ಸಿಸಿ, ಒಸಿ ಇಲ್ಲದ 4.30 ಲಕ್ಷಕ್ಕೂ ಹೆಚ್ಚಿನ ಮನೆಯ ಮಾಲೀಕರ ಬದುಕು ಕತ್ತಲಲ್ಲಿ..!
ರಾಜ್ಯದಲ್ಲಿ ಸಿಸಿ, ಒಸಿ ಇಲ್ಲದ ಕಟ್ಟಡಗಳಿಗೆ ಮೂಲ ಸೌಕರ್ಯ ಒದಗಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇದೇ 8ರಂದು ಸಭೆ ನಡೆಯಲಿದ್ದು, ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಪ್ರಾತಿನಿಧಿಕ ಚಿತ್ರ
ಸ್ವಾಧೀನಾನುಭವ ಪತ್ರ (CC) ಮತ್ತು ಕಟ್ಟಡ ಪ್ರಾರಂಭಿಕ ಪ್ರಮಾಣಪತ್ರ (OC) ಇಲ್ಲದೆ 1,200 ಚದರ ಅಡಿ ಮತ್ತು ಅದಕ್ಕಿಂತ ಮೇಲ್ಪಟ್ಟು ನಿರ್ಮಿಸಿರುವ 4.30 ಲಕ್ಷಕ್ಕೂ ಹೆಚ್ಚಿನ ಮನೆ ಮಾಲೀಕರು ವಿದ್ಯುತ್ ಸೌಲಭ್ಯ ಸಿಗದೆ ಕತ್ತಲಲ್ಲೇ ಬದುಕು ಸವೆಸುವ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ, ನೀರಿನ ಸೌಲಭ್ಯವೂ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ತಲೆದೋರಿದೆ. ಈ ನಡುವೆ, ಸರ್ಕಾರವು ಕಾನೂನು ಕಟ್ಟಳೆ ಮೀರದೆ ಸಿಸಿ, ಒಸಿ ಇಲ್ಲದ ಮನೆಗಳಿಗೆ ಯಾವ ರೀತಿಯಲ್ಲಿ ಮೂಲಸೌಲಭ್ಯ ಕಲ್ಪಿಸಬೇಕೆಂಬ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಸರ್ಕಾರದ ಮುಂದಿನ ನಡೆಯ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಧಿಕಾರಿಗಳ ಜೊತೆ ಗ್ರೇಟರ್ ಬೆಂಗಳೂರು ಹಾಗೂ ರಾಜ್ಯದ ಜಿಲ್ಲೆಗಳಲ್ಲಿ ಸಿಸಿ ಮತ್ತು ಒಸಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಉಂಟಾಗಿರುವ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು. ಇದೇ 8ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಸಿಸಿ, ಒಸಿ ಇಲ್ಲದೆ ಮನೆ ನಿರ್ಮಿಸಿರುವವರಿಗೆ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರಕ್ಕೆ ತಲೆನೋವಾಗಿದೆ.
ರಾಜ್ಯದಲ್ಲಿ 1,200 ಚದರ ಅಡಿ ಮತ್ತು ಅದಕ್ಕಿಂತ ಮೇಲ್ಪಟ್ಟು, ಸಿಸಿ-ಒಸಿ ಇಲ್ಲದೆ ನಿರ್ಮಿಸಿರುವ 4.30 ಲಕ್ಷಕ್ಕೂ ಹೆಚ್ಚು ಕಟ್ಟಡಗಳನ್ನು ಒಡೆಯುವುದು ಸರಿಯಲ್ಲ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ. ಹೀಗಾಗಿ, ಒಂದು ಬಾರಿ ಸಿಸಿ, ಒಸಿ ಇಲ್ಲದ ಕಟ್ಟಡಗಳಿಗೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶ ಹೊಂದಿದೆ. ಆದರೆ, ಸುಪ್ರೀಂಕೋರ್ಟ್‌ನ ಆದೇಶವು ಸರ್ಕಾರದ ಕೈಕಟ್ಟಿ ಹಾಕಿದೆ. ಈ ಹಿನ್ನೆಲೆಯಲ್ಲಿ, ಕಾನೂನಿನ ವ್ಯಾಪ್ತಿಯಲ್ಲಿಯೇ ಒಂದು ಬಾರಿಗೆ ಅವಕಾಶ ಕಲ್ಪಿಸಲು ಸಾಧ್ಯವೇ ಎಂಬುದರ ಕುರಿತು ಗಂಭೀರ ಚರ್ಚೆ ನಡೆಸುತ್ತಿದೆ. ಸುಪ್ರೀಂಕೋರ್ಟ್ ಆದೇಶ ಇರುವ ಕಾರಣ, ಕಾನೂನು ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲು ಕಾನೂನು ತಜ್ಞರ ಸಲಹೆ ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳ ಅಭಿಪ್ರಾಯವನ್ನು ಕ್ರೋಢೀಕರಿಸಲಾಗುತ್ತಿದೆ.
