ದಕ್ಷಿಣ ಕನ್ನಡ ಆನೆ ಕಾರ್ಯಪಡೆಗೆ 48 ಸಿಬ್ಬಂದಿ ನಿಯೋಜನೆ ಮಾಡಿ ಅನುಮೋದನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆನೆಗಳನ್ನು ಮರಳಿ ಕಾಡಿಗಟ್ಟಲು ಪ್ರತ್ಯೇಕ ಆನೆ ಕಾರ್ಯಪಡೆಗೆ 48 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Update: 2025-10-05 13:04 GMT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆನೆಗಳನ್ನು ಮರಳಿ ಕಾಡಿಗಟ್ಟಲು ಪ್ರತ್ಯೇಕ ಆನೆ ಕಾರ್ಯಪಡೆಗೆ 48 ಸಿಬ್ಬಂದಿ ನಿಯೋಜನೆ ಮಾಡಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅನುಮೋದನೆ ನೀಡಿದ್ದಾರೆ. 

ಕಾರ್ಯಪಡೆಯ ನೇತೃತ್ವವನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಹಿಸಲಿದ್ದು, ಪಡೆಯಲ್ಲಿ ಒಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ಪಶುವೈದ್ಯಾಧಿಕಾರಿ, ಒಬ್ಬರು ವಲಯ ಅರಣ್ಯಾಧಿಕಾರಿ, ನಾಲ್ವರು ಉಪ ವಲಯ ಅರಣ್ಯಾಧಿಕಾರಿ ಹಾಗೂ 8 ಅರಣ್ಯ ರಕ್ಷಕರು ಹಾಗೂ 32 ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿ ಇರಲಿದ್ದಾರೆ.

ಈ ಆನೆ ಕಾರ್ಯಪಡೆಯು ಕಾಡಾನೆಗಳು ಓಡಾಡುವ ವಸತಿ ಪ್ರದೇಶ, ರೈತರ ತೋಟ, ಜಮೀನಿನ ಬಳಿ ಗಸ್ತು ತಿರುಗಲಿದ್ದು, ಆನೆಗಳು ಕಂಡು ಬಂದಲ್ಲಿ ಕಾಡಿಗೆ ಮರಳಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಿದೆ. ಆನೆಗಳ ಚಲನವಲನದ ಬಗ್ಗೆ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಆ ಮೂಲಕ ಸಾರ್ವಜನಿಕರಿಗೆ ಮುನ್ನಚ್ಚರಿಕೆ ಸಂದೇಶ ರವಾನಿಸಲು ನೆರವಾಗಲಿದೆ. ಇದರಿಂದ ರೈತರಿಗೆ ಉಂಟಾಗುತ್ತಿದ್ದ ಬೆಳೆ ಹಾನಿ ತಪ್ಪಿಸಲು ಮತ್ತು ಅಮೂಲ್ಯ ಜೀವ ಉಳಿಸಲು ಸಹಕಾರಿ ಆಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ತುಮಕೂರು ಜಿಲ್ಲೆ ಚಿರತೆ ಕಾರ್ಯಪಡೆಗೆ 59 ಸಿಬ್ಬಂದಿ

ಇದೇ ವೇಳೆ ತುಮಕೂರು ಜಿಲ್ಲೆ ಕುಣಿಗಲ್, ತಿಪಟೂರು, ಮಧುಗಿರಿ, ಪಾವಗಡ ಮತ್ತು ಕೊರಟಗೆರೆ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿರತೆ ಕಾರ್ಯಪಡೆ ರಚಿಸಿ, 59 ಸಿಬ್ಬಂದಿಯನ್ನು ನಿಯೋಜಿಸಲು ಅನುಮೋದನೆ ನೀಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿರತೆ ಕಾರ್ಯಪಡೆ ಮುಖ್ಯಸ್ಥರಾಗಿರಲಿದ್ದು, ಪಡೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ಪಶುವೈದ್ಯರು, ಒಬ್ಬ ವಲಯ ಅರಣ್ಯಾಧಿಕಾರಿ, 4 ಉಪ ವಲಯ ಅರಣ್ಯಾಧಿಕಾರಿ, 8 ಗಸ್ತು ಅರಣ್ಯ ಪಾಲಕರು, 5 ವಾಹನ ಚಾಲಕರು ಹಾಗೂ ಹೊರಗುತ್ತಿಗೆಯ 40 ಸಿಬ್ಬಂದಿಯನ್ನು ನಿಯೋಜಿಸಲು ಒಪ್ಪಿಗೆ ಸೂಚಿಸಿದ್ದಾರೆ. 

ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ 4 ತಂಡದಲ್ಲಿ ಈ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ. ಈ ಪಡೆ ಚಿರತೆ ಹಾವಳಿ ಇರುವ ಗ್ರಾಮಗಳಲ್ಲಿ ಗಸ್ತು ನಡೆಸಲಿದ್ದು, ರೈತರ ಜಮೀನು, ವಸತಿ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡರೆ ಅದರ ಸೆರೆಗೆ ತುರ್ತು ಕ್ರಮ ವಹಿಸಲಿದೆ. ಕಾರ್ಯಪಡೆಯು ಜಿಲ್ಲಾಡಳಿತದೊಂದಿಗೆ ಸಮನ್ವಯತೆಯೊಂದಿಗೆ ಕಾರ್ಯ ನಿರ್ವಹಿಸಲಿದೆ. 

Tags:    

Similar News