ಕೋವಿಡ್ ಲಸಿಕೆ ಅಲ್ಲ, ಹೃದಯಾಘಾತಗಳಿಗೆ ಬೇರೆಯದೇ ಕಾರಣ: ಸರ್ಕಾರಕ್ಕೆ ಸಮಿತಿಯ ವರದಿ ಸಲ್ಲಿಕೆ
ಏಪ್ರಿಲ್ ಮತ್ತು ಮೇ 2025ರ ಅವಧಿಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಾದ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ 251 ಕೊರೊನರಿ ಅರ್ಟರಿ ಕಾಯಿಲೆ (CAD) ರೋಗಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ.;
ಕೋವಿಡ್-19 ಲಸಿಕೆಯು ಯುವಕರಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂಬ ವ್ಯಾಪಕ ಊಹಾಪೋಹಗಳಿಗೆ ಕರ್ನಾಟಕ ಸರ್ಕಾರ ತೆರೆ ಎಳೆದಿದೆ. ಸರ್ಕಾರವು ರಚಿಸಿದ್ದ ತಜ್ಞರ ಸಮಿತಿಯ ಸಮಗ್ರ ಅಧ್ಯಯನವು ಈ ಆರೋಪಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ.
ಜಯದೇವ ಹೃದಯ ವಿಜ್ಞಾನ ಮತ್ತು ಹೃದ್ರೋಗ ಸಂಸ್ಥೆಯ ಡಾ. ಕೆ.ಎಸ್. ರವೀಂದ್ರನಾಥ್ ನೇತೃತ್ವದಲ್ಲಿ ನಡೆದ ಈ ಅಧ್ಯಯನವು, ಯುವಕರಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳಿಗೆ ಬದಲಾದ ಜೀವನಶೈಲಿ, ಸಾಂಪ್ರದಾಯಿಕ ಅಪಾಯಕಾರಿ ಅಂಶಗಳು ಮತ್ತು ಸಾಂಕ್ರಾಮಿಕದ ನಂತರದ ಆರೋಗ್ಯ ಬದಲಾವಣೆಗಳೇ ಪ್ರಮುಖ ಕಾರಣ ಎಂದು ವರದಿಯಲ್ಲಿ ತಿಳಿಸಿದೆ.
ಹೃದಯಾಘಾತದದ ಅಧ್ಯಯನದ ವಿವರಗಳು ಮತ್ತು ಫಲಿತಾಂಶಗಳು
ಏಪ್ರಿಲ್ ಮತ್ತು ಮೇ 2025ರ ಅವಧಿಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಾದ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ 251 ಕೊರೊನರಿ ಅರ್ಟರಿ ಕಾಯಿಲೆ (CAD) ರೋಗಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಭಾಗವಹಿಸಿದವರಲ್ಲಿ ಬಹುತೇಕರು (87%) ಪುರುಷರಾಗಿದ್ದು, ಸುಮಾರು ಅರ್ಧದಷ್ಟು ಜನ ಬೆಂಗಳೂರಿನವರಾಗಿದ್ದರು. ಅವರ ಆರೋಗ್ಯ ಸ್ಥಿತಿ, ಜೀವನಶೈಲಿಯ ರೀತಿ, ಕೋವಿಡ್-19 ಸೋಂಕಿನ ಇತಿಹಾಸ ಮತ್ತು ಲಸಿಕೆ ವಿವರಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲಾಗಿದೆ.
ಅಧ್ಯಯನದ ಪ್ರಮುಖ ಅಂಶವೆಂದರೆ, ರೋಗಿಗಳಲ್ಲಿ ಕೇವಲ 7.6% ಜನರಿಗೆ ಮಾತ್ರ ಕೋವಿಡ್-19 ಸೋಂಕು ಬಂದಿತ್ತು. ಬಹುತೇಕ ಎಲ್ಲರೂ (251ರಲ್ಲಿ 249 ಜನರು) ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದರು. ಅವರಲ್ಲಿ 72% ಜನರು ಎರಡೂ ಡೋಸ್‌ಗಳನ್ನು ಪೂರ್ಣಗೊಳಿಸಿದ್ದರು. ಲಸಿಕೆ ಪಡೆದವರಲ್ಲಿ 57% ಕೋವಿಶೀಲ್ಡ್, 26% ಕೋವ್ಯಾಕ್ಸಿನ್ ಪಡೆದಿದ್ದರೆ, 17% ಜನರಿಗೆ ತಾವು ಯಾವ ಕಂಪನಿಯ ಲಸಿಕೆ ಪಡೆದಿದ್ದೇವೆ ಎಂಬ ಬಗ್ಗೆ ನಿಖರ ಮಾಹಿತಿ ಇರಲಿಲ್ಲ.
