ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ; ನಕಲಿ ಲೋಕಾಯುಕ್ತ ಡಿವೈಎಸ್ಪಿ ಬಂಧನ
ಮುರುಗಪ್ಪ ಕುಂಬಾರ ಅವರು ಈ ಹಿಂದೆ 17 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲೂ ಕಾನ್‌ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸಿದ್ದ.
ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಹಣದ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಜೈಸಿಂಗ್‌ಪುರದಲ್ಲಿ ಆರೋಪಿಯನ್ನು ಐಜೂರು ಠಾಣೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಮುರುಗಪ್ಪ ನಿಂಗಪ್ಪ ಕುಂಬಾರ ಬಂಧಿತ ಆರೋಪಿ. ಆತ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಆರೋಪಿಯು ಇತ್ತೀಚೆಗೆ ಮಾಗಡಿ ಸಿಡಿಪಿಒ ಸುರೇಂದ್ರ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಮಂಜುನಾಥ್ ಅವರಿಗೆ ಕರೆ ಮಾಡಿ, “ನಾನು ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ ಮಾತನಾಡುತ್ತಿದ್ದೇನೆ” ಎಂದು ಹೇಳಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ. ಅಧಿಕಾರಿಗಳು ಅನುಮಾನಗೊಂಡು ರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಲೋಕಾಯುಕ್ತ ಕಾನ್‌ಸ್ಟೆಬಲ್ ದಾಖಲೆ ಪತ್ತೆ
ಮುರುಗಪ್ಪ ಕುಂಬಾರ ಅವರು ಈ ಹಿಂದೆ 17 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲೂ ಕಾನ್‌ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸಿದ್ದ. ಆರೋಪಿಗಳಿಗೆ ವಾರೆಂಟ್ ನೀಡುವಾಗ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಸೇವೆಯಿಂದ ವಜಾಗೊಂಡಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಸೇವೆಯಿಂದ ವಜಾಗೊಂಡ ನಂತರ ಲೋಕಾಯುಕ್ತ ಅಧಿಕಾರಿಗಳ ಹೆಸರು ಹಾಗೂ ವಿವರಗಳನ್ನು ಪಡೆದು, ಅವರ ಹೆಸರಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡಿ ಹಣದ ಬೇಡಿಕೆ ಇಡುವ ಕೆಲಸ ಆರಂಭಿಸಿದ್ದ. ಟ್ರೂ ಕಾಲರ್‌ನಲ್ಲಿ ಹೆಸರನ್ನು “ಲೋಕಾಯುಕ್ತ ಅಧಿಕಾರಿʼʼ ಎಂದು ಉಲ್ಲೇಖಿಸಲಾಗಿತ್ತು.
56ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿ
ಬಂಧಿತನ ಮೇಲೆ ವಿವಿಧೆಡೆ 56 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆರೋಪಿಯಿಂದ ಮೂರು ಮೊಬೈಲ್, ಒಂಬತ್ತು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ 56ಕ್ಕೂ ಹೆಚ್ಚು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಯಾರೆಲ್ಲಾ ಈತನ ಸಂಪರ್ಕದಲ್ಲಿದ್ದರು ಎಂಬುದು ತಿಳಿಯಲಿದೆ.