ಕತ್ತಲಲ್ಲೇ ಲಕ್ಷಾಂತರ ಜನರ ಬದುಕು!
ವಿದ್ಯುತ್ ಸರಬರಾಜು ಕಂಪನಿಗಳು ಕಟ್ಟಡ ಮುಕ್ತಾಯ ಪ್ರಮಾಣಪತ್ರ (CC) ಮತ್ತು ವಾಸಯೋಗ್ಯ ಪ್ರಮಾಣಪತ್ರ (OC) ಹಾಜರುಪಡಿಸಿದ ನಂತರವೇ ಆ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡುತ್ತವೆ. ಆದರೆ, 'ಬಿ' ಖಾತಾ ಹಾಗೂ ಗ್ರಾಮಠಾಣಾ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಒಸಿ, ಸಿಸಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಲ್ಲಿ ಮನೆ ಕಟ್ಟಿಕೊಂಡಿರುವ ಹೊಸ ಗ್ರಾಹಕರಿಗೆ ಇದೀಗ ವಿದ್ಯುತ್ ಸಂಪರ್ಕ ಪಡೆಯುವುದು ಕಷ್ಟವಾಗಿದೆ. ವಿದ್ಯುತ್ ಸಂಪರ್ಕ ಕೋರಿ ರಾಜ್ಯದಲ್ಲಿ 14.40 ಲಕ್ಷ ಹೊಸ ಅರ್ಜಿಗಳು ಬಂದಿವೆ. ಈ ಪೈಕಿ 10.06 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ. 2,90,137 ಅರ್ಜಿಗಳು ಬಾಕಿ ಉಳಿದುಕೊಂಡಿದ್ದರೆ, 1,44,097 ತಿರಸ್ಕೃತಗೊಂಡಿವೆ. ಒಟ್ಟು 4,34,234 ಗ್ರಾಹಕರು ವಿದ್ಯುತ್ ಸಂಪರ್ಕಕ್ಕಾಗಿ ಕಾದು ಕುಳಿತಿದ್ದಾರೆ. ಸುಪ್ರೀಂಕೋರ್ಟ್ ಆದೇಶದಿಂದಾಗಿ ವಿದ್ಯುತ್ ಸಂಪರ್ಕ ಸಿಗದೆ ಪರಿತಪಿಸುವಂತಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಹೆಚ್ಚಾಗಿದೆ. ನಗರದಲ್ಲಿ ಶೇ. 70ರಷ್ಟು ಕಟ್ಟಡ ನಿರ್ಮಾಣ ಅಕ್ರಮವಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಮಹಡಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ರಾಜ್ಯ ಮಾತ್ರವಲ್ಲದೆ, ದೇಶದಲ್ಲಿಯೂ ಈ ಸಮಸ್ಯೆ ಇದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ. "ನಕ್ಷೆ ಮಂಜೂರಾತಿ ಪ್ರಕಾರ ಕಟ್ಟಡ ನಿರ್ಮಿಸಿ, ವಾಸ ಯೋಗ್ಯ ಪ್ರಮಾಣ ಪತ್ರ ಪಡೆಯಬೇಕು. ಒಸಿ ಇಲ್ಲದ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕ ನೀಡಬಾರದು" ಎಂದು ಸೂಚನೆ ನೀಡಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು 'ದಿ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
ನ್ಯಾಯಾಲಯವು ಪ್ರಕರಣದಲ್ಲಿ ಆದೇಶ ನೀಡಿದೆ
