ಬೆಂಗಳೂರು ಅಭಿವೃದ್ಧಿ; ಕಿರಣ್​ ಮಜುಮ್ದಾರ್​​ ನಿವಾಸದಲ್ಲಿ ಡಿಕೆಶಿಯೊಂದಿಗೆ ಉದ್ಯಮಿಗಳ ಸಭೆ

ವಿವಾದಗಳ ನಂತರ, ಇದೀಗ ಉದ್ಯಮಿಗಳು ಮತ್ತು ಸರ್ಕಾರ ಒಟ್ಟಾಗಿ ಕುಳಿತು ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿರುವುದು ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿಸಿದೆ.

Update: 2025-10-26 06:51 GMT
Click the Play button to listen to article

ಕೆಲವು ದಿನಗಳ ಹಿಂದೆ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಕುರಿತು ಟ್ವಿಟರ್‌ನಲ್ಲಿ (ಈಗ ಎಕ್ಸ್) ತೀವ್ರ ವಾಗ್ದಾಳಿ ನಡೆಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಮ್ದಾರ್​ -ಶಾ ಅವರು ಇದೀಗ ಭಿನ್ನಾಭಿಪ್ರಾಯ ಮರೆತು ನಗರದ ಅಭಿವೃದ್ಧಿಗೆ ಒಂದಾಗಿದ್ದಾರೆ. ಭಾನುವಾರ ಕಿರಣ್ ಮಜುಮ್ದಾರ್​​-ಶಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಇಬ್ಬರೂ ನಾಯಕರು ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಿಯಾ ಯೋಜನೆ ರೂಪಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.

ಕಿರಣ್ ಮಜುಮ್ದಾರ್ ಶಾ ಅವರ ನಿವಾಸದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಟಿ.ವಿ. ಮೋಹನ್‌ದಾಸ್ ಪೈ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ ರಾವ್ ಕೂಡ ಭಾಗವಹಿಸಿದ್ದರು. ಈ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ಸಮಸ್ಯೆಗಳಾದ ರಸ್ತೆ ಗುಂಡಿಗಳು, ಹೊರ ವರ್ತುಲ ರಸ್ತೆ (ORR) ಮತ್ತು ಪೆರಿಫೆರಲ್ ರಿಂಗ್ ರಸ್ತೆ (PRR) ಸಂಚಾರ ದಟ್ಟಣೆ, ಒಳಚರಂಡಿ ವ್ಯವಸ್ಥೆ ಹಾಗೂ ಕಸ ನಿರ್ವಹಣೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ ಎಂದು ಶಾ ಅವರು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರನ್ನು ಮತ್ತೆ ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ರೂಪಿಸುವ ಗುರಿಯೊಂದಿಗೆ ಈ ಕ್ರಿಯಾ ಯೋಜನೆಯನ್ನು ಜಾರಿಗೆ ತರಲು ಉದ್ಯಮಿಗಳು ಮತ್ತು ಸರ್ಕಾರ ಸಹಭಾಗಿತ್ವದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಟ್ವೀಟ್​ನಲ್ಲಿದೆ.

ಟ್ವೀಟ್ ಸಮರದ ಹಿನ್ನೆಲೆ

ಕೆಲವು ದಿನಗಳ ಹಿಂದೆ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಕಿರಣ್ ಮಜುಮ್ದಾರ್​​-ಶಾ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, "ಕಾರ್ಪೊರೇಟ್ ಕಂಪನಿಗಳ ಬ್ಲ್ಯಾಕ್‌ಮೇಲ್‌ಗೆ ಬಗ್ಗುವುದಿಲ್ಲ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಬೆಂಗಳೂರಿನ ರಸ್ತೆಗಳನ್ನು ದುರಸ್ತಿ ಮಾಡಲು ಕಿರಣ್ ಮಜುಮ್ದಾರ್​​-ಶಾ ಅವರು ಹಣಕಾಸಿನ ನೆರವು ನೀಡಲು ಮುಂದೆ ಬಂದಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಈ ಬಗ್ಗೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಕೂಡ ಟ್ವೀಟ್ ಮಾಡಿ, "ಸಮಸ್ಯೆ ಇರುವುದು ಹಣದಲ್ಲಿ ಅಲ್ಲ, ಕಾರ್ಯಗತಗೊಳಿಸುವುದರಲ್ಲಿ" ಎಂದು ಅಭಿಪ್ರಾಯಪಟ್ಟಿದ್ದರು. ಆದರೆ, ತಾನು ಅಂತಹ ಯಾವುದೇ ಪ್ರಸ್ತಾಪ ನೀಡಿಲ್ಲ ಎಂದು ಕಿರಣ್ ಮಜುಮ್ದಾರ್​​-ಶಾ ಸ್ಪಷ್ಟಪಡಿಸಿದ್ದರು. "ಮಾಧ್ಯಮಗಳು ಈ ಸುದ್ದಿಯನ್ನು ಸೃಷ್ಟಿಸಿವೆ. ಒಬ್ಬ ಪತ್ರಕರ್ತ ಕೇಳಿದ ಪ್ರಶ್ನೆಯನ್ನು ನನ್ನ ಪ್ರಸ್ತಾಪವೆಂದು ಬಿಂಬಿಸಲಾಗಿದೆ" ಎಂದು ಅವರು ಸ್ಪಷ್ಟನೆ ನೀಡಿದ್ದರು.

ಸಹಭಾಗಿತ್ವದತ್ತ ಹೊಸ ಹೆಜ್ಜೆ

ಈ ಎಲ್ಲಾ ವಿವಾದಗಳ ನಂತರ, ಇದೀಗ ಉದ್ಯಮಿಗಳು ಮತ್ತು ಸರ್ಕಾರ ಒಟ್ಟಾಗಿ ಕುಳಿತು ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿರುವುದು ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿಸಿದೆ. ಸರ್ಕಾರದೊಂದಿಗೆ ಕೈಜೋಡಿಸಿ, ಬೆಂಗಳೂರಿನ ಅಭಿವೃದ್ಧಿಗೆ ಸಹಕರಿಸುವುದಾಗಿ ಉದ್ಯಮಿಗಳು ಭರವಸೆ ನೀಡಿದ್ದಾರೆ. ನಗರದ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಸಾರ್ವಜನಿಕರಿಗೆ ತಿಳಿಸಲು ಒಂದು 'ಡ್ಯಾಶ್‌ಬೋರ್ಡ್' ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಒಪ್ಪಿಕೊಂಡಿದೆ ಎಂದು ಕಿರಣ್ ಮಜುಮ್ದಾರ್​​-ಶಾ ತಿಳಿಸಿದ್ದಾರೆ.

Tags:    

Similar News