ಮುಂಗಾರು ಅಬ್ಬರ | ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದೆ. ಪರಿಣಾಮ ರಾಜ್ಯದ ಕೊಡಗು, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.;

Update: 2025-07-03 04:38 GMT
ಸಾಂದರ್ಭಿಕ ಚಿತ್ರ

ರಾಜ್ಯಾದ್ಯಂತ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿದೆ. ಇದರ ಪರಿಣಾಮ ಕರ್ನಾಟಕದ ಕೊಡಗು, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಈ ಮೂರು ಜಿಲ್ಲೆಗಳು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಭಾರೀ ಮಳೆ ಮುನ್ಸೂಚನೆ

ಕರಾವಳಿ ಪ್ರದೇಶಗಳಾದ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಉತ್ತರ ಕನ್ನಡದಲ್ಲಿ ಭಾರೀ‌ ಮಳೆಯಾಗುವ ಸಾಧ್ಯತೆ ಇದೆ.

ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಮತ್ತು ಚಿಕ್ಕಮಗಳೂರು ಭಾಗದಲ್ಲೂ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

ಕೊಡಗಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಮೈಸೂರು ಮತ್ತು ಕೊಡಗು ಭಾಗಗಳಲ್ಲೂ ಮಳೆಯ ತೀವ್ರತೆ ಹೆಚ್ಚಾಗಿದೆ. ಕೊಡಗಿನಲ್ಲಿ ಮಳೆಯ ಆರ್ಭಟದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭೂಕುಸಿತದ ಭೀತಿ ಎದುರಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ (ಜುಲೈ 3) ಕೊಡಗು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಚಿಕ್ಕಮಗಳೂರಿನಲ್ಲೂ ಶಾಲೆಗೆ ರಜೆ ಘೋಷಣೆ

ಚಿಕ್ಕಮಗಳೂರಿನಲ್ಲಿ ಜೂನ್ 2ರಿಂದಲೇ ಮಳೆಯ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯ ಕೆಲವು ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ.

ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್.ಆರ್. ಪುರ, ಕಳಸ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಶಾಲೆ, ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಜಾಗರ, ಖಾಂಡ್ಯ, ಆಲ್ದೂರು, ವಸ್ತಾರೆ, ಮತ್ತು ಹೊಬಳಿ ಪ್ರದೇಶಗಳಿಗೂ ರಜೆ ನೀಡಿ ಜಿಲ್ಲಾಧಿಕಾರಿ ಮೀನಾ ನಾಗಾರಾಜ್ ಆದೇಶ ನೀಡಿದ್ದಾರೆ.

ಉತ್ತರ ಕನ್ನಡದಲ್ಲೂ  ಶಾಲೆಗೆ ರಜೆ ಘೋಷಣೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವು ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ರಜೆ ಘೋಷಿಸಿದ್ದಾರೆ.

ಬೆಂಗಳೂರಿನಲ್ಲೂ ಭಾರೀ ಮಳೆ ನಿರೀಕ್ಷೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಗುರುವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Tags:    

Similar News