ಬಾಳೆಹೊನ್ನೂರಿನಲ್ಲಿ 580 ಎಕರೆ ಅರಣ್ಯ ಜಾಗ ಒತ್ತುವರಿ ಪತ್ತೆ; 9 ಮಂದಿ ವಿರುದ್ಧ ಪ್ರಕರಣ ದಾಖಲು

ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಶೀಘ್ರವೇ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Update: 2025-10-26 07:14 GMT
ಬಾಳೆಹೊನ್ನೂರು ಅರಣ್ಯ ವಲಯ ಪ್ರಾತಿನಿಧಿಕ ಚಿತ್ರ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವಲಯದಲ್ಲಿ ವಿವಿಧೆಡೆ ಒಟ್ಟು 580 ಎಕರೆ ಅರಣ್ಯ ಜಾಗ ಒತ್ತುವರಿ ಆಗಿರುವುದನ್ನು ಇಲಾಖೆ ಪತ್ತೆಹಚ್ಚಿದೆ. ಇದಕ್ಕೆ ಕಾರಣರಾದ 9 ಮಂದಿ ವಿರುದ್ಧ ಪ್ರಕರಣವನ್ನೂ ದಾಖಲಿಸಿದೆ.

ಕಳಸ ತಾಲ್ಲೂಕಿನ ತನೂಡಿ ಗ್ರಾಮದ ಹಲಸೂರು ಮೀಸಲು ಅರಣ್ಯ ವ್ಯಾಪ್ತಿಗೆ ಸೇರಿದ ಸರ್ವೆ ಸಂಖ್ಯೆ 122 ರಲ್ಲಿ ಒಟ್ಟು 450 ಎಕರೆ ಭೂಮಿಯನ್ನು ತನೂಡಿ ಎಸ್ಟೇಟ್ ಮಾಲೀಕರಾದ ಎಸ್.ಬಿ.ಶಂಕರ್, ಎಸ್.ಬಿ.ಪ್ರಭಾಕರ್ ಮತ್ತು ಸುನೀತಾ ಎಂಬುವರು ಒತ್ತುವರಿ ಮಾಡಿಕೊಂಡಿದ್ದು, ಇವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.

ಮತ್ತೊಂದು ಪ್ರಕರಣದಲ್ಲಿ ಬಾಳೆಹೊನ್ನೂರು ಹೋಬಳಿ ಬಿ.ಕಣಬೂರು ಗ್ರಾಮದ ಸರ್ವೆ ನಂ. 9 ಮತ್ತು ಬನ್ನೂರು ಗ್ರಾಮದ ಸರ್ವೆ ನಂ. 95, 96, 97ರಲ್ಲಿ ಒಟ್ಟು 130 ಎಕರೆ ಬನ್ನೂರು ಕಿರು ಅರಣ್ಯ ಪ್ರದೇಶಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಬೈರೇಗುಡ್ಡ ಎಸ್ಟೇಟ್ ನ ಮಹಮ್ಮದ್ ಇಫಿಖಾರ್ ಅದಿಲ್, ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ಇಲಿಯಾಸ್, ಅಬ್ದುಲ್ ವಹೀದ್, ಅಬ್ದುಲ್ ಮುನಾಫ್ ಮತ್ತು ಅಬ್ದುಲ್ ಗಫಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಎರಡೂ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ 1980ರ ವಿವಿಧ ಕಲಂಗಳಡಿ ಪ್ರಕರಣ ದಾಖಲು ಮಾಡಲಾಗಿದೆ. ಎಸಿಎಫ್ ಮೋಹನಕುಮಾರ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಮಂಜುನಾಥ್ ಅವರು ಒತ್ತುವರಿ ಪತ್ತೆ ಮಾಡಿದ್ದಾರೆ.

ಅತಿ ದೊಡ್ಡ ಒತ್ತುವರಿ ಪ್ರಕರಣ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪತ್ತೆಯಾದ ಅತಿದೊಡ್ಡ ಅರಣ್ಯ ಒತ್ತುವರಿ ಇದಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಶೀಘ್ರವೇ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಇದೇ ರೀತಿಯ ಇತರೆ ಕಡೆಗಳಲ್ಲಿ ಅರಣ್ಯ ಒತ್ತುವರಿ ಗುರುತಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Similar News