ಕಾಫ್ ಸಿರಪ್ ದುರಂತ: ಎಲ್ಲಾ ಮಾದರಿಗಳ ಪರೀಕ್ಷೆಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಂಪನಿಗಳ ಕಾಫ್‌ ಸಿರಫ್‌ಗಳ ಮಾದರಿ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Update: 2025-10-06 09:18 GMT

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

Click the Play button to listen to article

ದೇಶದ ವಿವಿಧ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ (Cough Syrup) ಸೇವನೆಯಿಂದ ಮಕ್ಕಳು ಸಾವನ್ನಪ್ಪಿದ ಘಟನೆಗಳ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸೋಮವಾರ ಚನ್ನರಾಯಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬೇರೆ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕಳಪೆ ಗುಣಮಟ್ಟದ ಕಾಫ್ ಸಿರಪ್ ಕರ್ನಾಟಕದಲ್ಲಿ ಸರಬರಾಜು ಆಗಿಲ್ಲ. ಹಾಗಾಗಿ ಇಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಕಂಪನಿಗಳ ಕಾಫ್ ಸಿರಪ್‌ಗಳ ಮಾದರಿಗಳನ್ನು ಸಂಗ್ರಹಿಸಿ, ತಪಾಸಣೆಗೆ ಒಳಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ," ಎಂದು ಸ್ಪಷ್ಟಪಡಿಸಿದರು.

ಪೋಷಕರಿಗೆ ಎಚ್ಚರಿಕೆ, ಮಾರ್ಗಸೂಚಿ ಬಿಡುಗಡೆ

"ಔಷಧ ತಯಾರಿಕಾ ಘಟಕಗಳ ಬೇಜವಾಬ್ದಾರಿಯಿಂದಾಗಿ ತಮಿಳುನಾಡು, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ ಮತ್ತು ಪುದುಚೆರಿಯಲ್ಲಿ ದುರ್ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ, ರಾಜ್ಯದ ಪೋಷಕರು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಸಿರಪ್ ನೀಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಸಾಧ್ಯವಾದಷ್ಟು ಕಾಫ್ ಸಿರಪ್ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ," ಎಂದು ಸಚಿವರು ಸಲಹೆ ನೀಡಿದರು.

"ರಾಜ್ಯ ಆರೋಗ್ಯ ಇಲಾಖೆಯಿಂದ ಕಾಫ್ ಸಿರಪ್ ಬಳಕೆಯ ಬಗ್ಗೆ ಶೀಘ್ರದಲ್ಲೇ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು. ರಾಜ್ಯದಲ್ಲಿ ಮೊದಲಿನಿಂದಲೂ ಔಷಧಿ ನಿಯಂತ್ರಣ ಇಲಾಖೆಯು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಔಷಧಿಗಳನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ," ಎಂದು ಅವರು ತಿಳಿಸಿದರು.

ಕೇಂದ್ರಕ್ಕೆ ಪತ್ರ, ಕಠಿಣ ಕಾನೂನಿಗೆ ಆಗ್ರಹ

ಔಷಧಿಗಳ ಕಲಬೆರಕೆ ಮತ್ತು ನಕಲಿ ಔಷಧಿಗಳ ಹಾವಳಿಯ ಬಗ್ಗೆ ಮಾತನಾಡಿದ ಸಚಿವರು, "ಈ ಹಿಂದೆಯೇ ನಾನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಯಾವುದೇ ಔಷಧಿಯು ಕಲಬೆರಕೆ ಎಂದು ದೃಢಪಟ್ಟರೆ, ಆ ಮಾಹಿತಿಯನ್ನು ದೇಶಾದ್ಯಂತ ತ್ವರಿತವಾಗಿ ರವಾನಿಸಲು ಪ್ರತ್ಯೇಕ 'ವೆಬ್‌ಸೈಟ್' ರಚಿಸುವಂತೆ ಕೇಂದ್ರ ಆರೋಗ್ಯ ಸಚಿವರ ಗಮನ ಸೆಳೆದಿದ್ದೆ," ಎಂದರು.

"ಔಷಧಿಗಳ ಕಲಬೆರಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ಅಲ್ಲದೆ, ಒಂದು ರಾಜ್ಯದಲ್ಲಿ ಪತ್ತೆಯಾದ ಕಳಪೆ ಔಷಧದ ಮಾಹಿತಿಯು ಎಲ್ಲಾ ರಾಜ್ಯಗಳಿಗೂ ತಕ್ಷಣವೇ ಲಭ್ಯವಾಗುವಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು," ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

Tags:    

Similar News