ಉತ್ತರ ಪ್ರದೇಶದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್ 2024ರ ಡಿಸೆಂಬರ್‌ನಲ್ಲಿ "ಒಸಿ, ಸಿಸಿ ಇಲ್ಲದೆ ಮೂಲಸೌಕರ್ಯ ಕಲ್ಪಿಸಬಾರದು" ಎಂದು ಹೇಳಿದೆ. ರಾಜೇಂದ್ರಕುಮಾರ್ ಬರ್ಜಾತ್ಯ ಮತ್ತಿತರರು ವರ್ಸಸ್ ಉತ್ತರ ಪ್ರದೇಶ ಆವಾಸ್ ಏವಂ ವಿಕಾಸ್ ಪರಿಷತ್ ನಡುವಿನ ಪ್ರಕರಣದಲ್ಲಿ, ಅಕ್ರಮ ಕಟ್ಟಡ ಸಮಸ್ಯೆಯ ಕುರಿತು ಸುದೀರ್ಘವಾಗಿ ಚರ್ಚಿಸಿರುವ ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ವಿಭಾಗೀಯ ಪೀಠ, ವ್ಯಾಪಕ ಪರಿಣಾಮಗಳುಳ್ಳ ಈ ಆದೇಶವನ್ನು ನೀಡಿದೆ. "ನಕ್ಷೆ ಉಲ್ಲಂಘನೆ ಮಾಡಿ ಉಡಾಫೆಯಿಂದ ಕಟ್ಟಡಗಳನ್ನು ನಿರ್ಮಿಸುವಂತಹ ಪ್ರವೃತ್ತಿಗೆ ಉತ್ತೇಜನ ನೀಡಬಾರದು. ಪ್ರತಿಯೊಬ್ಬರೂ ನೀತಿ-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ, ಅಂತಹ ಸಂಗತಿಗಳನ್ನು ನ್ಯಾಯಾಲಯಗಳ ಗಮನಕ್ಕೆ ತರಬೇಕು. ಅಂತಹ ಪ್ರಕರಣಗಳಲ್ಲಿ ಕಠಿಣ ಕೈಗಳಿಂದ ದಂಡಿಸಬೇಕು, ಕರುಣೆ ತೋರಬಾರದು" ಎಂದು ನ್ಯಾಯಾಲಯ ಹೇಳಿದೆ.
12 ಮಾರ್ಗಸೂಚಿಗಳನ್ನು ಪ್ರಕಟಿಸಿದ ನ್ಯಾಯಾಲಯ
ಅನಧಿಕೃತ ಕಟ್ಟಡಗಳ ಸಮಸ್ಯೆ ನಿವಾರಿಸಲು 12 ಅಂಶಗಳ ಮಾರ್ಗಸೂಚಿಯನ್ನು ಪ್ರಕಟಿಸಿ, ಅವುಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಕಟ್ಟಾಜ್ಞೆ ವಿಧಿಸಿದೆ. ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ತೀರ್ಪಿನ ಪ್ರತಿಯನ್ನು ಹೈಕೋರ್ಟ್ ರಿಜಿಸ್ಟ್ರಾರ್‌ಗಳಿಗೆ ಕಳುಹಿಸುವಂತೆ ಸೂಚನೆ ನೀಡಿರುವ ನ್ಯಾಯಾಲಯ, ಹೈಕೋರ್ಟ್‌ಗಳು ಇನ್ನು ಮುಂದೆ ಅನಧಿಕೃತ ಕಟ್ಟಡ, ಕಟ್ಟಡ ನಕ್ಷೆ ಅನುಮೋದನೆ ಉಲ್ಲಂಘನೆ ಮತ್ತಿತರ ವ್ಯಾಜ್ಯಗಳ ಸಂದರ್ಭದಲ್ಲಿ ಈ ತೀರ್ಪನ್ನು ಉಲ್ಲೇಖಿಸಬೇಕು ಎಂದು ನಿರ್ದೇಶಿಸಿದೆ.[6]
ನ್ಯಾಯಾಲಯ ಸೂಚಿಸಿರುವ ಮಾರ್ಗಸೂಚಿಗಳು ಇಂತಿವೆ
1. ಕಟ್ಟಡಗಳ ನಕ್ಷೆ ಅನುಮೋದನೆಗೂ ಮುನ್ನ, ಬಿಲ್ಡರ್/ಮಾಲೀಕರ ಕಡೆಯಿಂದ ಸಂಬಂಧಿಸಿದ ಪ್ರಾಧಿಕಾರದಿಂದ ಪೂರ್ಣಗೊಂಡ ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರಗಳನ್ನು ಪಡೆದ ನಂತರವೇ ಅದರ ಮಾಲೀಕರಿಗೆ/ಫಲಾನುಭವಿಗಳಿಗೆ ಹಸ್ತಾಂತರ ಮಾಡುತ್ತೇನೆಂದು ಮುಚ್ಚಳಿಕೆ ಬರೆಯಿಸಿಕೊಳ್ಳಬೇಕು.
2. ಬಿಲ್ಡರ್, ಡೆವಲಪರ್, ಮಾಲೀಕರು ಅನುಮೋದಿತ ನಕ್ಷೆಯನ್ನು ಕಟ್ಟಡದ ಮುಂದೆ ಪ್ರದರ್ಶಿಸಬೇಕು.
