೇಕು. ರಾಜಕಾರಣಿಗಳು ಹಾಗೂ ಸರ್ಕಾರ ಸಮಾವೇಶಗಳನ್ನು ಮಾಡುತ್ತಾರೆ. ಊಟ ಹಾಕುತ್ತಾರೆ. ಸರ್ಕಾರ ಸಾಧನಾ ಸಮಾವೇಶ ನಡೆಸುತ್ತದೆ. ಈ ಕಾರ್ಯಕ್ರಮಗಳಿಗೆ ಹೊಣೆ ಯಾರು? ಪೊಲೀಸ್‌ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದಕ್ಕೆಲ್ಲಾ ಸೂಕ್ತ ಉತ್ತರ ನೀಡಬೇಕು ಎಂದರು.

 

2025-08-21 06:26 GMT

ರಾಜಕೀಯ ಸಮಾವೇಶಗಳಿಗೂ ಜನಸಂದಣಿ ನಿಯಂತ್ರಣ ವಿಧೇಯಕ ಅನ್ವಯವಾಗಬೇಕು ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ತಿಳಿಸಿದರು.

ಚುನಾವಣೆ ವೇಳೆ ಕಾರ್ಯಕ್ರಮಗಳನ್ನು ಮಾಡುತ್ತೇವೆ, ಆಗ ಯಾರಿಗೋ ಏನೋ ಸಮಸ್ಯೆಯಾಗಿ ಮೃತಪಟ್ಟರೆ ಕಾರ್ಯಕ್ರಮ ಆಯೋಜಕರು ಕಾರಣರಾಗುತ್ತಾರೆ. ಸರ್ಕಾರ ಬಳ್ಳಾರಿಯಲ್ಲಿ ಸಾಧನಾ ಸಮಾವೇಶ ಮಾಡಿದ್ದರು. ಆಗ ಯಾರಿಗಾದರೂ ಸಮಸ್ಯೆಯಾಗಿದ್ದರೆ ಯಾರು ಹೊಣೆ ಹೊರಬೇಕಿತ್ತು? ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಕಾನೂನು ಮಾಡಬೇಕು ಎಂದು ಸರ್ಕಾರಕ್ಕೆ ಆರ್‌. ಅಶೋಕ್‌ ಸಲಹೆ ನೀಡಿದರು.

 

2025-08-21 06:19 GMT

ಜನಸಂದಣಿ ನಿಯಂತ್ರಣ ವಿಧೇಯಕವು ಹೋರಾಟವನ್ನು ಹತ್ತಿಕ್ಕಲು ತರಲಾಗುತ್ತಿದ್ದು, ಬ್ರಿಟಿಷ್‌ ಕಾನೂನಿಗಿಂತ ಹೆಚ್ಚು ಕಠಿಣ ಕಾನೂನು ಇದಾಗಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ದ ಕಿಡಿಕಾರಿದರು. 

ಸರ್ಕಾರದ ವಿರುದ್ಧ ಅನೇಕ ಹೋರಾಟಗಳು ಆಗುತ್ತವೆ. ಬೆಳಗಾವಿಯಲ್ಲಿ ಒಬ್ಬ ಅಧಿಕಾರಿ ಜಿಲ್ಲಾಧಿಕಾರಿ ಅನುಮತಿ ಪಡೆಯದೆ ಲಾಠಿ ಚಾರ್ಜ್ ಮಾಡಿಸಿದ್ದರು. ಬ್ರಿಟಿಷರು ಕೂಡ ಹೀಗೆ ಮಾಡುತ್ತಿದ್ದರು. ಈ ಕಾನೂನು ಬಂದರೆ ಹೋರಾಟ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾನೂನಿನಲ್ಲಿ ಪೊಲೀಸ್‌ಗೂ ಶಿಕ್ಷೆ ಪ್ರಮಾಣ ಆಗಬೇಕು. ಲಾಠಿ ಚಾರ್ಜ್ ಮಾಡಿದ್ದು ಏಕೆ ಎಂದು ಪೊಲೀಸರು ಉತ್ತರ ನೀಡಬೇಕು ಎಂದು ಹೇಳಬೇಕು ಎಂದರು.

 

2025-08-21 05:54 GMT

ಗುರುವಾರ ವಿಧಾನಸಭೆಯಲ್ಲಿ ನಡೆದ ಜನಸಂದಣಿ ನಿಯಂತ್ರಣಕ್ಕೆ ವಿಧೇಯಕ ಮಂಡನೆ ಕುರಿತು ಪ್ರತಿಪಕ್ಷದ ಶಾಸಕ ಸುರೇಶ್‌ ಕುಮಾರ್‌ ತೀವ್ರ ಅಸಮಾಧನ ವ್ಯಕ್ತಪಡಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಅವಘಡ ನಡೆದ ನಂತರ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಇದು ಪೋಸ್ಟ್‌ಮಾರ್ಟಮ್ ವಿಧೇಯಕವಾಗಿದೆ ಎಂದು ಟೀಕಿಸಿದರು. 

ಒಡಿಶಾದಲ್ಲಿ ನಡೆಯುವ ಪುರಿ ಜಗನ್ನಾಥನ ರಥಯಾತ್ರೆಗೆ ಲಕ್ಷಗಟ್ಟಲೆ ಜನ ಸೇರುತ್ತಾರೆ. ಅಲ್ಲೆಲ್ಲ ಹೇಗೆ ಜನಸಂದಣಿ ನಿಯಂತ್ರಿಸುತ್ತಾರೆ?  ನಮ್ಮ ರಾಜ್ಯದಲ್ಲೂ ಕರಗ ಸೇರಿ ಹಲವು ಧಾರ್ಮಿಕ‌ ಉತ್ಸವಗಳಲ್ಲಿ ಜನ ಸೇರುತ್ತಾರೆ. ಆದರೆ ಆರ್‌ಸಿಬಿ ಕಾಲ್ತುಳಿತ ಸರ್ಕಾರದ ಪ್ರಚಾರದ ಹಪಾಹಪಿಯಿಂದ ನಡೆದಿದೆ. ಜನಸಂದಣಿ ನಿಯಂತ್ರಣಕ್ಕೆ ಕಾಯ್ದೆ ತರದೆಯೂ ನಿಯಮ ಮಾಡಬಹುದಿತ್ತು ಎಂದು ತಿಳಿಸಿದರು.

 

 

Tags:    

Similar News