ಓಜೋನ್ ಅರ್ಬಾನಾ ಸಂಸ್ಥೆಗೆ ಸೇರಿದ 423 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಿದ ಇಡಿ
ಯೋಜನೆಯ 92 ಫ್ಲ್ಯಾಟುಗಳು, 4.5 ಎಕರೆ ವಾಣಿಜ್ಯ ಭೂಮಿ, ಮೂಡಿಗೆರೆಯ ಕನ್ನೇಹಳ್ಳಿ ಗ್ರಾಮದ 179 ಎಕರೆ ಸೇರಿ ಒಟ್ಟು 423.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.
ಫ್ಲ್ಯಾಟ್ ಹಂಚಿಕೆಯಲ್ಲಿ ವಂಚನೆ ಮಾಡಿ ಅಕ್ರಮ ಹಣ ವರ್ಗಾವಣೆ ಆರೋಪದದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಸಂಸ್ಥೆಗೆ ಸೇರಿದ 423.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಿದೆ.
ಯೋಜನೆಯ 92 ಫ್ಲ್ಯಾಟುಗಳು, ಅಕ್ವಾ–2 ಯೋಜನೆಯ 13 ಫ್ಲ್ಯಾಟುಗಳು, 4.5 ಎಕರೆ ವಾಣಿಜ್ಯ ಭೂಮಿ ಹಾಗೂ ವಸುದೇವನ್ ಮತ್ತು ಅವರ ಪತ್ನಿಯ ಮೂಡಿಗೆರೆಯ ಕನ್ನೇಹಳ್ಳಿ ಗ್ರಾಮದಲ್ಲಿನ 179 ಎಕರೆ ವೈಯಕ್ತಿಕ ಭೂಮಿ ಸೇರಿದಂತೆ ಒಟ್ಟು 423.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.
3,300 ಕೋಟಿ ರೂ. ವಂಚನೆ ಆರೋಪದ ಮೇಲೆ ಓಜೋನ್ ಅರ್ಬನ್ ಇನ್‌ಫ್ರಾ ಡೆವಲಪರ್ಸ್ ಸಂಸ್ಥೆಯ ವಿರುದ್ಧ ಫ್ಲ್ಯಾಟ್ ಖರೀದಿದಾರರು ಎಫ್ಐಆರ್ ದಾಖಲಿಸಿದ್ದಾರೆ. ಓಜೋನ್ ಅರ್ಬನ್ ಇನ್‌ಫ್ರಾ ಡೆವಲಪರ್ಸ್ ಸಂಸ್ಥೆ ಮತ್ತು ಕೆಲವು ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೇವನಹಳ್ಳಿ ತಾಲ್ಲೂಕಿನ ಓಜೋನ್ ಅರ್ಬನಾ ಟೌನ್‌ಶಿಪ್ ಯೋಜನೆಯ ಕ್ಷೇಮಾಭಿವೃದ್ಧಿ ಸಂಘವು ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಎಫ್ಐಆರ್ ದಾಖಲಿಸಿದೆ. ಅಲ್ಲದೇ, ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾದ ಹಲವು ಎಫ್‌ಐಆರ್ ದಾಖಲಾಗಿದ್ದವು. ಇವುಗಳ ಆಧಾರದ ಮೇಲೆ ಇಡಿ ತನಿಖೆ ಕೈಗೊಂಡಿದೆ.
ಕಂಪನಿಯು ತನ್ನ ನಿವಾಸಿ ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸದೆ, ಗ್ರಾಹಕರಿಗೆ ಮನೆಗಳ ಹಸ್ತಾಂತರ ಮಾಡದೆ ವಿಫಲವಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ. ಅಲ್ಲದೇ, ಕಂಪನಿ ನೀಡಿದೆ ಆಶ್ವಾಸನೆಗಳನ್ನು ಪೂರ್ಣಗೊಳಿಸದೆ, ಗ್ರಾಹಕರ ಹಣವನ್ನು ವಾಪಸ್ ನೀಡದೆ, ಮುಂಗಡ ಬುಕ್ಕಿಂಗ್ ಮೊತ್ತ ಮತ್ತು ಸಾಲದ ಮೊತ್ತವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ತನಿಖೆಯಲ್ಲಿ ಕಂಪನಿ ಹಾಗೂ ಅದರ ಮುಖ್ಯ ಪ್ರವರ್ತಕ ಎಸ್. ವಸುದೇವನ್ ಗೃಹ ಖರೀದಿದಾರರಿಗೆ 927.22 ಕೋಟಿ ರೂ. ಮೌಲ್ಯದಷ್ಟು ವಂಚನೆ ಮಾಡಿರುವುದು ಬಹಿರಂಗವಾಗಿದೆ. ವಂಚನೆಯ ಮೊತ್ತವನ್ನು ವಿವಿಧ ಕಂಪನಿಗಳು ಮತ್ತು ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದರ ಜತೆಗೆ ನಿರ್ಮಾಣ ಯೋಜನೆಗಳ ಬದಲಿಗೆ ಇತರ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ಇಡಿ ತಿಳಿಸಿದೆ.