ವೈಜ್ಞಾನಿಕ ಹಿನ್ನೆಲೆ ಮತ್ತು ದತ್ತಾಂಶ ವಿಶ್ಲೇಷಣೆ
ಕೋವಿಡ್-19 ಸೋಂಕು, ವಿಶೇಷವಾಗಿ ಆಸ್ಪತ್ರೆಗೆ ದಾಖಲಾದ ಪ್ರಕರಣಗಳಲ್ಲಿ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ದೀರ್ಘಕಾಲೀನ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಜಾಗತಿಕವಾಗಿ ಈಗಾಗಲೇ ಸಾಬೀತಾಗಿದೆ. ಲಸಿಕೆಗಳು ಯುವ ಪುರುಷರಲ್ಲಿ ಅಪರೂಪದ 'ಮಯೋಕಾರ್ಡಿಟಿಸ್' (ಹೃದಯ ಸ್ನಾಯುಗಳ ಉರಿಯೂತ) ಸಮಸ್ಯೆಗೆ ಕಾರಣವಾಗಿವೆ ಎಂಬ ವರದಿಗಳಿದ್ದರೂ, ಲಸಿಕೆಯಿಂದ ಬರುವ ಈ ಅಪಾಯವು ಅತ್ಯಂತ ಕಡಿಮೆ ಎಂದು ಅಧ್ಯಯನಗಳು ತೋರಿಸಿವೆ. ಭಾರತೀಯ ದತ್ತಾಂಶವು ಲಸಿಕೆ ಮತ್ತು ಅನಿರೀಕ್ಷಿತ ಹಠಾತ್ ಸಾವುಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಬದಲಿಗೆ, ಎರಡು ಡೋಸ್ ಲಸಿಕೆ ಪಡೆದವರಲ್ಲಿ ಹೃದಯ ಸಂಬಂಧಿ ಅಪಾಯ ಕಡಿಮೆ ಇರುವುದನ್ನು ಅದು ಸೂಚಿಸಿದೆ.
ಹೃದಯ ಸಮಸ್ಯೆಗಳಿಗೆ ಜೀವನಶೈಲಿಯೇ ಪ್ರಮುಖ ಕಾರಣ
ಅಧ್ಯಯನವು ಹೃದಯ ಸಂಬಂಧಿ ಕಾಯಿಲೆಗಳ ಹೆಚ್ಚಳಕ್ಕೆ ಬದಲಾದ ಜೀವನಶೈಲಿಯೇ ಮುಖ್ಯ ಕಾರಣ ಎಂದು ದೃಢಪಡಿಸಿದೆ. 2019ರ ಪೂರ್ವ-ಕೋವಿಡ್ ಅವಧಿಗೆ ಹೋಲಿಸಿದರೆ, 2025ರಲ್ಲಿ ಯುವ ಹೃದಯ ರೋಗಿಗಳಲ್ಲಿ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿವೆ. ಮಧುಮೇಹದ ಪ್ರಮಾಣವು 2019ರಲ್ಲಿ 13.9% ಇದ್ದು, 2025ಕ್ಕೆ 20.5%ಕ್ಕೆ ಏರಿದೆ. ಅಧಿಕ ರಕ್ತದೊತ್ತಡದ ಪ್ರಕರಣಗಳು 13.9%ನಿಂದ 17.6%ಕ್ಕೆ ಹೆಚ್ಚಳವಾಗಿವೆ. ಹೆಚ್ಚಿನ ಕೊಲೆಸ್ಟ್ರಾಲ್ ಸಮಸ್ಯೆ 38.1%ನಿಂದ 44.1%ಕ್ಕೆ ಏರಿಕೆ ಕಂಡಿದೆ. ಧೂಮಪಾನಿಗಳ ಸಂಖ್ಯೆ 2019ರಲ್ಲಿ 48.8% ಇದ್ದು, 2025ಕ್ಕೆ 51%ಕ್ಕೆ ತಲುಪಿದೆ.
ಸುಮಾರು 27% ರೋಗಿಗಳಲ್ಲಿ ಯಾವುದೇ ಸಾಂಪ್ರದಾಯಿಕ ಅಪಾಯಕಾರಿ ಅಂಶಗಳು ಕಂಡುಬಂದಿಲ್ಲ ಎಂಬುದು ಆತಂಕಕಾರಿ ವಿಷಯವಾಗಿದೆ. ಇದು ಊತ ಅಥವಾ ಪ್ರೊ-ಥ್ರಾಂಬೋಟಿಕ್ ಸ್ಥಿತಿಗಳಂತಹ ಇನ್ನೂ ಗೊತ್ತಿಲ್ಲದ ಕಾರಣಗಳು ಅವರ ಹೃದಯ ಸಮಸ್ಯೆಗಳಿಗೆ ಕಾರಣವಾಗಿರುವ ಸಾಧ್ಯತೆಯನ್ನು ಅಧ್ಯಯನ ಅಂದಾಜಿಸಿದೆ.
