ಬೆಲೆ ಏರಿಕೆ ʼಗ್ಯಾರಂಟಿʼ | ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ದಿಢೀರ್‌ ಏರಿಕೆ

ಇದೀಗ ಮೂರು ರೂ. ಹೆಚ್ಚಳ ಮಾಡಿರುವುದರಿಂದ ಪೆಟ್ರೋಲ್‌ ಬೆಲೆ 104-105 ರೂ.ವರೆಗೆ ಏರಿಕೆಯಾಗಲಿದೆ. ಈಗಾಗಲೇ ಬೆಲೆ ಏರಿಕೆಗೆ ಸಿಕ್ಕಿ ಸಂಕಷ್ಟಕ್ಕೀಡಾಗಿರುವ ಜನಸಾಮಾನ್ಯರ ಪಾಲಿಗೆ ಈ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.;

Update: 2024-06-15 11:53 GMT

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಏಕಾಏಕಿ 3 ರೂಪಾಯಿಗಳಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಶನಿವಾರ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದ್ದು, ಕರ್ನಾಟಕದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಳ ತತಕ್ಷಣದಿಂದಲೇ ಜಾರಿಗೆ ಬರಲಿದೆ.

ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಆರ್ಥಿಕ ಇಲಾಖೆಯ ಪುನಶ್ಚೇತನಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅಬಕಾರಿ ತೆರಿಗೆ , ಮೋಟಾರು ವಾಹನಗಳ ತೆರಿಗೆ ಸೇರಿದಂತೆ ಇತರ ತೆರಿಗೆಗಳ ಗಳಿಕೆಯಲ್ಲಿ ಹಿನ್ನಡೆ ಆಗಿರುವುದರಿಂದ ಅನಿವಾರ್ಯವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ಇಲಾಖೆ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ವಿಸ್ತ್ರತ ಚರ್ಚೆ ನಡೆಸಿದ್ದರು. ಆರ್ಥಿಕ ಇಲಾಖೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದಾರೆ.

ಶನಿವಾರದ ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ, ಕರ್ನಾಟಕ ಮಾರಾಟ ತೆರಿಗೆ ಕಾಯಿದೆ ಪ್ರಕಾರ  ಪೆಟ್ರೋಲ್ ಮೇಲೆ ಶೇಕಡಾ 25.92 ರಿಂದ ಶೇಕಡಾ 29.84 ಕ್ಕೆ ಮತ್ತು ಡೀಸೆಲ್ ಮೇಲೆ ಶೇಕಡಾ 14.3 ರಿಂದ ಶೇಕಡಾ 18.4 ಕ್ಕೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ರಾಜ್ಯ ಹಣಕಾಸು ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಕೋವಿಡ್‌ ಸಂದರ್ಭದಲ್ಲಿ ಆರ್ಥಿಕ ಪುನಶ್ಚೇತನಕ್ಕೆ  ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಲೀಟರ್‌ಗೆ 13.30 ರೂ ಮತ್ತು  19.40 ರೂ. ಹೆಚ್ಚಿಸಿತ್ತು. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ ಪ್ರಸ್ತುತ 99.84 ರೂ.ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಲೀಟರ್‌ಗೆ 85.93 ರೂ.ಗೆ ಮಾರಾಟವಾಗುತ್ತಿದೆ.

ಇದೀಗ ಮೂರು ರೂ. ಹೆಚ್ಚಳ ಮಾಡಿರುವುದರಿಂದ ಪೆಟ್ರೋಲ್‌ ಬೆಲೆ 104-105 ರೂ.ವರೆಗೆ ಏರಿಕೆಯಾಗಲಿದೆ. ಈಗಾಗಲೇ ಬೆಲೆ ಏರಿಕೆಗೆ ಸಿಕ್ಕಿ ಸಂಕಷ್ಟಕ್ಕೀಡಾಗಿರುವ ಜನಸಾಮಾನ್ಯರ ಪಾಲಿಗೆ ಈ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Tags:    

Similar News