3. ಸಂಬಂಧಿಸಿದ ಅಧಿಕಾರಿಗಳು ನಿಯಮಿತವಾಗಿ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ, ನಿಯಮ ಪಾಲನೆಯಾಗುತ್ತಿದೆಯೇ ಅಥವಾ ಉಲ್ಲಂಘನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಉಲ್ಲಂಘನೆ ಕಂಡುಬಂದರೆ, ಅದನ್ನು ಸರಿಪಡಿಸುವವರೆಗೆ ಸಿಸಿ, ಒಸಿ ನೀಡಬಾರದು.
4. ಸಿಸಿ, ಒಸಿ ಸಲ್ಲಿಸಿದ ನಂತರವಷ್ಟೇ ವಿದ್ಯುತ್, ನೀರು ಮತ್ತು ಒಳಚರಂಡಿ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು.
5. ಕಂಪ್ಲೀಷನ್ ಸರ್ಟಿಫಿಕೇಟ್ ನೀಡಿದ ನಂತರವೂ ನಕ್ಷೆಯನ್ನು ಉಲ್ಲಂಘಿಸಿ ನಿರ್ಮಿಸಿರುವುದು ಕಂಡುಬಂದರೆ, ಯಾವ ಅಧಿಕಾರಿ ಸಿಸಿ ನೀಡಿರುತ್ತಾರೋ ಅಂತಹವರ ವಿರುದ್ಧ ಕ್ರಮ ಜರುಗಿಸುವುದು.
6. ಯಾವುದೇ ಅಕ್ರಮ ಕಟ್ಟಡದಲ್ಲಿ ವ್ಯಾಪಾರ, ವಾಣಿಜ್ಯ ವಹಿವಾಟು ನಡೆಸಲು ಯಾವುದೇ ಅನುಮತಿ, ಲೈಸೆನ್ಸ್ ನೀಡಬಾರದು.
7. ಕಟ್ಟಡ ನಿರ್ಮಾಣ ವಲಯ ಯೋಜನೆಗೆ ಅನುಗುಣವಾಗಿರಬೇಕು. ಒಂದು ವೇಳೆ ಯೋಜನೆಯನ್ನು ಬದಲಾವಣೆ ಮಾಡಬೇಕಾದರೆ, ಅದೂ ನಿಯಮಬದ್ಧವಾಗಿಯೇ ಇರಬೇಕು.
8. ಅನಧಿಕೃತ ಕಟ್ಟಡಗಳ ನಿರ್ಮಾಣ ತಿಳಿದಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕು.
9. ಬಿಲ್ಡರ್/ಮಾಲೀಕರು ಸಿಸಿ, ಒಸಿ ನೀಡಲಿಲ್ಲವೆಂದು ಮೇಲ್ಮನವಿ ಸಲ್ಲಿಸಿದರೆ, 90 ದಿನದಲ್ಲಿ ನಿಯಮಾನುಸಾರ ವಿಲೇವಾರಿ ಮಾಡಬೇಕು.
10. ಅನಧಿಕೃತ ಕಟ್ಟಡಗಳ ಸಂಬಂಧ ನ್ಯಾಯಾಲಯಗಳ ಎಲ್ಲಾ ಆದೇಶ, ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರ್ಕಾರಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು.
11. ಬ್ಯಾಂಕ್‌ಗಳು ಇಂತಹ ಅಕ್ರಮ ಕಟ್ಟಡಗಳಿಗೆ ಸಾಲ ನೀಡುವ ಮುನ್ನ ಅದರ ಸಿಸಿ, ಒಸಿ ಪ್ರಮಾಣಪತ್ರಗಳನ್ನು ಪರಿಶೀಲಿಸಬೇಕು.
12. ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ನಿಯಮದಂತೆ ನ್ಯಾಯಾಂಗ ನಿಂದನೆ ಕ್ರಮಗಳನ್ನು ಜರುಗಿಸಬೇಕು.
ಸಚಿವ ಸಂಪುಟ ಒಪ್ಪಿಗೆ ನೀಡಿದರೂ ಅತಂತ್ರ!
