ಹಿರಿಯ ಕಥೆಗಾರ, ಸಾಹಿತಿ ಪ್ರೊ.ಮೊಗಳ್ಳಿ ಗಣೇಶ್‌ ಇನ್ನಿಲ್ಲ

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸುಮಾರು 28 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು, ಹಲವು ಕತೆಗಳು, 10 ಕ್ಕೂ ಹೆಚ್ಚು ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.

Update: 2025-10-05 06:31 GMT

ಹಿರಿಯ ಕಥೆಗಾರ ಪ್ರೊ.ಮೊಗಳ್ಳಿ ಗಣೇಶ್ (64) ಭಾನುವಾರ ಬೆಳಿಗ್ಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸದಲ್ಲಿ ಕೊನೆಯುಸಿರೆಳೆದರು.  ಕೆಲ ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸುಮಾರು 28 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು, ಹಲವು ಕತೆಗಳು, 10 ಕ್ಕೂ ಹೆಚ್ಚು ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.

ಹಂಪಿ ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ಸದ್ಯ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು.  'ಬುಗುರಿ', 'ಮಣ್ಣು', 'ಅತ್ತೆ', 'ದೇವರ ದಾರಿ' ಅವರ ಪ್ರಮುಖ ಕಥಾಸಂಕಲನಗಳು. 'ಸೂರ್ಯನನ್ನು ಬಚ್ಚಿಡಬಹುದೇ' ಎಂಬುದು ಅವರ ಅತ್ಯುತ್ತಮ ಕವನ ಸಂಕಲನವಾಗಿದೆ.

ಮೊಗಳ್ಳಿ ಗಣೇಶ್ ಅವರು 1963ರ ಜುಲೈ 1ರಂದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿಯಲ್ಲಿ ಜನಿಸಿದ್ದರು. ಓದಿದ್ದು ಅರ್ಥಶಾಸ್ತ್ರ ಮತ್ತು ಜಾನಪದವಾದರೂ ಸಾಹಿತ್ಯಯತ್ತ ಹೊರಳಿದರು. 'ಬುಗುರಿ', 'ನನ್ನಜ್ಜನಿಗೊಂದಾಸೆಯಿತ್ತು', 'ಒಂದು ಹಳೆಯ ಚಡ್ಡಿ' ಇತ್ಯಾದಿ ಕಥೆಗಳು ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳಾಗಿ ಗುರುತಿಸಲ್ಪಟ್ಟಿವೆ.

'ತೊಟ್ಟಿಲು', 'ಕಿರೀಟ' ಅವರ ಕಾದಂಬರಿಗಳು. 'ಕಥನ' ಅವರ ಪ್ರಬಂಧ ಸಂಕಲನ. 'ಸೊಲ್ಲು', 'ವಿಮರ್ಶೆ', 'ಶಂಬಾ ಭಾಷಿಕ ಸಂಶೋಧನೆ', 'ತಕರಾರು' ಅವರ ವಿಮರ್ಶಾ ಕೃತಿಗಳು, 'ವಿಶ್ಲೇಷಣೆ' ಎಂಬ ಅಂಕಣ ಕೂಡಾ ಜನಪ್ರಿಯ. 'ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ' ಅವರ ಚಿಂತನ ಕೃತಿ. ಗಣೇಶ್ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಭಾಷಾಂತರಗೊಂಡಿವೆ.

ಸಚಿವ ಶಿವರಾಜ ತಂಗಡಗಿ ಸಂತಾಪ

ಕನ್ನಡದ ಖ್ಯಾತ ಕಥೆಗಾರ ,ವಿಮರ್ಶಕ ಡಾ.ಮೊಗಳ್ಳಿ ಗಣೇಶ್ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ,ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ಮೊಗಳ್ಳಿ ಗಣೇಶ ಅವರ ಕೊಡುಗೆ ಗಮನಾರ್ಹ. ತಮ್ಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ‘ಸೂರ್ಯನನ್ನು ಬಚ್ಚಿಡಬಹುದೆ?’ ಮತ್ತು ‘ಅನಾದಿ’ ಕಾವ್ಯ ಸಂಕಲನಗಳ ಮೂಲಕ ಹೆಸರು ಮಾಡಿದರು. ಮೊಗಳ್ಳಿ ಗಣೇಶ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವರನಟ ಡಾ.ರಾಜಕುಮಾರ್ ಹೆಸರಿನಲ್ಲಿರುವ ಅಧ್ಯಯನ ಪೀಠಕ್ಕೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ.ಆಗಿದ್ದ ಮೂಗಳ್ಳಿ ಗಣೇಶ್ ಅವರ ನಿಧಾನದಿಂದ ಕನ್ನಡ ಸಾಹಿತ್ಯ ಒಬ್ಬ ಅತ್ಯುತ್ತಮ ಬರಹಗಾರರನ್ನು ಕಳೆದುಕೊಂಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ

Tags:    

Similar News