ಹಾಸನದಲ್ಲಿ ಗಣತಿಗೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿ ದಾಳಿ; 8 ಜನರಿಗೆ ಗಾಯ
ಶಿಕ್ಷಕಿಯನ್ನು ರಕ್ಷಿಸಲು ಮುಂದಾದ ಸ್ಥಳೀಯರ ಮೇಲೂ ಬೀದಿ ನಾಯಿಗಳೇ ದಾಳಿ ಮಾಡಿವೆ. ಘಟನೆಯಲ್ಲಿ ಬೇಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಚಿಕ್ಕಮ್ಮ ಹಾಗೂ ಅವರ ಪತಿ ಶಿವಕುಮಾರ್ ಸೇರಿ 8 ಮಂದಿ ಗಾಯಗೊಂಡಿದ್ದಾರೆ.
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನೆಹರು ನಗರದಲ್ಲಿ ಭಾನುವಾರ ನಡೆದಿದೆ.
ಶಿಕ್ಷಕಿಯನ್ನು ರಕ್ಷಿಸಲು ಮುಂದಾದ ಸ್ಥಳೀಯರ ಮೇಲೂ ಬೀದಿ ನಾಯಿಗಳೇ ದಾಳಿ ಮಾಡಿವೆ. ಘಟನೆಯಲ್ಲಿ ಬೇಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಚಿಕ್ಕಮ್ಮ ಹಾಗೂ ಅವರ ಪತಿ ಶಿವಕುಮಾರ್ ಸೇರಿ 8 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಬೇಲೂರಿನಲ್ಲಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಚಿಕ್ಕಮ್ಮ ಅವರು ತಮಗೆ ವಹಿಸಿದ್ದ ಮನೆಗಳಲ್ಲಿ ಮೂರು ಮನೆಗಳಲ್ಲಿ ಗಣತಿ ಕಾರ್ಯ ಕೈಗೊಂಡಿದ್ದರು. ಶಿಕ್ಷಕಿಯು ನವೀನ್ ಎಂಬುವರ ಮನೆಯ ಸಮೀಕ್ಷೆಗೆ ತೆರಳಿದ ವೇಳೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ದಿಢೀರ್ ದಾಳಿ ನಡೆಸಿವೆ.
ಆಗ ಜೊತೆಯಲ್ಲೇ ಬಂದಿದ್ದ ಪತಿ ಶಿವಕುಮಾರ್ ತಕ್ಷಣವೇ ಪತ್ನಿಯ ರಕ್ಷಣೆಗೆ ಮುಂದಾದರು. ಆಗ ಅವರ ಮೇಲೂ ನಾಯಿಗಳು ದಾಳಿ ಮಾಡಿದವು. ನೆರವಿಗೆ ಧಾವಿಸಿದ ಸ್ಥಳೀಯರಾದ ಧರ್ಮ, ಪೃಥ್ವಿ, ಸಚಿನ್ ಸೇರಿ ಹಲವರ ಮೇಲೆ ಎರಡಗಿವೆ. ಸ್ಥಳದಲ್ಲೇ ಆಡವಾಡುತ್ತಿದ್ದ ಐದು ವರ್ಷದ ಬಾಲಕ ಕಿಶನ್ ಮೇಲೂ ನಾಯಿಗಳು ದಾಳಿ ಮಾಡಿವೆ.
ಗಾಯಾಳುಗಳನ್ನು ತಕ್ಷಣ ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಆಗ್ರಹ
ಅ.7ರೊಳಗೆ ಗಣತಿ ಮುಗಿಸಬೇಕೆಂಬ ಸರ್ಕಾರದಿಂದ ಒತ್ತಡ ಇದೆ. ಭಾನುವಾರ ರಜೆ ಇದ್ದರೂ ಸಮೀಕ್ಷೆಗೆ ಹೋಗಬೇಕಾಯಿತು. ಪ್ರತಿ ಮನೆಯಲ್ಲಿ 60 ಪ್ರಶ್ನೆ ಕೇಳಬೇಕು, ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆ ಇದೆ. ಇಷ್ಟೆಲ್ಲಾ ಸವಾಲು ಎದುರಿಸಿ ಕೆಲಸ ಮಾಡುತ್ತಿದ್ದೇವೆ, ಆದರೆ ಸರ್ಕಾರಕ್ಕೆ ನಮ್ಮ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಗಣತಿಗಾಗಿ ಮನೆಯೊಳಗೆ ಹೋಗುತ್ತಿದ್ದಂತೆ ನಾಯಿಗಳು ದಾಳಿ ಮಾಡಿದವು. ಬೇಲೂರು ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸ್ಥಳೀಯ ಆಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ದಾಳಿ ಮಾಡಿದ ನಾಯಿಗಳನ್ನು ಸ್ಥಳೀಯರು ಹೊಡೆದು ಸಾಯಿಸಿದ್ದಾರೆ ಎಂದು ಹೇಳಲಾಗಿದೆ.
ಬೈಕ್ಗೆ ಅಡ್ಡ ಬಂದ ನಾಯಿ; ಪ್ರಜ್ಞೆ ತಪ್ಪಿದ ಶಿಕ್ಷಕಿ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ವಡ್ಡರಹಳ್ಳಿಯಲ್ಲಿ ಸಮೀಕ್ಷೆಗೆ ತೆರಳುತ್ತಿದ್ದ ಶಿಕ್ಷಕಿ ರಾಧಾ ಅವರ ದ್ವಿಚಕ್ರ ವಾಹನಕ್ಕೆ ನಾಯಿ ಅಡ್ಡ ಬಂದಿದ್ದು, ಅವರು ಅಪಘಾತಕ್ಕೊಳಗಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸ್ಥಳೀಯರು ಅವರನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚಿದ ರೇಬಿಸ್ ಆತಂಕ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ರೇಬಿಸ್ ರೋಗದ ಹಾವಳಿ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕಳೆದ 6 ತಿಂಗಳಲ್ಲಿ ಬೆಂಗಳೂರಿನಲ್ಲಿ 17 ಜನರು, ರಾಜ್ಯದಾದ್ಯಂತ 23 ಜನರು ರೇಬಿಸ್ನಿಂದ ಮೃತಪಟ್ಟಿದ್ದಾರೆ. ಪ್ರಸಕ್ತ ವರ್ಷದ ಜನವರಿಯಿಂದ ಸೆಪ್ಟೆಂಬರ್ ವರೆಗೆ 2,60,514 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಕಳೆದ ಒಂದು ವಾರದಲ್ಲೇ ರಾಜ್ಯಾದ್ಯಂತ 10,242 ಪ್ರಕರಣಗಳು ವರದಿಯಾಗಿವೆ.