ಬೆಂಗಳೂರು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಕಾರಣದಿಂದಾಗಿ, ಸಿಸಿ ಮತ್ತು ಒಸಿ ಇಲ್ಲದೆ ಇರುವ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಸಿಗುತ್ತಿಲ್ಲ. ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮನೆಗಳು ಹೊಸದಾಗಿ ನಿರ್ಮಾಣವಾಗಿದ್ದು, ಇವುಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಲು ಸುಪ್ರೀಂಕೋರ್ಟ್ ತೀರ್ಪು ಅಡ್ಡಿಯಾಗಿದೆ. ಆದರೆ, 1,200 ಚದರ ಅಡಿಯವರೆಗಿನ ಹೊಸ ಮನೆಗಳಿಗೆ ಸಿಸಿ ಮತ್ತು ಒಸಿ ಅಗತ್ಯವಿಲ್ಲ ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿನಾಯಿತಿ ನೀಡಿ ನಿರ್ಣಯ ಕೈಗೊಂಡಿದೆ. ಆದರೂ, ವಿದ್ಯುತ್ ಇಲಾಖೆಯ ವಿವಿಧ ವಿದ್ಯುತ್ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ 1,200 ಚದರ ಅಡಿಯವರೆಗಿನ ಮನೆಗಳಿಗೂ ವಿದ್ಯುತ್ ಸಂಪರ್ಕವನ್ನೇ ನೀಡುತ್ತಿಲ್ಲ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದ್ದರೂ, ಈ ಬಗ್ಗೆ ಮಂಡಳಿಯಲ್ಲಿ ತೀರ್ಮಾನವಾಗಿಲ್ಲ. "ಮಂಡಳಿಯಲ್ಲಿ ತೀರ್ಮಾನವಾಗಿ ಆದೇಶ ನೀಡಬೇಕು," ಎಂದು ಇಂಜಿನಿಯರ್‌ಗಳು ಹೇಳುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಮುಳುಗುವಂತಾಗಿದೆ.
ಬೆಸ್ಕಾಂ ಮೂಲಗಳ ಪ್ರಕಾರ, 1200 ಚದರಡಿವರೆಗಿನ ಕಟ್ಟಡಗಳಿಗೆ ಒಸಿ ಪಡೆಯುವುದು ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಇತ್ತೀಚೆಗಷ್ಟೇ ಒಸಿಯಿಂದ ವಿನಾಯಿತಿ ನೀಡಿ ಸರ್ಕಾರ ಆದೇಶಿಸಿದೆ. ಆದರೆ, ಸಂಪರ್ಕ ನೀಡಲು ಸರ್ಕಾರದಿಂದ ಸೂಕ್ತ ಮಾರ್ಗದರ್ಶನ ಬಂದಿಲ್ಲ. ಹೀಗಿರುವಾಗ, ಬೆಸ್ಕಾಂ ವ್ಯಾಪ್ತಿಯೊಂದರಲ್ಲೇ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗಬೇಕಿದೆ. ರಾಜ್ಯಾದ್ಯಂತ 10 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಬೆಸ್ಕಾಂ ವ್ಯಾಪ್ತಿಯೊಂದರಲ್ಲೇ 4 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗಬೇಕಿದೆ ಎಂದು ಹೇಳಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಶುಭಸುದ್ದಿ
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 1200 ಚ.ಅ. ನಿವೇಶನಗಳಲ್ಲಿ ನಿರ್ಮಾಣಗೊಂಡಿರುವ ಮಹಡಿಗಳು ಮತ್ತು ಹೊಸದಾಗಿ ನಿರ್ಮಿಸುವ ವಾಸದ ಕಟ್ಟಡಗಳಿಗೆ ಯಾವುದೇ ಸ್ವಾಧೀನಾನುಭವ ಪ್ರಮಾಣಪತ್ರ ಬೇಡ ಎಂಬುದಾಗಿ ಸರ್ಕಾರ ಆದೇಶ ಹೊರಡಿಸಿದೆ. ನಕ್ಷೆ ಮಂಜೂರಾತಿ ಬಳಿಕ ಅನುಮತಿ ನೀಡುತ್ತಿರುವುದರಿಂದ, ಬೆಂಗಳೂರಿಗೆ ಇಂತಹದ್ದೊಂದು ಆದೇಶ ಮಾಡಲಾಗಿದೆ ಎಂದು ಹೇಳಲಾಗಿದೆ.
30x40 ನಿವೇಶನದಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಿರುವ ಮತ್ತು ನಿರ್ಮಿಸುವ, ನೆಲಮಹಡಿ ಸಹಿತ ಎರಡು ಅಂತಸ್ತು ಅಥವಾ ಬೇಸ್‌ಮೆಂಟ್ ಸಹಿತ ಮೂರು ಮಹಡಿ ಕಟ್ಟಡಕ್ಕೆ ಒಸಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಇದು ಸಹಕಾರಿಯಾಗಲಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಸೆಕ್ಷನ್ ಪ್ರಕಾರ, ಸ್ವಾಧೀನಾನುಭವ ಪ್ರಮಾಣಪತ್ರದಿಂದ ವಿನಾಯಿತಿ ನೀಡುವ ಅಧಿಕಾರ ಸರ್ಕಾರಕ್ಕಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.