ವರದಿಯ ಪ್ರಮುಖ ತೀರ್ಮಾನಗಳು, ಶಿಫಾರಸುಗಳು
ಕೋವಿಡ್-19 ಲಸಿಕೆಗಳು ಮತ್ತು ಹಠಾತ್ ಹೃದಯ ಸಾವುಗಳ ನಡುವೆ ಯಾವುದೇ ನೇರ ಕಾರಣ ಸಂಬಂಧವಿಲ್ಲ ಎಂದು ವರದಿ ಸ್ಪಷ್ಟವಾಗಿ ತೀರ್ಮಾನಿಸಿದೆ. ಯುವಕರಲ್ಲಿ ಹೃದಯ ಕಾಯಿಲೆಯ ಹೆಚ್ಚಳಕ್ಕೆ ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ ಮತ್ತು ಕೊಲೆಸ್ಟ್ರಾಲ್‌ನಂತಹ ಸಾಂಪ್ರದಾಯಿಕ ಮತ್ತು ಗೊತ್ತಿರುವ ಅಪಾಯಕಾರಿ ಅಂಶಗಳೇ ಪ್ರಮುಖ ಕಾರಣ ಎಂದು ಅದು ಹೇಳಿದೆ. ಕೋವಿಡ್ ನಂತರದ ದೀರ್ಘಕಾಲೀನ ಪರಿಣಾಮಗಳು ಹೃದಯ ಘಟನೆಗಳಿಗೆ ಕಾರಣವಾಗಿದೆ ಎಂಬ ಸಿದ್ಧಾಂತಕ್ಕೆ ಪ್ರಸ್ತುತ ದತ್ತಾಂಶದಿಂದ ನೇರ ಬೆಂಬಲವಿಲ್ಲ ಎಂದೂ ವರದಿ ಸ್ಪಷ್ಟಪಡಿಸಿದೆ.
ಈ ವರದಿಯಲ್ಲಿ ಹಲವು ಪ್ರಮುಖ ಶಿಫಾರಸುಗಳನ್ನು ಮಾಡಲಾಗಿದೆ. ಯುವಕರಲ್ಲಿ ಹಠಾತ್ ಹೃದಯಾಘಾತ ತಡೆಗಟ್ಟಲು ರಾಷ್ಟ್ರೀಯ ಹೃದಯ ಕಣ್ಗಾವಲು ಕಾರ್ಯಕ್ರಮವನ್ನು ರೂಪಿಸಬೇಕು. ಕಾರಣಗಳು ಇಲ್ಲದ ಮರಣಗಳಿಗೆ ಕಡ್ಡಾಯ ಶವಪರೀಕ್ಷೆ ಆಧಾರಿತ ವರದಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಶಾಲಾ ಮಟ್ಟದಿಂದಲೇ (15 ವರ್ಷದಿಂದ) ನಿಯಮಿತ ಹೃದಯರಕ್ತನಾಳದ ತಪಾಸಣೆಗಳನ್ನು ನಡೆಸಬೇಕು. ಆರಂಭಿಕ ಗುರುತಿಸುವಿಕೆ ಮತ್ತು ತಡೆಗಟ್ಟುವಿಕೆಯ ಬಗ್ಗೆ ವ್ಯಾಪಕ ಸಾರ್ವಜನಿಕ ಆರೋಗ್ಯ ಅಭಿಯಾನಗಳನ್ನು ಕೈಗೊಳ್ಳಬೇಕು. ದೈಹಿಕ ಚಟುವಟಿಕೆ, ಒಳ್ಳೆಯ ನಿದ್ರೆ, ಒತ್ತಡ ಕಡಿಮೆಗೊಳಿಸುವಿಕೆ ಮತ್ತು ಆರೋಗ್ಯಕರ ಆಹಾರವನ್ನು ಉತ್ತೇಜಿಸುವ ಜೀವನಶೈಲಿ ಬದಲಾವಣೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಅಂತಿಮವಾಗಿ, ಕೋವಿಡ್-19ರ ದೀರ್ಘಕಾಲೀನ ಪರಿಣಾಮಗಳನ್ನು ತನಿಖೆ ಮಾಡಲು ಐಸಿಎಂಆರ್ (ICMR) ನೇತೃತ್ವದಲ್ಲಿ ದೊಡ್ಡ ಪ್ರಮಾಣದ, ಬಹು-ಕೇಂದ್ರ ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ವರದಿ ಶಿಫಾರಸು ಮಾಡಿದೆ.